ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ ಬಸ್ ನಿಲ್ದಾಣಕ್ಕೆ ನಾಮಕರಣ; ಹುಸಿಯಾದ ಭರವಸೆ

Published 20 ಮೇ 2024, 5:30 IST
Last Updated 20 ಮೇ 2024, 5:30 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷರಾಗಿದ್ದ ಚೆನ್ನವೀರ ಸ್ವಾಮೀಜಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪಟ್ಟಣದ ಹೃದಯ ಭಾಗದಲ್ಲಿದ್ದ ಮಠದ ಜಮೀನು ಬಸ್ ನಿಲ್ದಾಣಕ್ಕೆಂದೇ ದಾನವಾಗಿ ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ ಶ್ರೀಗಳ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

ನಿಲ್ದಾಣಕ್ಕೆ ಚೆನ್ನವೀರ ಸ್ವಾಮೀಜಿ ಹೆಸರು ನಾಮಕರಣ ಮಾಡುವಂತೆ 2013ರ ಸೆಪ್ಟೆಂಬರ್ 28 ರಂದು ಸಿಂದಗಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಅಂದಿನ ಮತ್ತು ಇಂದಿನ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಸಾರ್ವಜನಿಕರು ಮನವಿ ಕೊಟ್ಟಿದ್ದರು. ಸಚಿವದ್ವಯರು ಶ್ರೀಗಳ ಹೆಸರು ಇಡುವುದಾಗಿ ಭರವಸೆ ನೀಡಿದ್ದರು.

ಬಸ್ ನಿಲ್ದಾಣ ಉದ್ಘಾಟನೆಗೊಂಡು 11 ವರ್ಷಗಳೇ ಗತಿಸಿದರೂ ಬಸ್ ನಿಲ್ದಾಣಕ್ಕೆ ಸ್ವಾಮೀಜಿ ಹೆಸರು ನಾಮಕರಣ ಆಗಿಲ್ಲ. ಸಚಿವರ ಭರವಸೆ ಹುಸಿಯಾಗಿದೆ ಎಂದು ಸದ್ಭಕ್ತರು ವಿಷಾದ ವ್ಯಕ್ತಪಡಿಸಿದ್ದಾರೆ.

ಅದಾದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೂ 2019 ಅಕ್ಟೋಬರ್ 12 ರಂದು ಸದ್ಭಕರು ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ನಂತರದಲ್ಲಿ ಸಿಂದಗಿಯವರೇ ಆದ ಅಂದಿನ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿಯವರಿಗೂ ಒತ್ತಾಯದ ಮನವಿ ಸಲ್ಲಿಸಲಾಗಿತ್ತು.

ಮೆಟ್ರೋ ಸ್ಟೇಷನ್, ಬಸ್ ನಿಲ್ದಾಣಗಳಿಗೆ ಅಲ್ಲಲ್ಲಿ ಮಹಾತ್ಮರ ಹೆಸರು ಇಡಲಾಗಿದೆ. ಅದೇ ರೀತಿ ತ್ಯಾಗಜೀವಿ, ಕಾಯಕಯೋಗಿ ಲಿಂಗೈಕ್ಯ ಚೆನ್ನವೀರ ಸ್ವಾಮೀಜಿ ಹೆಸರನ್ನು ಸಿಂದಗಿ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವ ಕುರಿತು ಸಧ್ಯದ ಸರ್ಕಾರ ಕೂಡಲೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಶ್ರೀಮಠದ ಸದ್ಭಕ್ತರಾದ ಗಂಗಾಧರ ಜೋಗೂರ, ಅಶೋಕ ಮಸಳಿ, ನಿಹಾಲಚಂದ ಪೋರವಾಲ, ಬಿ.ಜಿ.ಮಠ, ಎಂ.ಬಿ.ಹಿರೇಮಠ ಒಳಗೊಂಡಂತೆ ಹಲವಾರು ಜನ ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಲಿಂಗೈಕ್ಯ ಚೆನ್ನವೀರ ಸ್ವಾಮೀಜಿ ಸಾರಂಗಮಠ
ಲಿಂಗೈಕ್ಯ ಚೆನ್ನವೀರ ಸ್ವಾಮೀಜಿ ಸಾರಂಗಮಠ
ಸಿಂದಗಿ ಬಸ್ ನಿಲ್ದಾಣಕ್ಕೆ ಕಾಯಕಯೋಗಿ ಚೆನ್ನವೀರ ಸ್ವಾಮೀಜಿ ಹೆಸರು ಇಡುವುದು ಸೂಕ್ತವಾಗಿದೆ. ಈ ಕುರಿತು ಶೀಘ್ರದಲ್ಲಿ ಸಭೆ ಕರೆದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಾರಿಗೆ ಸಚಿವರ ಬಳಿ ನಿಯೋಗ ಹೋಗಲಾಗುವುದು
ಅಶೋಕ ಮನಗೂಳಿ ಶಾಸಕ ಸಿಂದಗಿ 
ನಾನು ಶಾಸಕನಿದ್ದಾಗ ಸಿಂದಗಿ ಹೊಸ ಬಸ್ ನಿಲ್ದಾಣದ ಉದ್ಘಾಟನೆ ದಿನ ಸಾರ್ವಜನಿಕರ ಒತ್ತಾಯದ ಮೇರೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಚಿವ ಎಂ.ಬಿ.ಪಾಟೀಲ ಅವರು ನಿಲ್ದಾಣಕ್ಕೆ ಸ್ವಾಮೀಜಿ ಹೆಸರು ಇಡುವುದಾಗಿ ಭರವಸೆ ನೀಡಿದ್ದರು 
ರಮೇಶ ಭೂಸನೂರ ಮಾಜಿ ಶಾಸಕ ಸಿಂದಗಿ
ಹತ್ತಿರದ ದೇವರಹಿಪ್ಪರಗಿ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವ ಅಂತ ನಾಮಕರಣ ಮಾಡಿದಂತೆ ಸಿಂದಗಿ ಬಸ್ ನಿಲ್ದಾಣಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ನೀಡಿದ ಸಾರಂಗಮಠದ ಲಿಂಗೈಕ್ಯ ಚೆನ್ನವೀರ ಸ್ವಾಮೀಜಿ ಹೆಸರು ಇಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ 
-ಅಶೋಕ ವಾರದ ಅಧ್ಯಕ್ಷ ವರ್ತಕರ ಸಂಘ ಸಿಂದಗಿ.
ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕಾಯಕಯೋಗಿ ಲಿಂಗೈಕ್ಯ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ನಿಲ್ದಾಣಕ್ಕೆ ಇಷ್ಟು ವರ್ಷಗಳಾದರೂ ಅವರ ಹೆಸರು ಇಡದೇ ಇರುವುದು ವಿಷಾದನೀಯ
ಅಶೋಕ ಅಲ್ಲಾಪೂರ ಅಧ್ಯಕ್ಷ ನಗರ ಸುಧಾರಣಾ ವೇದಿಕೆ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT