ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧತೆ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

Last Updated 7 ಜೂನ್ 2021, 14:33 IST
ಅಕ್ಷರ ಗಾತ್ರ

ವಿಜಯಪುರ: ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ವ ರೀತಿಯಿಂದಲೂ ಸನ್ನದ್ಧಗೊಳ್ಳುವಂತೆ ಹಾಗೂ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಎದುರಾಗಬಹುದಾದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೃಷ್ಣ, ಭೀಮಾ ಹಾಗೂ ದೋಣಿ ನದಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳುವಂತೆ ಸೂಚನೆ ನೀಡಿದರು.

ಕೃಷ್ಣ ಮತ್ತು ಭೀಮಾ ನದಿಗಳಿಗೆ ಹರಿದು ಬರುವ ನೀರಿನ ಬಗ್ಗೆ ನಿರಂತರ ನಿಗಾ ಇಡಬೇಕು. ಆಲಮಟ್ಟಿ ಸೇರಿದಂತೆ ಸೊನ್ನ ಬ್ಯಾರೇಜ್ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ವಿಶೇಷವಾಗಿ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಹರಿದು ಬರುವ ನೀರಿನ ಬಗ್ಗೆ ನಿರಂತರ ನಿಗಾ ಇಡಬೇಕು ಹಾಗೂ ಸೊನ್ನ ಬ್ಯಾರೇಜ್ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಆಗುವಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಸೊನ್ನ ಬ್ಯಾರೇಜ್‌ನ 29 ಗೇಟ್‌ಗಳ ಸುಸ್ಥಿತಿ ಬಗ್ಗೆ ಇಂಡಿ ಉಪವಿಭಾಗಾಧಿಕಾರಿಗಳು ಪರಿಶೀಲನಾ ವರದಿ ಸಲ್ಲಿಸಬೇಕು. ಈ ಜಲಾಶಯಕ್ಕೆ ಹರಿದು ಬರುವ ನೀರು, ಬಿಡುಗಡೆಯಾಗುವ ನೀರು, ಕ್ಷೇತ್ರವ್ಯಾಪ್ತಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಸೂಕ್ತ ನಕಾಶೆಯೊಂದಿಗೆ ಪ್ರವಾಹ ನಿಭಾಯಿಸಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಇರುವ ತೆರೆದ ಕೆರೆಗಳನ್ನು ಮತ್ತು ನೀರಿನಗುಂಡಿಗಳ ಸುತ್ತ ತಡೆಬೇಲಿಗಳನ್ನು ಹಾಕಬೇಕು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವ ಬಗ್ಗೆ ಕ್ರಮ
ಕೈಗೊಳ್ಳುವುದು ಎಂದು ಸೂಚಿಸಿದರು.

ಜಿಲ್ಲೆಯ ನದಿ ತೀರದಲ್ಲಿ ಬರುವ 27 ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಪಂಚಾಯತಿ ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದರು.

ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಕಾಳಜಿ ಕೇಂದ್ರಗಳ ಸ್ಥಾಪನೆ ವ್ಯವಸ್ಥೆಗೆ ಸೂಕ್ತ ಶಾಲಾ ಕಟ್ಟಡಗಳನ್ನು ಒದಗಿಸಲಾಗುವುದು ಎಂದರು.

ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಸ್ಥಗಿತಗೊಂಡರೆ ತಕ್ಷಣ ಪುನರ್ ಸಂಪರ್ಕಕ್ಕೆ ಹೆಸ್ಕಾಂ ಎಂಜಿನಿಯರ್ಸ್‌ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಡೋಣಿ ನದಿಗೆ ಹೆಚ್ಚಿನ ನೀರು ಬರುವ ಮುಂಚೆ ಅಥಣಿ ತಹಶೀಲ್ದಾರರೊಂದಿಗೆ ಪ್ರತಿದಿನ ಮಳೆ ಪ್ರಮಾಣ ಗಮನಿಸಬೇಕು. ತಾಲ್ಲೂಕು ಪಂಚಾಯ್ತಿಗಳಲ್ಲಿ 24X7 ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆಯಬೇಕು ಎಂದರು.

ಜಿಲ್ಲೆಯಲ್ಲಿ ಗಣಿಗಾರಿಕೆ ನಡೆದಂತಹ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಲು ಹೋಗಿ ಜೀವಹಾನಿ ತಪ್ಪಿಸಲು ಈಜುವುದನ್ನು ನಿಷೇಧಿಸಬೇಕು. ಎಚ್ಚರಿಕೆ ಫಲಕವನ್ನು ಅಳವಡಿಸಬೇಕು. ಗಣಿಗಾರಿಕೆ ಗುಂಡಿಯಲ್ಲಿ ಅವಘಡ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಗಣಿಮಾಲೀಕರು, ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ಹಾನಿಯಾಗಿರುವ ರಸ್ತೆ ಸೇತುವೆಗಳ ಬಗ್ಗೆ ಮಾಹಿತಿಯನ್ನು ಪ್ರತಿ ವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಕ್ರಮವಹಿಸಬೇಕು ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದರು.

ನಗರಸಭೆ ಪೌರಾಯುಕ್ತರು ಹಾಗೂ ಪುರಸಭೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ನಗರ ಸ್ಥಳೀಯ ಪ್ರದೇಶ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ರೋಗರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ್ ಲಮಾಣಿ, ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

***

ಅತಿವೃಷ್ಟಿ ಮತ್ತು ಪ್ರವಾಹ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು

–ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ

***

ಎಲ್ಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸ್ಥಳೀಯ ಕಂದಾಯ ಅಧಿಕಾರಿಗಳೊಡನೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಬೇಕು

–ಗೋವಿಂದರೆಡ್ಡಿ, ಸಿಇಒ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT