ಮಂಗಳವಾರ, ಮಾರ್ಚ್ 9, 2021
28 °C
ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ; ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ

'ಸಂವಿಧಾನವನ್ನು ಎಂದೂ, ಯಾರೂ ಅಲ್ಲಗಳೆಯಲಾಗದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಭಾರತದ ಸಂವಿಧಾನದವನ್ನು ಎಂದೂ ಯಾರೂ ಅಲ್ಲಗಳೆಯಲಾಗದು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನದ ತಳಹದಿಯಲ್ಲೇ ದೇಶವನ್ನು ಮುನ್ನೆಡಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಎನ್ನುವುದು ಒಂದು ವಿಧದ ಸರ್ಕಾರವಲ್ಲ. ಆದರೆ, ಅದೊಂದು ರೀತಿಯ ಸಾಮಾಜಿಕ ಸಂಸ್ಥೆ ಎಂದು ಬಲವಾಗಿ ನಂಬಿದ್ದ ಸಂವಿಧಾನ ಪಿತಾಮಹಾ ಅಂಬೇಡ್ಕರ್‌ ಅವರ ದೂರದೃಷ್ಟಿಯ ಫಲವಾಗಿ ರಾಷ್ಟ್ರವು ಇಂದು 72ನೇ ಗಣತಂತ್ರ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ ಎಂದು ಹೇಳಿದರು.

ಜಗತ್ತಿನ ಸರ್ವರಂಗಗಳ ಇತಿಹಾಸ ಅಧ್ಯಯನ ಮಾಡುವುದರ ಜೊತೆಗೆ ವಿಶ್ವದ ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ಆಳವಾಗಿ ಮತ್ತು ತಾರ್ಕಿಕವಾಗಿ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ, ಭಾರತೀಯರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಆಯಾಮಗಳಿಗೆ ಸರಿಹೊಂದುವ ಸರ್ವಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್‌ ರೂಪಿಸಿದ್ದಾರೆ ಎಂದರು.

ಭಾರತದ ಸಾರ್ವಭೌಮತ್ವ ಇರುವುದು ಜನಸಾಮಾನ್ಯರಲ್ಲಿ, ಸಾಮಾನ್ಯ ಜನತೆಯೇ ಸಂವಿಧಾನದ ಮೂಲಾಧಾರ. ಸಂವಿಧಾನವು ನಮ್ಮ ದೇಶವು ಅನುಸರಿಸುತ್ತಿರುವ ಮೂಲಭೂತ ಕಾನೂನಾಗಿರುವುದರಿಂದ ಅದು ಅತ್ಯಂತ ಮಹತ್ವದಾಗಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ನಮ್ಮ ಘನ ಸಂವಿಧಾನವು ನಿಂತ ನೀರಾಗಿರದೇ ಚಲನ ಶೀಲತೆಯನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಸಾಮಾಜಿಕ ಅವಶ್ಯಕತೆಗಳಿಗೆ ತಕ್ಕಂತೆ ಿದುವರೆಗೆ 104 ತಿದ್ದುಪಡಿಗಳನ್ನು ಕಂಡಿದೆ ಎಂದು ಹೇಳಿದರು.

ಅಂಬೇಡ್ಕರ್‌ ರಚಿಸಿದ ಸಂವಿಧಾನದ ಫಲವಾಗಿ ಇಂದು ನನ್ನಂತ ಮಹಿಳೆಯರೂ ರಾಷ್ಟ್ರ ಧ್ವಜಾರೋಹಣ ನೆರವೇರಿಸುವಂತ ಅವಕಾಶ ಲಭಿಸಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌, ತಹಶೀಲ್ದಾರ್‌ ಮೋಹನ ಕುಮಾರಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಇದ್ದರು.

ಕೋವಿಡ್‌ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಲಾಯಿತು.

ಕ್ರೀಡಾಪಟುಗಳಿಗೆ ಸನ್ಮಾನ

ವಿಜಯಪುರ: ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದ ಜಿಲ್ಲೆಯ 27 ಕ್ರೀಡಾಪಟುಗಳನ್ನು ಸಚಿವೆ ಶಶಿಕಲಾ ಜೊಲ್ಲೆ ಸನ್ಮಾನಿಸಿದರು.

‌ಜಿಲ್ಲೆಯ ಕ್ರೀಡಾ ಪಟುಗಳಾದ ದಾನಮ್ಮ ಗುರವ, ರಾಘವೇಂದ್ರ ವಂದಾಲ, ಸಿಪಾಲಿ ರಾಠೋಡ, ಸೌಮ್ಯ ಅಂತಾಪುರ, ಅನಿಲ ಕಾಳಪ್ಪಗೋಳ, ಶ್ರೀಶೈಲ ವೀರಾಪುರ, ಕಾವೇರಿ ಮುರನಾಳ, ಅಂಕಿತಾ ರಾಠೋಡ, ಬಾಬುಗೌಡ ಪಾಟೀಲ, ಕಾರ್ತಿಕ ತಡವಲಕರ, ಐಶ್ವರ್ಯ ಹಂಚಿನಾಳ, ಸುದೀಪ ರಾಠೋಡ, ಸೈಯದ್‌ ಮಹ್ಮದ್‌, ಶಾಸಪ್ಪ ಲಕ್ಷ್ಮಣ ನಾಟಿಕಾರ, ಸುನೀಲ ಜಾಧವ, ಪಾಯಲ ಚವ್ಹಾಣ, ಅನ್ನ ಪೂರ್ಣ ಭೋಸೆಲ, ರಾಘವೇಂದ್ರ ವಾಲೀಕರ, ರಾಹುಲ್‌ ರಾಠೋಡ, ಸಾಗರ ತೇರದಾಳಮ, ಅಕ್ಷತಾ ಭೂತನಾಳ, ನಂದಾ ತಿಕೋಟಾ, ಭಗವತಿ ಗೊಂದಳಿ, ಸುನೀಲ ರಾಠೋಡ, ಶರಣಮ್ಮ ಪಾಲಕಿ, ರಾಜೇಶ ಪವಾರ ಮತ್ತು ಕಾವೇರಿ ಡೊಳ್ಳಿ ಅವರನ್ನು ಸನ್ಮಾನಿಸಲಾಯಿತು

***

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಯನ್ನು 62 ಕೇಂದ್ರಗಳ ಮೂಲಕ 5676 ಆರೊಗ್ಯ ಕಾರ್ಯಕರ್ತರ ಪೈಕಿ ಇದುವರೆಗೆ 3755 ಜನರಿಗೆ ನೀಡಲಾಗಿದೆ

- ಶಶಿಕಲಾ ಜಿಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು