ಗುರುವಾರ , ಡಿಸೆಂಬರ್ 3, 2020
23 °C
ವಿಜಯಪುರ ಜಿಲ್ಲೆಯ ವಿವಿಧೆಡೆ ಮಕ್ಕಳ ದಿನಾಚರಣೆ ಸಂಭ್ರಮ

ಆಧುನಿಕ ಭಾರತದ ಶಿಲ್ಪಿ ನೆಹರು: ಶರಣು ಮಸಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಮಾಜವಾದ ತತ್ವದಡಿ ಆಧುನಿಕ ಭಾರತ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಧ್ಯಕ್ಷ ಶರಣು ಮಸಳಿ ಹೇಳಿದರು.

ನಾಗಠಾಣದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ಸಂತೋಷ ಬಂಡೆ, ಭಾರತಕ್ಕೆ ಸಹಬಾಳ್ವೆಯ ಪರಂಪರೆಯನ್ನು ನೀಡಿ, ದೂರದೃಷ್ಟಿಯ ವಿಚಾರಗಳಿಂದ ನವ ಭಾರತದ ಸೃಷ್ಟಿಯಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಸಿಆರ್‌ಪಿ ಈರಣ್ಣ ಬಂಡೆ, ಈರಣ್ಣ ಹುಣಶ್ಯಾಳ, ಪ್ರಭು ಹಂಡಿ, ಅನಿಲ ಅಂಕದ, ಉಪನ್ಯಾಸಕ ಶ್ರೀಧರ ಬಂಡೆ ಇದ್ದರು.

ಎಸಿಟಿ-ಶಾರದಾ ಪಬ್ಲಿಕ್ ಶಾಲೆ: ‘ಮಕ್ಕಳು ರಾಷ್ಟ್ರದ ಬೆನ್ನೆಲುಬು; ಮಕ್ಕಳ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಮಕ್ಕಳು ಸಚ್ಚಾರಿತ್ರ್ಯದ ಆದರ್ಶ ಗುಣಗಳನ್ನು ರೂಢಿಸಿಕೊಂಡು ದೇಶಕ್ಕೆ ಕೀರ್ತಿ ತರುವಂಥ ಸಾಧಕರಾಗಬೇಕು’ ಎಂದು ಎಸಿಟಿ-ಶಾರದಾ ಪಬ್ಲಿಕ್ ಶಾಲೆ ಉಪಪ್ರಾಚಾರ್ಯ ಮಹೇಂದ್ರ ಎಂ.ಎನ್. ಹೇಳಿದರು.

ಎಸಿಟಿ-ಶಾರದಾ ಪಬ್ಲಿಕ್ ಶಾಲೆಯಲ್ಲಿ ಪಂಡಿತ್‌ ಜವಾಹರಲಾಲ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಜಿಮೇಶ್ ಪೌಲ್,  ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶ್ರೇಷ್ಠ ಗುರಿಗಳನ್ನು ಹೊಂದುವ ಮತ್ತು ಸುಭದ್ರ ಜೀವನ ನೆಲೆಯನ್ನು ಕಂಡುಕೊಳ್ಳುವ ಆದರ್ಶ ತತ್ವಗಳನ್ನು ಶಿಕ್ಷಣವು ಕಲಿಸಿಕೊಡುತ್ತದೆ ಎಂದರು.

ಶಿಕ್ಷಕ ಮುತ್ತುರಾಜ ಸಂಕಣ್ಣವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ರೂಪಕ, ನೃತ್ಯ, ಗಾಯನ, ಭಾಷಣ ಕಾರ್ಯಕ್ರಮ ನಡೆಯಿತು. ಆಶಾರಾಣಿ ಪಾಟೀಲ ಇದ್ದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ:  ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ನಗರ ಬಾಲಕಿರಣ ಮಕ್ಕಳ ಸಂಘಗಳ ಒಕ್ಕೂಟದಿಂದ ನಗರದ ವಿವಿಧ ಕೊಳೆಗೇರಿಗಳಲ್ಲಿ ಮಕ್ಕಳ ದಿನ ಆಚರಿಸಲಾಯಿತು.

ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಆಶುಭಾಷಣ, ರಸಪ್ರಸ್ನೆ ಸ್ಪರ್ಧೆ, ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಜವಾಹರಲಾಲ ನೆಹರು ಅವರ ತತ್ವಸಿದ್ದಾಂತಗಳನ್ನು ಮಕ್ಕಳಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಲಾಯಿತು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೆಹರು ನೀಡಿರುವ ಕೊಡುಗೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.

ಶಾಂತಿನಿಕೇತನ ಇಂಟರ್‌ ನ್ಯಾಷನಲ್‌ ಸ್ಕೂಲ್: ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ  ಆಚರಿಸಲಾಗುತ್ತದೆ ಎಂದು ಶಾಂತಿನಿಕೇತನ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಪ್ರಾಂಶುಪಾಲ ಚಂದನಗೌಡ ಮಾಲಿಪಾಟೀಲ ಹೇಳಿದರು.

ಶಾಂತಿನಿಕೇತನ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಕ್ಕಳ ದಿನಚರಣೆಯ ಅಂಗವಾಗಿ ಮಕ್ಕಳಿಗೆ ಶುಭಾಷಯ ಪತ್ರ ರಚನೆ ಮಾಡುವ ಸ್ಪರ್ಧೆ, ಚಿತ್ರಕಲೆ, ಶುದ್ಧ ಬರಹ, ಕವನ ವಾಚನ, ಕಥೆ ಹೇಳುವ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಭರತ ಬಿರಾದಾರ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.  

ಶಾಂತಿನಿಕೇತನ ಶಿಕ್ಷಣ ಸಂಸ್ಥೆ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಜವಾಹರಲಾಲ ನೆಹರು ಅವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನ ಆಚರಿಸಲಾಯಿತು.

ಶಿಕ್ಷಕರಾದ ಎ.ಎಚ್.ಸಗರ, ಪ್ರವೀಣಕುಮಾರ ಗೆಣ್ಣೂರ, ಶ್ರೀದೇವಿ ಜೋಳದ, ಸರೋಜಾ ಕರಕಳ್ಳಿ, ಸೀಮಾ ಸದಲಗಾ, ಶೋಭಾ ಕೂಡಗಿ ಇದ್ದರು.

ಕಾಂಗ್ರೆಸ್‌ ಕಾರ್ಯಾಲಯ: ನೆಹರು ಸ್ಮರಣೆ
ವಿಜಯಪುರ: ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ ನೆಹರು ಅವರ ಜನ್ಮ ದಿನವನ್ನು ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ರಾಜು ಆಲಗೂರ, ದೇಶದ ಅಖಂಡತೆ, ಸಾರ್ವಭೌಮತ್ವವನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದ ಬೃಹತ್‌ ರಾಷ್ಟ್ರವನ್ನು ಮನ್ನೆಡೆಸಿದ ಕೀರ್ತಿ ನೆಹರೂಗೆ ಸಲ್ಲುತ್ತದೆ ಎಂದರು.‌

ಮುಖಂಡರಾ ಅಬ್ದುಲ್‌ ಹಮೀದ್‌ ಮುಶ್ರೀಫ್‌‌, ಎಸ್.ಎಂ.ಪಾಟೀಲ ಗಣಿಹಾರ, ಜಮೀರ್‌ ಬಕ್ಷಿ, ಆರತಿ ಶಹಾಪೂರ, ಸಾಹೇಬಗೌಡ ಬಿರಾದಾರ, ಅಬ್ದುಲ್‌ ಖಾದರ್‌ ಖಾದೀಮ, ಎಸ್.ಎಂ.ದುಂಡಸಿ, ಡಿ.ಎಚ್.ಕಲಾಲ, ವಸಂತ ಹೊನಮೊಡೆ, ಪ್ರಕಾಶ ಕಟ್ಟಿಮನಿ, ತಾಜುದ್ದೀನ್‌ ಖಲೀಪ, ಆಶೀಮಾ ಕಾಲೇಬಾಗ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು