ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಟಿಕೆಟ್‌ | ಪಕ್ಷದ ನಿರ್ಣಯಕ್ಕೆ ಬದ್ಧ: ಸಂಸದ ರಮೇಶ ಜಿಗಜಿಣಗಿ

‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಗೆ ಚಾಲನೆ ನೀಡಿದ ಸಂಸದ ಜಿಗಜಿಣಗಿ
Published 12 ಮಾರ್ಚ್ 2024, 13:52 IST
Last Updated 12 ಮಾರ್ಚ್ 2024, 13:52 IST
ಅಕ್ಷರ ಗಾತ್ರ

ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ಟಿಕೆಟ್‌ ನೀಡುವ ವಿಷಯವಾಗಿ ಪಕ್ಷದ ನಿರ್ಣಯಕ್ಕೆ ಬದ್ಧನಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕಸಭೆ ಅಧಿವೇಶನದಲ್ಲಿ ಜಿಲ್ಲೆಯ ಅಭಿವೃದ್ಧಿ ವಿಷಯವಾಗಿ ಒಂದೂ ಪ್ರಶ್ನೆ ಕೇಳಿಲ್ಲ ಎಂದು ಅನೇಕರು ನನ್ನನ್ನು ಟೀಕಿಸಿದ್ದಾರೆ. ಆದರೆ, ನನ್ನ ಬೇಡಿಕೆ ಪತ್ರಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರುವಾಗ ನಾನೇಕೆ ಪ್ರಶ್ನೆ ಕೇಳಬೇಕು’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ‘ಜಿಗಜಿಣಗಿ ಅವರಿಗೆ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಕೆಲವರಿಗೆ ಆತಂಕ ಆಗಿದ್ದರೆ, ಕೆಲವರು ನಮಗೆ ಏನಾದರೂ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ನೀವು ಮಾಡಿರುವ ಕಾರ್ಯವೇ ನಿಮಗೆ ಶ್ರೀರಕ್ಷೆಯಾಗಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೆಯನ್ನು ಜನರ ರೈಲ್ವೆ ಆಗಿಸಿದ್ದಾರೆ. ರೈಲ್ವೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ. ರೈಲುಗಳ ಒಳಗಿನ ವಾತಾವರಣ ಸ್ಟಾರ್ ಹೋಟೆಲ್‌ಗಳನ್ನು ಮೀರಿಸುವಂತಿದೆ. ಜಗತ್ತಿನ ಅತಿ ದೊಡ್ಡ ಶೌಚಾಲಯ ಎಂಬ ಅಪಕೀರ್ತಿಗೆ ಒಳಗಾಗಿದ್ದ ರೈಲ್ವೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ’ ಎಂದರು.

‘ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ದೇಶದ ವಿವಿಧ ರೈಲು ನಿಲ್ದಾಣಗಳಲ್ಲಿ 785 ಮಳಿಗೆಗಳನ್ನು ಆರಂಭಿಸಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ‘ರಮೇಶ ಜಿಗಜಿಣಗಿ ಅವರ ಹೆಸರು ಕೆಡಿಸುವ ಕೆಲಸ ಕೆಲವರು ಸಾಮಾಜಿಕ ಜಾಲತಾಣದಲ್ಲಿ‌ ನಡೆಸಿರುವುದು ವಿಷಾದನೀಯ. ಜಿಗಜಿಣಗಿ ಅವರ ಆರೋಗ್ಯ ಸರಿಯಿಲ್ಲ ಎಂಬುವವರ ಮಾನಸಿಕ ಆರೋಗ್ಯ ಸರಿಯಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಪ್ರಕಾಶ ಅಕ್ಕಲಕೋಟ, ಉಮೇಶ ಕಾರಜೋಳ, ವಿಜಯ್‌ ಜೋಶಿ, ರೈಲ್ವೆ ಅಧಿಕಾರಿಗಳಾದ ಜೀಬು ಜಾಕಬ್, ವಿನಾಯಕ, ಚಂದನ ಕುಮಾರ್ ಇದ್ದರು.

ಯಾರಿಗೂ ಸಾಧ್ಯವಾಗದ ರಾಮಮಂದಿರವನ್ನು ಮೋದಿ ನಿರ್ಮಾಣ ಮಾಡಿ ತೋರಿಸಿದ್ದಾರೆ. ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅವರು ಮೂರನೇ ಬಾರಿ ದೇಶದ ಪ್ರಧಾನಿ ಆಗುವುದು ನಿಶ್ಚಿತ 
ರಮೇಶ ಜಿಗಜಿಣಗಿ ಸಂಸದ

‘ಜಿಗಜಿಣಗಿಗೆ ಟಿಕೆಟ್‌ ವಿಶ್ವಾಸ’

ವಿಜಯಪುರ: ‘ಈ ಬಾರಿಯೂ ಲೋಕಸಭೆ ಬಿಜೆಪಿ ಟಿಕೆಟ್‌ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಿಗಲಿದೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿದೆ. ಆದರೆ ಕೆಲವರು ಜಿಗಜಿಣಗಿ ಅವರ ಆರೋಗ್ಯ ಸರಿಯಿಲ್ಲ ಟಿಕೆಟ್‌ ಸಿಗಲ್ಲ ಎಂದು ಸುಳ್ಳುಸುದ್ದಿ ಊಹಾಪೋಹ ಹರಡಿಸುತ್ತಿದ್ದು ಅವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ’ ಎಂದು ಬಿಜೆಪಿ ಮುಖಂಡ ಜಿ.ವೈ. ಗೊರನಾಳ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಗಜಿಣಗಿ ಅವರು ಸದೃಢವಾಗಿ ಆರೋಗ್ಯದಿಂದ ಇದ್ದಾರೆ. ಅವರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ಸಿಗಲಿದೆ. ಜಿಲ್ಲೆಯ ಜನತೆ ಈ ಬಾರಿಯೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲಿದ್ದಾರೆ’ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪ ಸಾಹುಕಾರ ಖೈನೂರ ಮುಖಂಡರಾದ ಬಾಲಚಂದ್ರ ವಾಲಿ ಅರವಿಂದ ಗಿಳಘಂಟಿ ಬಸವರಾಜ ಹತ್ತಿ ನಾಗುಗೌಡಾ ಪಾಟೀಲ ಪ್ರಕಾಶ ಮುಂಜಿ ಚನ್ನಬಸು ಮಸಳಿ ಶೇಕು ಲೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT