ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭಿಸುವ ಕುರಿತು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ: ಸಚಿವ ಸುರೇಶ್‌ ಕುಮಾರ್

Last Updated 23 ಜನವರಿ 2021, 12:15 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಶಾಲಾ, ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕೆಂಬ ಕೂಗು ಬಲವಾಗಿದ್ದು, ಆರೋಗ್ಯ ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ‌ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ತರಗತಿಗಳನ್ನು ಈಗಿರುವ ಅರ್ಧ ದಿನದ ಬದಲು ದಿನವೀಡಿ ಆರಂಭಿಸಿ, ಬಳಿಕ ಹಂತ ಹಂತವಾಗಿ ಉಳಿದ ತರಗತಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಕೋವಿಡ್‌ ಹಿನ್ನೆಲೆಯಲ್ಲಿ ಶಾಲೆಗಳು ನಡೆಯದ ಕಾರಣ ರಾಜ್ಯದಲ್ಲಿ ಬಾಲ ಕಾರ್ಮಿಕರ ಹಾಗೂ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿವೆ ಎಂದು ಹೇಳಿದರು.

ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ದಾಖಲಾಗಿದ್ದು, ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಅಗತ್ಯಕ್ರಮ ಕೈಗೊಳ್ಳಲಾಗುವದು ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿದ್ದರಿಂದ ಗ್ರಾಮೀಣ ಮಕ್ಕಳಿಗೆ ಹೆಚ್ಚಿನ ಅನುಕೂಲಗಳಾಗಿವೆ. ಶೇ 70ಕ್ಕೂ ಅಧಿಕ ಮಕ್ಕಳ ಹಾಜರಾತಿ ಕಂಡು ಬಂದಿದೆ. ನಗರ ಪ್ರದೇಶದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ, ಪರ್ಯಾಯ ಶಿಕ್ಷಣ ಸಿಕ್ಕಂತೆ ಗ್ರಾಮೀಣರಿಗೆ ಸಿಗುತ್ತಿರಲಿಲ್ಲ. ಮನೆಯಲ್ಲಿ ಪಾಠ ಹೇಳಿ ಕೊಡುವವರೂ ಇರುತ್ತಿರಲಿಲ್ಲ ಎಂದರು.

ಜುಲೈ 1 ರಿಂದ 2021-22ನೇ ಶೈಕ್ಷಣಿಕ ಸಾಲು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಶೀಘ್ರ ಬಿಇಒ ಕಚೇರಿ: ನೂತನ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಕಾರಿಗಳ ಕಾರ್ಯಾಲಯ ಆರಂಭಿಸಲು ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಅನುದಾನಿತ ಶಾಲೆಗಳಲ್ಲಿ ನಿವೃತ್ತಿ ಹಾಗೂ ಮರಣ ಹೊಂದಿದ ಶಿಕ್ಷಕರ ಸ್ಥಾನಗಳಿಗೆ ಭರ್ತಿ ಮಾಡಲು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದರು.

ಶಿಕ್ಷಕರ ವರ್ಗಾವಣೆಯಲ್ಲಿ ಪ್ರಕಟಗೊಂಡಿರುವ ಕಡ್ಡಾಯ ವರ್ಗಾವಣೆ ಶಿಕ್ಷಕರಿಗೆ ಆದ್ಯತೆ ನೀಡಿದ ನಿಯಮಕ್ಕೆ ಕೆಎಟಿ ತಡೆ ನೀಡಿದ್ದು ಆದರೆ ಹೊಸ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆಗೆ ತಡೆಯಾಜ್ಞೆ ನೀಡಿಲ್ಲ ಎಂದು ಹೇಳಿದರು.

ತಡೆಯಾಜ್ಞೆ ಕುರಿತು ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಜತೆ ಚರ್ಚಿಸಿದ್ದು ಕೆಎಟಿಗೆ ಪ್ರಕರಣ ತ್ವರಿತಗತಿಯಲ್ಲಿ ವಿಚಾರಣೆ ಮಾಡುವಂತೆ ಮನವಿ‌ ಮಾಡಲಾಗಿದೆ. ಶೀಘ್ರವೇ ತಡೆಯಾಜ್ಞೆ ತೆರವುಗೊಳ್ಳಲಿದೆ ಎಂದು ತಿಳಿಸಿದರು.

ಶಿಕ್ಷಕರು ಕಷ್ಟಪಟ್ಟು ಶಾಲೆ ಕಲಿಸುವ ಬದಲು ಇಷ್ಟಪಟ್ಟು ಶಾಲೆ ಕಲಿಸುವಂತಾಗಲು ಅವರವರ ಜಿಲ್ಲೆಗೆ ಒಮ್ಮೆ ವರ್ಗಾವಣೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT