ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಆಗ್ರಹ

ಹೋರಾಟಕ್ಕೆ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಬೆಂಬಲ
Last Updated 4 ಜನವರಿ 2022, 10:45 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು.

ಎಐಡಿಎಸ್‍ಓ ರಾಜ್ಯ ಸಮಿತಿ ಸದಸ್ಯೆ ಸ್ನೇಹಾ ಕಟ್ಟಿಮನಿ ಮಾತನಾಡಿ, ರಾಜ್ಯವ್ಯಾಪಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥಿತಿ ಉಪನ್ಯಾಸಕರು 20 ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಸ್ಪಂದಿಸದೇ ಇರುವುದು ಖಂಡನೀಯ ಎಂದರು.

ಉದ್ಯೋಗದ ಭದ್ರತೆ ಇಲ್ಲದೆ, ಎಷ್ಟೋ ತಿಂಗಳ ಕಾಲ ಸಂಬಳವೇ ಇಲ್ಲದೆ ಸಾವಿರಾರು ಅತಿಥಿ ಉಪನ್ಯಾಸಕರು ಅತ್ಯಂತ ಯಾತನಾಮಯ ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಎಷ್ಟೋ ಜನ ಉನ್ನತ ಪದವಿ ಪಡೆದವರು, ಸ್ಲೆಟ್‌ ಪರೀಕ್ಷೆ ಉತ್ತೀರ್ಣರಾದವರು, ಡಾಕ್ಟರೇಟ್ ಮಾಡಿರುವವರು, ಕಾಲೇಜುಗಳಲ್ಲಿ 10-15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವವರು ಇದ್ದಾರೆ. ಆದರೆ, ಇವರ ನೋವಿಗೆ ಉತ್ತರವಾಗಲಿ ಅಥವಾ ಗೌರವಯುತ ಬದುಕು ಸಾಗಿಸಲು ಕನಿಷ್ಠ ಭದ್ರತೆ, ಸಂಬಳ ದೊರಕಿಸುವಲ್ಲಿ ಸರ್ಕಾರದ ಕಡೆಯಿಂದ ಸ್ಪಂದನೆ ದೊರಕದೆ ಇರುವುದು ಅತ್ಯಂತ ಬೇಸರದ ವಿಷಯವಾಗಿದೆ ಎಂದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಈಗ ಅವರ ಜೀವನ ಬಿಕ್ಕಟ್ಟಿನಲ್ಲಿದೆ. ಅವರ ಹೋರಾಟವನ್ನು ಬೆಂಬಲಿಸಿ ಅವರೊಟ್ಟಿಗೆ ನಿಲ್ಲುವ ನೈತಿಕ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಇದೆ ಎಂಬ ಆಲೋಚನೆಯೊಂದಿಗೆ ಜಿಲ್ಲೆಯ ವಿದ್ಯಾರ್ಥಿಗಳು ಉಪನ್ಯಾಸಕರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದರು.

ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರು ಪ್ರಬಲ ಚಳವಳಿಗೆ ಮುನ್ನುಗ್ಗಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ. ವಿವಿಧ ಹಂತಗಳ ಚಳವಳಿಗೆ ಕರೆ ನೀಡಿದ್ದಾರೆ. ಇದು ಅವರ ವೈಯುಕ್ತಿಕ ಹೋರಾಟಕ್ಕಿಂತ ಹೆಚ್ಚಾಗಿ, ಅಳಿವು-ಉಳಿವಿನ ಸಂಘರ್ಷವಾಗಿದೆ. ಈ ಸಂಘರ್ಷದಲ್ಲಿ ವಿದ್ಯಾರ್ಥಿಗಳು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಸಾರುತ್ತಿದ್ದೇವೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಎಐಡಿಎಸ್‍ಓ ರಾಜ್ಯ ಸಮಿತಿಯು ರಾಜ್ಯವ್ಯಾಪಿ ‘ಅತಿಥಿ ಉಪನ್ಯಾಸಕರ ಹೋರಾಟದೊಂದಿಗೆ ವಿದ್ಯಾರ್ಥಿಗಳಿದ್ದೇವೆ’ ಎಂಬ ಘೋಷಣೆಯೊಂದಿಗೆ ಚಳವಳಿಗೆ ಕರೆ ಕೊಟ್ಟಿದ್ದೇವೆ. ಶಿಕ್ಷಕರು ತರಗತಿ ಬಹಿಷ್ಕರಿಸಿ ಹೋರಾಟದಲ್ಲಿ ಇರುವುದರಿಂದ ಶೈಕ್ಷಣಿಕ ಏರುಪೇರುಗಳು ಉಂಟಾಗಿವೆ. ಈ ಶೈಕ್ಷಣಿಕ ಗೊಂದಲಗಳನ್ನು ಈ ಕೂಡಲೇ ಬಗೆಹರಿಸಬೇಕು ಹಾಗು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್‍ಓ ಜಿಲ್ಲಾ ಘಟಕದ ಅಧ್ಯಕ್ಷೆ ಸುರೇಖಾ ಕಡಪಟ್ಟಿ, ಸಂಘಟನಾಕಾರರಾದ ದೀಪಾ ವಡ್ಡರ, ಶರಣು ವಾಲಿಕಾರ, ಕೇದರ, ವಿದ್ಯಾರ್ಥಿಗಳಾದ ಗುರುಪ್ರಸಾದ್, ನವೀನ, ಪ್ರಸನ್ನ, ಅಂಬರೀಶ್, ಮಹಮದ್ ಇಸಾಕ್, ಸುದೀಪ್, ಮುತ್ತು ಹಾಗೂ ನೂರಾರು ಪದವಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

****

ತೀರ್ಥಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ ಆತ್ಮಹತ್ಯೆ ಮಾಡಿಕೊಂಡಿರುವುದು ಅತಿಥಿ ಉಪನ್ಯಾಸಕರ ಕಷ್ಟಮಯ ಜೀವನ ತೋರಿಸುತ್ತದೆ

–ಸ್ನೇಹಾ ಕಟ್ಟಿಮನಿ,ರಾಜ್ಯ ಸಮಿತಿ ಸದಸ್ಯೆ,ಎಐಡಿಎಸ್‍ಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT