ಸೋಮವಾರ, ಜುಲೈ 4, 2022
22 °C
ಕೃಷ್ಣ ಕೊಲ್ಹಾರ ಕುಲಕರ್ಣಿ, ಆರ್‌.ಬಿ.ನಾಯಕ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡಗೆ ಪುರಸ್ಕಾರ

ವಿಜಯಪುರದ ಮೂವರು ಸಾಧಕರಿಗೆ ರಾಜ್ಯೋತ್ಸವ ’ಗರಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ವಿಜಯಪುರ:  ಸಂಶೋಧಕ, ಇತಿಹಾಸಜ್ಞ, ಸೃಜನಶೀಲ ಬರಹಗಾರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಲಂಬಾಣಿ ಜಾನಪದ ಹಾಡುಗಾರ ಆರ್‌.ಬಿ.ನಾಯಕ ಹಾಗೂ ’ಅನುಗ್ರಹ‘ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ಪ್ರಭುಗೌಡ ಬಿ.ಎಲ್‌.(ಚಬನೂರ) ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕೃಷ್ಣ ಕೊಲ್ಹಾರ ಕುಲಕರ್ಣಿ:

ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಇದುವರೆಗೆ 81 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ 400ಕ್ಕೂ ಅಧಿಕ ಲೇಖನಗಳು ವಿವಿಧ ವಿಶ್ವವಿದ್ಯಾಲಯಗಳ ನಿಯತಕಾಲಿಕಗಳಲ್ಲಿ ಮತ್ತು ‘ಪ್ರಜಾವಾಣಿ’ ಸೇರಿದಂತೆ ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೆಲವು ಲೇಖನಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಠ್ಯ ಪುಸ್ತಕಗಳಲ್ಲಿ ಸೇರಿವೆ. ಸಾಹಿತ್ಯ ಕ್ಷೇತ್ರದಲ್ಲಿ ಹೊಸತನ, ಹೊಸವಿಚಾರಗಳ ಹಾಗೂ ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿರುವ ಕುಲಕರ್ಣಿ ಅವರು, ಸಾಹಿತ್ಯ ಇತಿಹಾಸದ ಅಜ್ಞಾತ ಮಗ್ಗಲುಗಳನ್ನು ಕಂಡುಕೊಳ್ಳುವ ಸೃಜನಶೀಲ ಬರಹಗಾರ ಎಂದೇ ಪ್ರಸಿದ್ಧರಾಗಿದ್ದಾರೆ. ಕುಲಕರ್ಣಿ ಅವರ ಕರ್ನಾಟಕ ಇತಿಹಾಸ, ಅಖಂಡ ಕರ್ನಾಟಕದ ಹೆಜ್ಜೆಗಳು, ಕರ್ನಾಟಕಕ್ಕೆ ದುಡಿದ ಮಹನೀಯರ ಚರಿತ್ರೆಗಳು ಓದುಗ, ವಿಮರ್ಶಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಉಂಟಾದ ಪುನರ್ವಸತಿ-ಪುನರ್‌ನಿರ್ಮಾಣದಲ್ಲಿನ ಸಮಸ್ಯೆಗಳ ಕುರಿತು ಹಲವಾರು ಲೇಖನಗಳನ್ನು ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ರಾಜ್ಯ ಸರ್ಕಾರ ಕೊಡುವ ‘ಕನಕಶ್ರೀ’ ಪ್ರಶಸ್ತಿ, ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ರಾಜಪುರೋಹಿತ ಪ್ರಶಸ್ತಿ ಸೇರಿದಂತೆ ಹತ್ತು, ಹಲವು ಪುರಸ್ಕಾರಗಳಿಗೆ ಕುಲಕರ್ಣಿ ಪಾತ್ರರಾಗಿದ್ದಾರೆ.

ಅನುಗ್ರಹ ಕಣ್ಣಿನ ಆಸ್ಪತ್ರೆ:

ವಿಜಯಪುರ ಮತ್ತು ಕಲಬುರಗಿಯಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಎರಡು ದಶಕದಿಂದ ಸುಮಾರು 8 ಲಕ್ಷ ಹೊರ ರೋಗಿಗಳ ತಪಾಸಣೆ, 2 ಲಕ್ಷ ಜನರಿಗೆ ಉಚಿತ ತಪಾಸಣೆ ಹಾಗೂ 25 ಸಾವಿರ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಇದುವರೆಗೆ ನೀಡಿರುವ ’ಅನುಗ್ರಹ‘ ಕಣ್ಣಿನ ಆಸ್ಪತ್ರೆ ಸಂಸ್ಥಾಪಕ ಡಾ.ಪ್ರಭುಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.‌

ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾರೊಬ್ಬರೂ ಹಣವಿಲ್ಲದ ಕಾರಣಕ್ಕೆ ದೃಷ್ಟಿ ಹೀನರಾಗಬಾರದು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ  ಡಾ.ಪ್ರಭುಗೌಡ ಮತ್ತು ಡಾ. ಮಾಲಿನಿ ಲಿಂಗದಳ್ಳಿ ದಂಪತಿ ಅವರೊಟ್ಟಿಗೆ 20ಕ್ಕೂ ಹೆಚ್ಚು ನೇತ್ರ ತಜ್ಞರು, 100ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಡವರ ಹಾಗೂ ನಿರ್ಗತಿಕರ ಕಣ್ಣಿನ ಚಿಕಿತ್ಸೆಗಾಗಿ ಅವರು ’ಅನುಗ್ರಹ‌‘ ವಿಜನ್‌ ಫೌಂಡೇಷನ್‌ ಎಂಬ ಧರ್ಮಾರ್ಥ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆ ಮೂಲಕ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.

ಡಾ.ಪ್ರಭುಗೌಡ ಅವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗ ಮುರುಘಾಮಠದಿಂದ ’ಶರಣ ದಂಪತಿ‘ ಪ್ರಶಸ್ತಿ, ವಿಜಯಪುರದ ಸಿದ್ದೇಶ್ವರ ಸಂಸ್ಥೆಯಿಂದ ’ಶ್ರೀ ಸಿದ್ದೇಶ್ವರ ರತ್ನ‘ ಪ್ರಶಸ್ತಿ, ವಿಜಯಪುರ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವರು ಪ್ರಶಸ್ತಿ, ಗೌರವಗಳು ಇವರನ್ನು ಅರಸಿ ಬಂದಿವೆ.

ಆರ್‌.ಬಿ.ನಾಯಕ:

ವಿಜಯಪುರ ತಾಲ್ಲೂಕಿನ ಬರಟಗಿ ತಾಂಡಾ–1ರ ನಿವಾಸಿಯಾದ ಆರ್‌.ಬಿ.ನಾಯಕ ಅವರು ಲಂಬಾಣಿ ಜಾನಪದ ಹಾಡುಗಾರರಾಗಿ, ಜಾನಪದ ಗೀತೆ ರಚನೆಕಾರರಾಗಿ ಪ್ರಖ್ಯಾತಿ ಪಡೆದಿದ್ದಾರೆ. 22 ರಾಜ್ಯಗಳಲ್ಲಿ ಇದುವರೆಗೆ ಕಾರ್ಯಕ್ರಮ ನೀಡಿದ್ದಾರೆ.

ಭೀಮಸಿಂಗ ನಾಯಕ, ರಾಣಿಬಾಯಿ ನಾಯಕ ದಂಪತಿ ಪುತ್ರರಾದ ಆರ್‌.ಬಿ.ನಾಯಕ ಅವರು 10 ವರ್ಷದ ಬಾಲಕನಾಗಿರುವಾಗಲೇ ಜಾನಪದ ಗೀತೆಗಳ ಗಾಯನದ ಮೂಲಕ ಮನೆಮಾತಾಗಿದ್ದಾರೆ. ಬೆಂಗಳೂರಿನ ಬೆಸ್ಕಾಂನಲ್ಲಿ ಅಕೌಂಟೆಂಟ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಇವರ ಜಾನಪದ ಕಲಾಸೇವೆಯನ್ನು ಮೆಚ್ಚಿ ಬಂಜಾರ ಕಲಾರತ್ನ ಪ್ರಶಸ್ತಿ, ಸಂತ ಶ್ರೀ ಸೇವಾಲಾಲ ಪ್ರಶಸ್ತಿ, ಬಂಜಾರ ರತ್ನ ಪ್ರಶಸ್ತಿ, ವಚನಶ್ರೀ ರಾಜ್ಯ ಪ್ರಶಸ್ತಿ, ಸಂತ ಬಳಿರಾಮ ಪ್ರಶಸ್ತಿ,  ಶಂಕರಲಿಂಗ ಶ್ರೀ ಪ್ರಶಸ್ತಿ ಸೇರಿದಂತೆ  ಹತ್ತು, ಹಲವು ಸಂಘ–ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.

****

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಮತ್ತಷ್ಟು ಬರೆಯಲು, ಓದಲು ಟಾನಿಕ್‌ ಸಿಕ್ಕಂತಾಗಿದೆ. ಸರ್ಕಾರ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ
– ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಸಾಹಿತಿ, ವಿಜಯಪುರ

***

ನಮ್ಮಂಥ ಗ್ರಾಮೀಣ ಜಾನಪದ ಕಲಾವಿದರನ್ನು ಗುರುತಿಸಿ, ಪುರಸ್ಕರಿಸುತ್ತಾರೆ ಎಂಬ ಆಶಯ ಇರಲಿಲ್ಲ. ಇದೀಗ ಸರ್ಕಾರವೇ ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಸಂತೋಷ ಎನಿಸಿದೆ.
– ಆರ್‌.ಬಿ.ನಾಯಕ, ಲಂಬಾಣಿ ಜಾನಪದ ಗಾಯಕ, ಬರಟಗಿ ತಾಂಡಾ–01, ವಿಜಯಪುರ

***

ಎರಡು ಲಕ್ಷ ಜನರಿಗೆ ಉಚಿತ ತಪಾಸಣೆ, 25 ಸಾವಿರ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ ನಮ್ಮ ಆಸ್ಪತ್ರೆಗೆ ಪ್ರಶಸ್ತಿ ನೀಡಿರುವುದು ಖುಷಿಯಾಗಿದೆ. ಬಡವರಿಗೆ, ನಿರ್ಗತಿಕರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಪ್ರೇರಣೆಯಾಗಿದೆ
– ಡಾ.ಡಾ.ಪ್ರಭುಗೌಡ ಬಿ.ಎಲ್‌.(ಚಬನೂರ), ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು