ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಅಲ್ಲ, ಜೆಡಿಎಫ್‌: ಫ್ಯಾಮಿಲಿ ಪಾರ್ಟಿ ಎಂದು ಸಿದ್ದರಾಮಯ್ಯ ವ್ಯಾಖ್ಯಾನ

Last Updated 24 ಅಕ್ಟೋಬರ್ 2021, 16:11 IST
ಅಕ್ಷರ ಗಾತ್ರ

ವಿಜಯಪುರ: ಅಪ್ಪ, ಮಕ್ಕಳು, ಮೊಮ್ಮಕ್ಕಳ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಜೆಡಿಎಸ್‌ ಅನ್ನು ಇನ್ನು ಮುಂದೆ ಜೆಡಿಎಫ್‌ (ಫ್ಯಾಮಿಲಿ) ಎಂದು ಕರೆಯುವುದು ಉತ್ತಮ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

ಸಿಂದಗಿ ಉಪ ಚುನಾವಣೆ ಹಿನ್ನೆಲೆಯೆಲ್ಲಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಇತರೆ ಹಿಂದುಳಿದ ವರ್ಗಗಳ ಮುಖಂಡರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಕಣದಲ್ಲಿ ಜೆಡಿಎಸ್‌ ಇದೆಯಾದರೂ ಸ್ಪರ್ಧೆಯಲ್ಲಿ ಇಲ್ಲ. ಜೆಡಿಎಸ್‌ ಬಿಜೆಪಿಯ ’ಬಿ‘ ಟೀಂ ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರಿಗೆ ನನ್ನ ಕಂಡರೆ ಭಯ. ಇಬ್ಬರಿಗೂ ನಾನೇ ಟಾರ್ಗೆಟ್‌. ಸಿದ್ದರಾಮಯ್ಯನನ್ನು ಮುಗಿಸಿದರೆ ಕಾಂಗ್ರೆಸ್‌ ಮುಗಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ, ನನ್ನ ಮುಗಿಸಲು ಜನ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ರೈತರು, ಕೂಲಿಕಾರ್ಮಿಕರು, ಬಡವರು, ಅಲ್ಪಸಂಖ್ಯಾತರು, ದಲಿತರ ವಿರೋಧಿಯಾಗಿವೆ ಎಂದು ಆರೋಪಿಸಿದರು.

’ಕಂಬಳಿ ಹಾಕಲು ಯೋಗ್ಯತೆ ಬೇಕು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ನಾನು ಬಾಲ್ಯದಲ್ಲಿ ಕುರಿ ಸಾಕಿದ್ದೇನೆ, ಕುರಿ ಕಾದಿದ್ದೇನೆ. ಕಂಬಳಿ ಹೊದ್ದಿದ್ದೇನೆ. ಬೊಮ್ಮಾಯಿ ನೀನು ಕುರಿ ಕಾದಿದ್ದೆಯೇನಪ್ಪಾ, ಕಂಬಳಿ ಹೊದ್ದಿದ್ದೇಯೇನಪ್ಪಾ ಎಂದು ಪ್ರಶ್ನಿಸಿದರು.

ಈಶ್ವರಪ್ಪ ನಾನು ಕುರುಬ ಅಲ್ಲ ಎಂದು ಈ ಹಿಂದೆ ಹೇಳಿದ್ದ. ಆದರೆ, ನಾನು ಕುರುಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸ್ವಾರ್ಥಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟಿದ್ದ ಈಶ್ವರಪ್ಪ. ಈಗ ಎಲ್ಲಿ ಹೋಯಿತು ಬ್ರಿಗೇಡ್‌ ಎಂದು ಪ್ರಶ್ನಿದರು.

ಕಾಗಿನೆಲೆ ಕನಕ ಗುರು ಪೀಠ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಭಗೀರಥ ಜಯಂತಿ, ದೇವರ ದಾಸಿಮಯ್ಯ ಜಯಂತಿ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ವಿಶ್ವಕರ್ಮ ಜಯಂತಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ, ಶ್ರೀಕೃಷ್ಣ ಜಯಂತಿ, ಕೆಂಪೇಗೌಡ ಜಯಂತಿ, ಟಿಪ್ಪು ಸುಲ್ತಾನ್‌ ಜಯಂತಿ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೊ ಕಡ್ಡಾಯ, ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ನಾಮಕರಣ,ನೇಕಾರರ ಸಾಲ ಮನ್ನಾ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಯಡಿಯೂರಪ್ಪ, ಬೊಮ್ಮಾಯಿ ನೀವೇನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಕುರಿಗಳು, ಆಕಳುಗಳು ಆಕಸ್ಮಿಕವಾಗಿ ಸತ್ತರೆ ಸೂಕ್ತ ಪರಿಹಾರ ಕೊಡುವ ಯೋಜನೆ ಜಾರಿಗೆ ತಂದಿದ್ದೆ. ಆದರೆ, ಬಿಜೆಪಿ ಸರ್ಕಾರ ರದ್ದುಪಡಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT