ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ಇನ್ | ಕೋವಿಡ್‌ ಭಯ ಬೇಡ: ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಪ್ರಸನ್ನಕುಮಾರ್‌ ವಿದ್ಯಾರ್ಥಿಗಳಿಗೆ ಅಭಯ
Last Updated 17 ಜೂನ್ 2020, 11:49 IST
ಅಕ್ಷರ ಗಾತ್ರ

ವಿಜಯಪುರ: ‘ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ನಡೆಸಲು ಶಿಕ್ಷಣ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಕೋವಿಡ್‌ 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಭಯ, ಆತಂಕವಿಲ್ಲದೇ ನಿಶ್ಚಿಂತೆಯಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ’

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್‌ ಅವರು ಜಿಲ್ಲೆಯ ವಿದ್ಯಾರ್ಥಿಗಳ, ಪೋಷಕರ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಧೈರ್ಯ ತುಂಬಿದರು.

ಜೊತೆಗೆ ಶಿಕ್ಷಕರ ಮತ್ತು ಸಾರ್ವಜನಿಕರ ಹತ್ತಾರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಫೋನ್‌ ಇನ್‌ ಕಾರ್ಯಕ್ರಮದ ಆಯ್ದ ಪ್ರಶ್ನೋತ್ತರಗಳು ಇಂತಿವೆ:

*ಪರಮಾನಂದ, ವಿದ್ಯಾರ್ಥಿ, ಸಿಂದಗಿ.ವಿ.ಪಿ.ಬಿರಾದಾರ, ಸಾವಳಗಿ. ಪ್ರಶಾಂತ ಗುಬ್ಬೇವಾಡಿ, ಇಂಡಿ: ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡಯುವುದು ನಿಶ್ಚಿತವೇ?

–ನಿಗದಿತ ವೇಳಾಪಟ್ಟಿ ಪ್ರಕಾರವೇ ಪರೀಕ್ಷೆ ನಡೆಯುವುದು ನಿಶ್ಚಿತ. ಈ ಬಗ್ಗೆ ಅನುಮಾನ ಬೇಡ. ಊಹಾಪೂಹಗಳಿಗೆ ಕಿವಿಕೊಡಬೇಡಿ.

*ಮಂಜುನಾಥ ಬ್ಯಾಕೋಡ, ಜುಮನಾಳ, ಪ್ರಭುಗೌಡ ಪಾಟೀಲ, ಜಯವಾಡಗಿ: ಶಾಲೆಗಳು ಯಾವಾಗ ಪುನರಾರಂಭವಗಲಿವೆ? ಅಲ್ಲಿಯವರೆಗೆ ಮಕ್ಕಳು, ಶಿಕ್ಷಕರು ಏನು ಮಾಡಬೇಕು?

–ಶಾಲೆಗಳ ಪುನರಾರಂಭದ ಬಗ್ಗೆ ಇನ್ನೂ ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಮಾರ್ಗಸೂಚಿಗಳು ಬಂದ ಬಳಿಕ ಆರಂಭಿಸಲಾಗುವುದು. ಈಗಾಗಲೇ ಶಾಲೆಗಳಿಗೆ ನಿತ್ಯ ಶಿಕ್ಷಕರು ಹಾಜರಾಗುತ್ತಿದ್ದಾರೆ.

*ಜ್ಯೋತಿ, ವಿದ್ಯಾರ್ಥಿನಿ ಸಿಂದಗಿ, ರಮೇಶ ಬಾಲಗೊಂಡ, ಕೊಲ್ಹಾರ, ಜಯಶ್ರೀ ಚವ್ಹಾಣ, ಬಸವನ ಬಾಗೇವಾಡಿ, ಶ್ರೀಶೈಲ ಸಂಗಪ್ಪ ಬಡಗಿ, ಬಳೂತಿ: ಕೋವಿಡ್‌ ಭಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರಲು ಅಂಜಿಕೆ, ಭಯವಾಗುತ್ತಿದೆ?

–ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಯಾವುದೇ ಆತಂಕ, ಭಯ ಇಲ್ಲದೇ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಿಲು ಆದ್ಯತೆ ನೀಡಿ. ನಿಮ್ಮ ಆರೋಗ್ಯ ಕಾಳಜಿಯನ್ನು ಸಂಪೂರ್ಣ ನಾವು ನೋಡಿಕೊಳ್ಳುತ್ತೇವೆ.

*ಸುರೇಶ ಬಿರಾದಾರ, ಹಿಟ್ಟಳ್ಳಿ: ಸ್ಥಳಾಂತರಗೊಂಡಿರುವ ಶಾಲೆಗಳ ಸಮಸ್ಯೆ ಬಗೆಹರಿಸಿ, ಅವುಗಳನ್ನು ಆದಷ್ಟು ಬೇಗ ಅನುದಾನಕ್ಕೆ ಒಳಪಡಿಸಿ?

–ಜಿಲ್ಲೆಯಲ್ಲಿ 16 ಸ್ಥಳಾಂತರಗೊಂಡ ಶಾಲೆಗಳು ಇವೆ. ಸರ್ಕಾರದ ನಿಯಮಾವಳಿ ಪ್ರಕಾರ ಅವುಗಳನ್ನು ಅನುದಾನಕ್ಕೆ ಒಳಪಡಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.

*ಮಹಾಲಿಂಗಪ್ಪ ತಿಮ್ಮಣ್ಣ ರ‍್ಯಾಗಿ, ಹೆಚ್ಚುವರಿ ಶಿಕ್ಷಕ, ಲೇಬಗೇರಿ, ಮುದ್ದೇಬಿಹಾಳ: 2019 ನವೆಂಬರ್‌ನಿಂದ ಹೆಚ್ಚುವರಿ ಶಿಕ್ಷಕರಿಗೆ ವೇತನ ಬಿಡುಗಡೆಯಾಗಿಲ್ಲ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿ?

–ಆಯಾ ಶಾಲೆಗಳ ಆಡಳಿತ ಮಂಡಳಿಯಿಂದ ಇಲಾಖೆಗೆ ಪ್ರಸ್ತಾವ ಬಂದರೆ ಪರಿಶೀಲಿಸಿ, ಆದಷ್ಟು ಶೀಘ್ರ ಹೆಚ್ಚುವರಿ ಶಿಕ್ಷಕರ ವೇತನ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು.

*ರಾಜಶೇಖರ ದಯಿಗೊಂಡ, ವಿಜಯಪುರ: ಕೌಲಗಿಯ ಸಿಬಿಎಸ್‌ಇ ಶಾಲೆಯಲ್ಲಿ ಈಗಾಗಲೇ ₹44 ಸಾವಿರ ಡೋನೇಷನ್‌ ಕಟ್ಟಿ 7ನೇ ತರಗತಿಗೆ ಮಗನನ್ನು ಸೇರ್ಪಡೆ ಮಾಡಿದ್ದೇನೆ. ಇನ್ನೂ ₹ 44 ಸಾವಿರ ಕಟ್ಟಬೇಕಿದೆ. ಒಂದು ವೇಳೆ ಶಾಲೆಗಳು ಈ ವರ್ಷ ನಡೆಯದೇ ಇದ್ದರೆ ಕಟ್ಟಿದ ಹಣವನ್ನು ಮರಳಿ ಕೊಡಿಸುವಿರಾ?

–ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಶಾಲೆಯಲ್ಲಿ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆ ಶಾಲೆಗೆ ನೋಟಿಸ್‌ ಕೊಡುತ್ತೇನೆ. ಅಧಿಕಾರಿಗಳನ್ನು ಕಳುಹಿಸಿ, ಪರಿಶೀಲನೆ ನಡೆಸುತ್ತೇನೆ.

*ತಾಹೀರ್‌, ಶಿಕ್ಷಕ, ಬಸವನಬಾಗೇವಾಡಿ, ತುಕಾರಾಮ ಚವ್ಹಾಣ, ಸೋಮದೇವರಹಟ್ಟಿ, ತಿಕೋಟಾ: ಖಾಸಗಿ ಶಾಲೆಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಶಿಕ್ಷಕರಿಗೆ ಮೂರು ತಿಂಗಳಿಂದ ವೇತನ ಕೊಟ್ಟಿಲ್ಲ. ಶೇ 50ರಷ್ಟಾದರೂ ನೀಡಿದರೆ ನಮ್ಮ ಕುಟುಂಬ ನಿರ್ವಹಣೆ ಮಾಡಬಹುದು ಕಷ್ಟವಾಗಿದೆ.

–ಲಾಕ್‌ಡೌನ್‌ ಅವಧಿಯಲ್ಲಿ ಶಿಕ್ಷಕರಿಗೆ ವೇತನ ಕೊಡುವಂತೆ ಸರ್ಕಾರ ಈಗಾಗಲೇ ಎಲ್ಲ ಖಾಸಗಿ, ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗೆ ಸೂಚಿಸಿದೆ. ಆದರೆ, ಶುಲ್ಕ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ಖಾಸಗಿ ಸಂಸ್ಥೆಗಳು ಬೇಡಿಕೆ ಇಟ್ಟಿವೆ. ಈ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಸರ್ಕಾರಕ್ಕೆ ಜಿಲ್ಲೆಯಿಂದಲೂ ಪ್ರಸ್ತಾವ ಸಲ್ಲಿಸಲಾಗುವುದು.

*ಗೌಡಪ್ಪ ಬಿರಾದಾರ್‌, ದೇವರಹಿಪ್ಪರಗಿ: ಪಟ್ಟಣದ ಎಂಪಿಎಸ್‌ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಮಕ್ಕಳಿಗೆ ಸಮಸ್ಯೆಯಾಗಿದೆ. ಹೆಚ್ಚುವರಿ ಕೊಠಡಿ ನಿರ್ಮಿಸಿಕೊಡಿ?

–ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಮುಖ್ಯ ಶಿಕ್ಷಕರ ಮೂಲಕ ಎಷ್ಟು ಮಕ್ಕಳಿದ್ದಾರೆ ಮತ್ತು ಎಷ್ಟು ಕೊಠಡಿಗಳ ಅಗತ್ಯವಿದೆ ಎಂದು ಪ್ರಸ್ತಾವ ಸಲ್ಲಿಸಿದರೆ ಅಗತ್ಯಕ್ರಮಕೈಗೊಳ್ಳಲಾಗುವುದು.

*ಮಂಜುನಾಥ ಮಟ್ಯಾಳ, ಮುಖ್ಯ ಶಿಕ್ಷಕ, ನವಚೈತನ್ಯ ಶಾಲೆ, ಕೊಲ್ಹಾರ: ಮಕ್ಕಳಿಂದ ಎಷ್ಟು ಡೊನೇಷನ್‌ ಪಡೆಯಲು ಅವಕಾಶ ಇದೆ?

–ಎಲ್ಲ ಮೂಲಸೌಲಭ್ಯ ಹೊಂದಿರುವ ಖಾಸಗಿ ಶಾಲೆಗಳು ಮಕ್ಕಳಿಂದ ₹ 11 ಸಾವಿರದಿಂದ ₹ 16 ಸಾವಿರದ ವರೆಗೆ ಮಾತ್ರ ಡೊನೇಷನ್‌ ಸಂಗ್ರಹಿಸಲು ಅವಕಾಶ ಇದೆ. ಇದನ್ನು ಮೀರಿ ವಸೂಲಿ ಮಾಡಿದರೆ ಶಿಸ್ತುಕ್ರಮಕೈಗೊಳ್ಳಲಾಗುವುದು.

*ಅಣ್ಣಪ್ಪಗೌಡ, ಸತೀಶ, ಸಾಗರ ಘಾಟಗೆ, ಕೋರವಾರ, ಸಿಂದಗಿ: ಗ್ರಾಮದಲ್ಲಿರುವ ಎಂಎಸ್‌ಡಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರಿ ಪ್ರೌಢಶಾಲೆಯನ್ನು ಆರಂಭಿಸಿ?

–ಸರ್ಕಾರಿ ಪ್ರೌಢಶಾಲೆ ಆರಂಭದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಎಂಎಸ್‌ಡಿ ಕಾಲೇಜಿನ ಆಡಳಿತ ಮಂಡಳಿಯಲ್ಲಿ ವ್ಯಾಜ್ಯ ಇರುವುದರಿಂದ ಶಿಕ್ಷಕರ ನೇಮಕ ನನೆಗುದಿಗೆ ಬಿದ್ದಿದೆ.

*ರಾಜಶೇಖರ ಪಾಟೀಲ, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬಸವನ ಬಾಗೇವಾಡಿ: ಆರ್‌ಟಿಇ ಪ್ರಕ್ರಿಯೆ ಆರಂಭಗೊಂಡಿದ್ದು, ಅನುದಾನ ರಹಿತ ಶಾಲೆಗಳು ಪಡೆದುಕೊಳ್ಳಬಹುದಾ?

–ಕೌನ್ಸೆಲಿಂಗ್‌ ಆಗಿದ್ದರೆ ಪಡೆದುಕೊಳ್ಳಬಹುದು.

*ಸುರೇಶ ಬಿರಾದಾರ, ವಿಜಯಪುರ: ನಾಯಿ ಕೊಡೆಯಂತೆ ತಲೆ ಎತ್ತುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಇಲ್ಲವೇ?

–ಸರ್ಕಾರದ ನಿಯಮಾವಳಿಗಳಂತೆ ಶಾಲೆಗಳಿಗೆ ಪರವಾನಗಿ ನೀಡಲಾಗುತ್ತದೆ. ಅನಧಿಕೃತ ಶಾಲೆಗಳಿದ್ದರೆ ದೂರು ನೀಡಿ, ಕ್ರಮ ಕೈಗೊಳ್ಳಲಾಗುವುದು.

*ಧರು ಕಿಲಾರಿ, ವಿಜಯಪುರ; ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗೆ ಸರ್ಕಾರ ಬ್ರೇಕ್‌ ಹಾಕಿದೆ. ಸಂದರ್ಶನ ನೀಡಿದ ನಮ್ಮಂತವರು ಏನು ಮಾಡಬೇಕು?

–ತಡೆ ಹಿಡಿಲ್ಲ. ಆರ್ಥಿಕ ತೊಂದರೆಯಿಂದ ಹಣಕಾಸು ಇಲಾಖೆ ನೇಮಕಾತಿ ಪ್ರಸ್ತಾವನೆ ಕಳಿಸದಂತೆ ಸೂಚಿಸಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ.

*ವಾಸುದೇವ ತೋಳಬಂದಿ, ಯಾಳವಾರ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕಟ್ಟಡಗಳು ಹಾಳಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಯಾವಾಗ?

–ಸಮಸ್ಯೆ ಇರುವ ಶಾಲೆಗಳ ಕುರಿತು ಮಾಹಿತಿ ನೀಡಿ, ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು.

*ರಾಹುಲ್ ಮರಬಿ, ದೇವರಹಿಪ್ಪರಗಿ; ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣ ಗೋಡೆ ಇಲ್ಲದಕ್ಕೆ ಹಂದಿ, ದನಗಳು ಓಡಾಡುತ್ತಿವೆ. ಸ್ವಚ್ಛತೆ ಸಹ ಇಲ್ಲ. ಕೆಜಿಎಚ್‌ಪಿಎಸ್‌ ಶಾಲೆಯಲ್ಲಿ ಮಳೆ ಬಂದ ಆವರಣದಲ್ಲಿ ನೀರು ನಿಲ್ಲುತ್ತೆ ಸರಿಪಡಿಸಿ?

–ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಮುಖ್ಯಾಧಿಕಾರಿಗೆ ತಿಳಿಸಲಾಗುವುದು. ಸಿಇಒ ಗಮನಕ್ಕೂ ತಂದು ಸಮಸ್ಯೆ ಬಗೆಹರಿಸಲಾಗುವುದು

*ಸಂಗಮೇಶ, ದೇಗಿನಾಳ ಚಿಕ್ಕಗಲಗಲಿ; ಡೊನೇಷನ್‌ ಹಾವಳಿ ಹೆಚ್ಚಿದೆ. ಕಡಿವಾಣ ಹಾಕುವಿರಾ?

* 16 ಸಾವಿರಕ್ಕೂ ಹೆಚ್ಚು ಪ್ರವೇಶ ಶುಲ್ಕ ವಸೂಲಿ ಮಾಡುವಂತಿಲ್ಲ. ಕಂಪ್ಯೂಟರ್‌, ಈಜು, ಪುಸ್ತಕ, ಸಮವಸ್ತ್ರ ಸೇರಿ ವಿವಿಧ ಸೌಕರ್ಯಗಳಿಗೆ ಹೆಚ್ಚಿನ ಮೊತ್ತ ಕೇಳಿದರೆ, ಬೇಡ ಎಂದು ತಿಳಿಸಿ. ಒತ್ತಾಯ ಮಾಡಿದರೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು

*ಬಾಗಣ್ಣ ಸಾಳಕೆ, ಜಾಲವಾದ, ದೇವರ ಹಿಪ್ಪರಗಿ: ಗ್ರಾಮದಲ್ಲಿರುವ ಆರು ಶಾಲೆಗಳ ಪೈಕಿ ಮೂರು ಶಾಲೆಗಳಿಗೆ ಆವರಣ ಗೋಡೆಗಳಿಲ್ಲ. ತಲಾ ಎರಡು ಶಾಲೆಗಳಿಗೆ ಮೈದಾನ, ಕಿಟಕಿ, ಬಾಗಿಲು ಇಲ್ಲ. ಈ ಸಮಸ್ಯೆಗೆ ಪರಿಹರಿಸಿ?

–ಸರ್ಕಾರಿ ಶಾಲೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳಿಗೆ ಸರಿಪಡಿಸಲು ಸೂಚನೆ ನೀಡಲಾಗುವುದು.

ಕೋವಿಡ್‌19: ಡಿಡಿಪಿಐ ನೀಡಿದ ಸಲಹೆಗಳು

*ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಡುವುದರಿಂದ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೂವತ್ತು ನಿಮಿಷ ಮೊದಲು ಹಾಜರಿರಬೇಕು

*ಆರೋಗ್ಯ ತಪಾಸಣೆಗೂ ಮುನ್ನ ವಿದ್ಯಾರ್ಥಿಗಳು ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು

*ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಒಂದು ಮೀಟರ್‌ ಅಂತರ ಕಾಪಾಡಿಕೊಂಡು, ಸರತಿ ಸಾಲಿನಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು

*ಇತರೆ ಪರೀಕ್ಷಾರ್ಥಿಗಳೊಂದಿಗೆ ಕೈಕುಲುಕುವುದು, ಅಪ್ಪಿಕೊಳ್ಳುವುದು, ಮುಟ್ಟುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ಮಾಡಬಾರದು.

*ಬಾಗಿಲು, ಕಿಟಿಕಿಗಳು ಹಾಗೂ ಇತರೆ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬಾರದು. ಸಹ ವಿದ್ಯಾರ್ಥಿಗಳಿಂದ ಯಾವುದೇ ವಸ್ತುಗಳನ್ನು ಪಡೆಯಬಾರದು

*ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೇಲ್ವಿಚಾರಕರಿಗೆ ತಿಳಿಸಬೇಕು

*ವಿದ್ಯಾರ್ಥಿಗಳು ತಮ್ಮದೇ ಆದ ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲಿ, ಆಹಾರದ ಡಬ್ಬಿ ತರಬೇಕು

*ಪರೀಕ್ಷೆಗೆ ಅಗತ್ಯವಾದ ಪ್ರವೇಶಪತ್ರ ಹಾಗೂ ಇತರೆ ಸಲಕರಣೆಗಳನ್ನು ತಪ್ಪದೇ ತರಬೇಕು

*ಆರೋಗ್ಯ ತಪಾಸಣಾ ಕೌಂಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್‌ ನೀಡಲಾಗುವುದು. ಆರೋಗ್ಯ ತಪಾಸಣೆಯ ನಂತರ ಪರೀಕ್ಷಾ ಕೇಂದ್ರದ ಒಳಗೆ ತೆರಳು ಅನುಮತಿ ನೀಡಲಾಗುವುದು

*ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಹಂತದಿಂದ ನಿರ್ಗಮಿಸುವ ವರೆಗೂ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು

*ಪರೀಕ್ಷೆಗೆ ಪೂರ್ವಭಾವಿಯಾಗಿ ಮೂರು ದಿನಗಳ ಮೊದಲು ಪರೀಕ್ಷಾ ಕೇಂದ್ರಕ್ಕೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುವುದು

*ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್‌ ಸ್ಥಾಪಿಸಲಾಗುವುದು

*ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿಶೇಷ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ

*ಪ್ರತಿ ಕೊಠಡಿಯಲ್ಲಿ 18ರಿಂದ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಡೆಸ್ಕ್‌ಗಳ ನಡುವೆ ಕನಿಷ್ಠ ಒಂದು ಮೀಟರ್‌ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲಾಗುವುದು

*ಒಂದು ವೇಳೆ ವಿದ್ಯಾರ್ಥಿ ಕೋವಿಡ್‌ ಪಾಸಿಟಿವ್‌ ಎಂದು ಈಗಾಗಲೇ ಗುರುತಿಸಲ್ಪಟ್ಟಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು

*ಯಾವುದೇ ಮಕ್ಕಳು ರಾಜ್ಯದ ಹೊರಗೆ ವಲಸೆ ಹೋಗಿದ್ದರೆ, ಪ್ರಯಾಣಿಸಿದ್ದರೆ, ಗಡಿ ರಾಜ್ಯದಲ್ಲಿ ಉಳಿದುಕೊಂಡಿದ್ದರೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ಹಾಜರಾಗಲು ಸಾಧ್ಯವಾಗದಿದ್ದರೆ ಅಂತ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು

*ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು, ಶಿಕ್ಷಕರು, ಮೇಲ್ವಿಚಾರಕರು ಹಾಗೂ ಇತರೆ ಸಿಬ್ಬಂದಿ ಮಾಸ್ಕ್‌ ಧರಿಸುವುದು ಕಡ್ಡಾಯ. ನಿಗದಿತ ಕೌಂಟರ್‌ಗಳಲ್ಲಿ ದೈನಂದಿನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ವಿದ್ಯಾರ್ಥಿಗಳೊಂದಿಗೆ ಅಂತರ ಕಾಪಾಡಿಕೊಳ್ಳಬೇಕು

*ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಗುಂಪು, ಗುಂಪಾಗಿ ಹೊರಗೆ ಹೋಗಲು ಅವಕಾಶ ನೀಡದೇ ಒಬ್ಬೊಬ್ಬರಾಗಿ ತೆರಳಲು ಕ್ರಮಕೈಗೊಳ್ಳಲಾಗುವುದು.

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ: ಬಸವರಾಜ್‌ ಸಂಪಳ್ಳಿ, ಬಾಬುಗೌಡ ರೋಡಗಿ, ಬಸಪ್ಪ ಎಲ್‌. ಮಗದುಮ್‌, ಸಾಯಿಕುಮಾರ್‌ ಕೊಣ್ಣೂರಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT