ಬುಧವಾರ, ಜನವರಿ 19, 2022
18 °C
ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅಭಿಮತ

ವಿಧಾನ ಪರಿಷತ್‌ ಚುನಾವಣೆ: 'ಗ್ರಾಮ ಪಂಚಾಯತ್ ಸದಸ್ಯರ ಹಕ್ಕು ರಕ್ಷಣೆಗೆ ಸ್ಪರ್ಧೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಸದಸ್ಯರ ಸ್ವಾಭಿಮಾನ, ಗೌರವ ಕಾಪಾಡುವ ಹಾಗೂ ಅವರ ಮತದಾನದ ಹಕ್ಕಿನ ರಕ್ಷಣೆಗಾಗಿ  ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಸದಸ್ಯರ ಸಂವಿಧಾನ ದತ್ತ ಮತದಾನದ ಹಕ್ಕನ್ನು ಮೊಟಕುಗೊಳಿಸಿ ಕಾಂಗ್ರೆಸ್‌, ಬಿಜೆಪಿ ಒಂದೊಂದು ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆಗೆ ಹುನ್ನಾರ ನಡೆಸಿದ್ದವು. ಅವಿರೋಧ ಆಯ್ಕೆ ನಡೆದರೆ ನಮ್ಮ ಸ್ಥಾನದ ಗೌರವ ಕಳೆದುಕೊಳ್ಳುತ್ತೇವೆ. ಈ ಕಾರಣಕ್ಕೆ ನೀವು ನಮ್ಮೆಲ್ಲರ ಪ್ರತಿನಿಧಿಯಾಗಿ ಸ್ಪರ್ಧಿಸಬೇಕು. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನಿಮಗೆ ನೀಡುತ್ತೇವೆ ಎಂದು ಭರವಸೆ ನೀಡಿದ ಮೇರೆಗೆ ಸ್ಪರ್ಧಿಸಿರುವೆ ಎಂದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನನಗೆ ಫೋನ್‌ ಮಾಡಿ ಕಾಂಗ್ರೆಸ್‌ನಲ್ಲಿ ನಿಮಗೆ ಅವಕಾಶ ಸಿಗದಿದ್ದರೇನಂತೆ ಬಿಜೆಪಿಯಲ್ಲಿ ಅವಕಾಶ ನೀಡುತ್ತೇವೆ. ಕಣದಿಂದ ಹಿಂದೆ ಸರಿಯುವಂತೆ ಕೋರಿದರು. ಆದರೂ ಸಹ ನಾನು ಉಮೇದುವಾರಿಕೆ ಹಿಂಪಡೆಯಲಿಲ್ಲ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೂ ಫೋನ್‌ ಮಾಡಿ, ಆರ್ಥಿಕ ನಷ್ಠವಾಗುತ್ತದೆ, ಸ್ಪರ್ಧೆಯಿಂದ ಹಿಂದೆ ಸರಿ ಎಂದು ಒತ್ತಾಯಿಸಿದರು. ಆದರೆ, ಅವರ ಮಾತಿಗೂ ಮಣಿಯದೇ ಸ್ಪರ್ಧಿಸಿರುವೆ ಎಂದರು.

ಎರಡೂ ಪಕ್ಷಗಳು ಒಡ್ಡಿದ ಆಸೆ, ಆಮಿಷಗಳಿಗೆ ಒಳಗಾಗದೇ ಸ್ಪರ್ಧಿಸಿದ್ದೇನೆ. ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಅಖಂಡ ವಿಜಯಪುರ ಜಿಲ್ಲಾ ಪಂಚಾಯ್ತಿ ಅಸ್ವಿತ್ವವಿದ್ದ ಸಂದರ್ಭದಲ್ಲಿ ನಾಗಠಾಣ ಕ್ಷೇತ್ರದಿಂದ ಜಯಗಳಿಸಿ, ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವೆ. ಎರಡೂ ಜಿಲ್ಲೆಯ ಸಂಪರ್ಕ, ಬೆಂಬಲ ಅಗಾಧವಿದೆ ಎಂದು ತಿಳಿಸಿದರು.

ನಾನು ಆಯ್ಕೆಯಾದರೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರ ಗೌರವ ಧನ ಹೆಚ್ಚಳ, ಬಸ್‌ ಪಾಸ್‌ ಸೌಲಭ್ಯ, ಆರೋಗ್ಯ ಯೋಜನೆ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುವೆ ಎಂದು ಭರವಸೆ ನೀಡಿದರು.

ಮುಖಂಡರಾದ ಭೀರಪ್ಪ ಪೂಜಾರಿ, ಎಂ.ಎಸ್‌.ಪಠಾಣ, ರಾಜುಗೌಡ ಪಾಟೀಲ, ಜಾಕೀರ್‌ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಎಸ್‌ಆರ್‌ ಕಡೆಗಣನೆಗೆ ನೋವಿದೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ, ಹಿರಿಯ ರಾಜಕಾರಣಿ ಎಸ್‌.ಆರ್‌.ಪಾಟೀಲ ಅವರನ್ನು ಬಿಟ್ಟು ಬೇರೆಯವರಿಗೆ ಕೊಡುವುದಿಲ್ಲ ಎಂದು  ಹೇಳಿದ್ದರು. ಆದರೆ, ಅವರನ್ನು ಕಡೆಗಣಿಸಿ ಹಣಬಲ ಇರುವವರಿಗೆ, ಕುಟುಂಬ ರಾಜಕಾರಣ ಮಾಡುವವರಿಗೆ ಕಾಂಗ್ರೆಸ್‌ ಮುಖಂಡರು ಟಿಕೆಟ್‌ ನೀಡಿದ ಕಾರಣಕ್ಕೆ ಆ ನೋವಿನಿಂದ ನಾನು ಸ್ಪರ್ಧಿಸಿದ್ದೇನೆ ಎಂದು ಮಲ್ಲಿಕಾರ್ಜುನ ಲೋಣಿ ಹೇಳಿದರು. 

ಜಿಲ್ಲಾ, ತಾಲ್ಲೂಕು ಅಥವಾ ಗ್ರಾಮ ಪಂಚಾಯ್ತಿಯನ್ನು ಪ್ರತಿನಿಧಿಸಿದವರಿಗೆ ಸಾಮಾಜಿಕ ನ್ಯಾಯದ ಅಡಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದೇ ರೊಕ್ಕ ಇರುವವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ, ಶಾಸಕರಾದ ಎಂ.ಬಿ.ಪಾಟೀಲ ಅವರ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ರಾಜಕೀಯವಾಗಿ ಅವರು ಬಹಳಷ್ಟು ಬೆಳೆದಿದ್ದಾರೆ. ಇದೀಗ ಅವರ ಜೊತೆ ನನ್ನನ್ನು ವಿಧಾನ ಪರಿಷತ್‌ಗೆ ಜಗ್ಗಿಕೊಂಡು ಹೋಗಲಿ ಎಂದು ಮನವಿ ಮಾಡಿದರು.

***

ಬೆದರಿಕೆ:ರಕ್ಷಣೆಗೆ ಮೊರೆ

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ವೈಯಕ್ತಿಕ ವಿಷಯ ಇಟ್ಟುಕೊಂಡು ನೈತಿಕವಾಗಿ ತಲೆ ಎತ್ತದಂತೆ ಮಾಡುತ್ತೇವೆ ಎಂದು ಫೋನ್‌ ಮಾಡಿ ಬೆದರಿಸುತ್ತಿದ್ದಾರೆ. ಈ ಸಂಬಂಧ ನನಗೆ ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ಲೋಣಿ ಹೇಳಿದರು.

***

ವಿಧಾನ ಪರಿಷತ್‌ ಚುನಾವಣೆ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ನಲ್ಲೂ ಅನೇಕರಿಗೆ ಅಸಮಾಧಾನವಿದೆ. ಅವರೆಲ್ಲರೂ ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿದ್ದಾರೆ 

–ಮಲ್ಲಿಕಾರ್ಜುನ ಲೋಣಿ, ಪಕ್ಷೇತರ ಅಭ್ಯರ್ಥಿ, ವಿಧಾನ ಪರಿಷತ್‌  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು