ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕಿಸುವವರಿಗೆ ನನ್ನ ಕೆಲಸಗಳೇ ಉತ್ತರ: ನಡಹಳ್ಳಿ

ತಾಳಿಕೋಟೆ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Last Updated 24 ಮಾರ್ಚ್ 2023, 10:56 IST
ಅಕ್ಷರ ಗಾತ್ರ

ತಾಳಿಕೋಟೆ: ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲು, ಉತ್ತರ ಕೊಡಲು ನನ್ನ ಕ್ಷೇತ್ರದ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿಲ್ಲ. ಕಾರಣವಿಲ್ಲದೆ ಹೊಟ್ಟೆಕಿಚ್ಚಿನಿಂದ ಟೀಕಿಸುವವರಿಗೆ ನಾನು ಮಾಡಿದ ಕೆಲಸಗಳೇ ಉತ್ತರ ಕೊಡುತ್ತವೆ, ನನ್ನನ್ನು ನಂಬಿದ ಜನತೆಯ ಬದುಕು ಕಟ್ಟಿಕೊಡುವುದೊಂದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದಲ್ಲಿ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು ₹ 3500 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದೇನೆ ಎಂದರು.

ತಾಳಿಕೋಟೆ ಪಟ್ಟಣವನ್ನು ಒಂದು ಸುಂದರ, ಸ್ವಚ್ಛ ಹಾಗೂ ಹಸಿರಿನಿಂದ ಕಂಗೊಳಿಸುವ ನಗರವನ್ನಾಗಿ ಮಾಡಲು ₹ 40 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ತಿಳಿಸಿದರು.

ಅಭಿವೃದ್ಧಿಯ ಕಾರ್ಯಗಳಲ್ಲಿ ನಾನೆಂದೂ ಜಾತಿರಾಜಕಾರಣ ಮಾಡಿಲ್ಲ. ಎಲ್ಲ ವರ್ಗದ ಜನರ ಹಿತ ಕಾಪಾಡುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಲಸ ಮಾಡಿ ಎಂದು ನನ್ನ ಬಳಿ ಬಂದವರೆಲ್ಲರ ಕೆಲಸ ನಾನು ಮಾಡಿದ್ದೇನೆ. ಅವರು ಯಾವ ಜಾತಿಗೆ ಸೇರಿದವರೆಂದು ನಾನೆಂದೂ ನೋಡಿಲ್ಲ ಎಂದರು.

ಮಾಜಿ ಶಾಸಕರು ಮಾಡಿದ ಕೆಲಸಗಳಿಗೆ ನಾನು ಲೇಬಲ್ ಹಚ್ಚಿ ನಾನು ಮಾಡಿದ್ದೇನೆಂದು ಹೇಳುತ್ತೇನೆಂದು ಆರೋಪಿಸಿದ್ದಾರೆ. ಅಂತಹ ಕೆಟ್ಟ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳ ಒಂದು ಕಿರುಹೊತ್ತಿಗೆಯನ್ನೇ ಹೊರತಂದಿದ್ದೇನೆ. ಅದರಲ್ಲಿ ಎಲ್ಲವೂ ಇದೆ. ನೀವೇ ನೋಡಿಕೊಳ್ಳಿ ಸಾಕ್ಷ್ಯಗಳ ಆಧಾರದಲ್ಲಿ ಮಾತನಾಡಿ ಬಾಯಿ ಚಪಲಕ್ಕಾಗಿ ಅಲ್ಲ, ಈ ಬಾರಿಯು ನನ್ನ ಗೆಲವು ಖಚಿತ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮುಖಂಡ ಖಾಜಾಹುಸೇನ ಡೋಣಿ ಮಾತನಾಡಿ, ಶಾಸಕ ನಡಹಳ್ಳಿ ನುಡಿದಂತೆ ನಡೆಯುವ ವ್ಯಕ್ತಿ. ಅಭಿವೃದ್ಧಿಯ ವಿಷಯದಲ್ಲಿ ಅವರೆಂದೂ ಜಾತೀಯತೆ ಮಾಡಿದವರಲ್ಲ ನಾವು ಅನುದಾನ ಕೊಡಿ ಎಂದು ಕೇಳದಿದ್ದರೂ ನಮಗೆ ಅನುದಾನ ಕೊಟ್ಟಿದ್ದಾರೆ ಮಾತ್ರವಲ್ಲ, ನಮ್ಮ ಸಮಾಜದ ಹಲವಾರು ಬಡ ಜನರಿಗೆ ಸಹಾಯವನ್ನೂ ಮಾಡಿದ್ದಾರೆ ಎಂದರು.

ಕೇವಲ ಜನ ಸೇವೆ ಮಾಡಲಿಕ್ಕಾಗಿ ರಾಜಕಾರಣಕ್ಕೆ ನಡಹಳ್ಳಿ ಬಂದಿದ್ದಾರೆ. ಅವರ ಪಕ್ಷವನ್ನು ನೋಡದೆ ಅವರನ್ನು ನೋಡಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು

ಈದ್ಗಾ ಕಮಿಟಿ ಉಪಾಧ್ಯಕ್ಷ ಅಬ್ದುಲ್‌ ರಜಾಕ್‌ ಮನಗೂಳಿ, ಧಾರ್ಮಿಕ ಮುಖಂಡ ಸೈಯದ್‌ ಶಕೀಲಅಹ್ಮದ ಖಾಜಿ ಮಾತನಾಡಿದರು.

ಈದ್ಗಾ ಸಮಿತಿ ಅಧ್ಯಕ್ಷ ಮಾಸೂಸಾಬ ಕಂಭಾವಿ ಕಾರ್ಯದರ್ಶಿ ಎ.ಡಿ.ಯಕೀನ, ಜಿ.ಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ, ಮಹಬೂಬ ಲಾಹೋರಿ ಮಂಜೂರ ಅಹ್ಮದ್ ಬೇಪಾರಿ, ಈದ್ಗಾ ಸಮಿತಿ ಸದಸ್ಯರಾದ ಗನಿಸಾಬ ಲಾಹೋರಿ, ಹಸನ್ ಕೊರ್ಕಿ, ಅಬ್ಬಾಸ ನಿಡಗುಂದಿ, ಸಿಕಂದರಸಾಬ ವಠಾರ, ಮುರ್ತುಜಾ ಮೇತ್ರಿ, ಗಣ್ಯರಾದ ಮಹಬೂಬಸಾಬ ಮುದ್ನಾಳ, ಖಾಜಾಹುಸೇನ ಮುಲ್ಲಾ, ರಫೀಕ್ ಬೇಪಾರಿ, ಸನಾ ಕೆಂಭಾವಿ, ಬಿಜಾನಲಿ ನೀರಲಗಿ, ಖಾಸೀಮ ಅವಟಿ, ಹಸನ್ ಮನಗೂಳಿ, ಇಬ್ರಾಹಿಂ ಬೇಪಾರಿ ಇದ್ದರು.

***

ನಾನು ನಾಯಕರನ್ನು ನಂಬಿ ರಾಜಕೀಯ ಮಾಡಿದವನಲ್ಲ. ಪ್ರಜೆಗಳನ್ನ, ಬಡವರನ್ನ ನಂಬಿ ರಾಜಕೀಯ ಮಾಡುತ್ತೇನೆ. ಮುಖಂಡರು ದ್ರೋಹ ಮಾಡಬಹುದು, ಜನರು ದ್ರೋಹ ಮಾಡಲ್ಲ

– ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT