ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ ಬಯಸಿದರೆ ರಾಜೀನಾಮೆ: ಸಚಿವ ಶಿವಾನಂದ ಎಸ್‌.ಪಾಟೀಲ

Last Updated 23 ಸೆಪ್ಟೆಂಬರ್ 2018, 11:58 IST
ಅಕ್ಷರ ಗಾತ್ರ

ವಿಜಯಪುರ:‘ಅಧಿಕಾರ ಶಾಶ್ವತವಲ್ಲ. ಒಮ್ಮೆ ಸಚಿವನಾಗಬೇಕು ಎಂಬ ಆಸೆಯಿತ್ತು. ಅದೀಗ ಈಡೇರಿದೆ. ಸಿಕ್ಕ ಅವಕಾಶದಲ್ಲೇ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ. ಹೈಕಮಾಂಡ್‌ ಬಯಸಿದರೆ ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಲು ಸಿದ್ಧನಿರುವೆ’ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌.ಪಾಟೀಲ ತಿಳಿಸಿದರು.

‘ಬಿಜೆಪಿಯವರ ಯಾವ ‘ಆಪರೇಷನ್‌’ ಬಗ್ಗೆಯೂ ನಾನು ತಲೆಕೆಡಿಸಿಕೊಂಡಿಲ್ಲ. ಆಪರೇಷನ್‌ ನಡೆಯದ ರೀತಿ ನಮ್ಮವರಿಗೆ ಎಲ್ಲಾ ಟ್ರೀಟ್‌ಮೆಂಟ್‌ ನಡೆದಿದೆ’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ ಸರ್ಕಾರ ಐದು ವರ್ಷ ಸ್ಥಿರವಾಗಿರಲಿದೆ. ಮಾಧ್ಯಮಗಳಲ್ಲಷ್ಟೇ ಪತನಗೊಳ್ಳುತ್ತಿದೆ. ದಿನ ಮುಂದೂಡಲಾಗುತ್ತಿದೆ. ನೀವು ಸರ್ಕಾರದ ಅಸ್ಥಿರತೆ ಬಗ್ಗೆ ಪ್ರಶ್ನಿಸುತ್ತೀರಿ. ನಾವು ಅಚಲ, ಭದ್ರ ಎನ್ನುತ್ತೇವಷ್ಟೇ’ ಎಂದರು.

1.20 ಕೋಟಿ ಕುಟುಂಬಗಳಿಗೆ ಆರೋಗ್ಯ

‘ಆರೋಗ್ಯದ ವಿಷಯದಲ್ಲಿ ಕೇಂದ್ರದ ಜತೆ ಜಟಾಪಟಿ ನಡೆಸಲ್ಲ. ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್, ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಒಟ್ಟುಗೂಡಿಸಿ 1.20 ಕೋಟಿ ಕುಟುಂಬದ 4.5 ಕೋಟಿ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸುತ್ತೇವೆ. ಇದಕ್ಕೆ ಯಾವ ವಿಶೇಷ ಗುರುತಿನ ಕಾರ್ಡ್‌ ಬೇಕಿಲ್ಲ. ಲಭ್ಯ ದಾಖಲೆಗಳನ್ನು ಪ್ರದರ್ಶಿಸಿ ರಾಜ್ಯದಲ್ಲಿ ಈ ಯೋಜನೆಗಳಡಿ ನೋಂದಾಯಿಸಿಕೊಂಡಿರುವ 500 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ಶಿವಾನಂದ ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆರೋಗ್ಯ ಖಾತೆ ವಹಿಸಿಕೊಂಡ ಬಳಿಕ 1600ಕ್ಕೂ ಹೆಚ್ಚು ಎಎನ್‌ಎಂಗಳ ನೇಮಕಾತಿ ನಡೆದಿದೆ. ಇದೇ 24ರಿಂದ ಕೌನ್ಸೆಲಿಂಗ್‌ ನಡೆಯಲಿದೆ. 200ಕ್ಕೂ ಹೆಚ್ಚು ತಜ್ಞ ವೈದ್ಯರು, 300 ಎಂಬಿಬಿಎಸ್‌ ವೈದ್ಯರನ್ನು ಗ್ರಾಮೀಣ ಪ್ರದೇಶಕ್ಕಾಗಿಯೇ ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ 350 ಆಂಬುಲೆನ್ಸ್‌ಗಳು ರಸ್ತೆಗಿಳಿಯಲಿವೆ. ಮುಂಬರುವ ಅ.2ರಂದು ರಾಜ್ಯದ ವಿವಿಧೆಡೆಯ 50ಕ್ಕೂ ಹೆಚ್ಚು ಆಸ್ಪತ್ರೆಗಳ ಕಟ್ಟಡ ಉದ್ಘಾಟನೆಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT