ಶುಕ್ರವಾರ, ನವೆಂಬರ್ 27, 2020
19 °C
ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ

ಕೈಗಾರಿಕಾ ಪ್ರದೇಶಕ್ಕೆ ಮೂಲಸೌಲಭ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಅಲಿಯಾಬಾದ್‌ ಕೈಗಾರಿಕಾ ಪ್ರದೇಶದ ಹಂತ-1 ಹಾಗೂ 2ಕ್ಕೆ ಉಳಿದಿರುವ ಮೂಲ ಸೌಲಭ್ಯ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಅಲಿಯಾಬಾದ್-2 ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು 1 ಎಕರೆ 27 ಗುಂಟೆ ಜಮೀನನ್ನು ಉಚಿತವಾಗಿ ಹಂಚಿಕೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಕೆಲವು ದಿನಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದರು.

ಅಲಿಯಾಬಾದ್‌ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಬ್ಲಾಕ್-2ರ  ರಸ್ತೆ ಬದಿ ಇರುವ ಅನಧಿಕೃತ ಅಂಗಡಿಗಳನ್ನು 10 ದಿನಗೊಳಗಾಗಿ ತೆರವುಗೊಳಿಸುವಂತೆ ಸೂಚಿಸಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ 564 ಎಕರೆಯಲ್ಲಿ ಇರುವ ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳು ಶೇ 90 ರಷ್ಠು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನವಂಬರ್‌‌ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ಜನವರಿಯಲ್ಲಿ  ಕಾಮಗಾರಿ ಪ್ರಾರಂಭಿಸಬೇಕು ಎಂದು ಹೇಳಿದರು.

ಸಿಂದಗಿ ತಾಲ್ಲೂಕಿನ ಸಣ್ಣ ಕೈಗಾರಿಕಾ ಉದ್ಯಮಿದಾರರು ಹಾಗೂ ಸೇವಾ ಸಂಸ್ಥೆಯ ಮನವಿಯಂತೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಂದಗಿ ಕೈಗಾರಿಕಾ ವಸಾಹತುವಿನಲ್ಲಿ 458.20 ಚ.ಮಿ ಜಾಗವನ್ನು ನಿಗಮದ ನಿಯಮಾವಳಿಯಂತೆ ದರ ನಿಗದಿಪಡಿಸಿ, ಹಂಚಿಕೆ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಹಂತ-1ರ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕಾಮಗಾರಿ ಪೂರ್ಣಗೊಂಡ ನಂತರ ನಿವೇಶನ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಂದಗಿ ತಾಲ್ಲೂಕಿನ ಸಣ್ಣ ಕೈಗಾರಿಕಾ ಉದ್ಯಮದಾರರ ನಿವೇಶನ ಅಳತೆಗಳನ್ನು ಸರಿಪಡಿಸಿ ನಿವೇಶನಗಳ ಸರಹದ್ದನ್ನು ಹೊಸದಾಗಿ ಸರ್ವೆ ಮಾಡಿಸಬೇಕು ಹಾಗೂ ಅಲ್ಲಿಗೆ ಅಗತ್ಯವಿರುವ ನೀರಿನ ಸೌಲಭ್ಯ ಕಲ್ಪಿಸಬೇಕು ಮತ್ತು ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಸೂಚಿಸಿದರು.

ಮಲಘಾಣ ಗ್ರಾಮದಲ್ಲಿ ಬೆಲ್ಲ ತಯಾರಿಕಾ ಘಟಕ ಸ್ಥಾಪನೆಗೆ ಮಹಾಲಕ್ಷ್ಮೀ ಜಾಗರಿ ಕಂಪನಿಗೆ 1 ಎಕರೆ ಜಾಗ ನೀಡಲು ಸಭೆ ಒಪ್ಪಿಗೆ ನೀಡಿತು.

ಜಿಲ್ಲೆಯಲ್ಲಿ ವಿವಿಧ ಕೈಗಾರಿಕೋದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.