ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ ಪುರಸಭೆ: ಅನುಕಂಪದಿಂದ ಅಧ್ಯಕ್ಷರಾಗುವರೆ ಸುಣಗಾರ?

ಸೆ. 9ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
Published 5 ಸೆಪ್ಟೆಂಬರ್ 2024, 5:38 IST
Last Updated 5 ಸೆಪ್ಟೆಂಬರ್ 2024, 5:38 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ‘ಸಾಮಾನ್ಯ’ ಮೀಸಲಾತಿ ಹೊಂದಿವೆ.

23 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಇದರಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾದ ಸದಸ್ಯರ ಸಂಖ್ಯೆ 11, ಜೆಡಿಎಸ್ 6, ಬಿಜೆಪಿ 3 ಹಾಗೂ ಪಕ್ಷೇತರರು 3 ಜನ ಸದಸ್ಯರಿದ್ಧಾರೆ.

ಕೊನೆಯ ಅವಧಿಯ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಹಣಮಂತ ಸುಣಗಾರ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ಅನುಕಂಪ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭೆ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಸುಣಗಾರ ಬಗ್ಗೆ ಮೂಲ ಕಾಂಗ್ರೆಸ್ಸಿಗರ ಒಲವಿದೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಅವರು ಕೆಲಸ ಮಾಡಿದ್ಧಾರೆ’ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಸುಣಗಾರ ಅಧ್ಯಕ್ಷನಾಗಿ ಆಡಳಿತ ನಡೆಸುವ ತನಕ ದಾಡಿ ತೆಗೆಯುವದಿಲ್ಲ ಎಂಬುದಾಗಿ ತಿರುಪತಿ ದೇವಸ್ಥಾನಕ್ಕೆ ಹರಕೆ ಹೊತ್ತಿರುವುದು ಖುದ್ದಾಗಿ ಅವರೇ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಶರಣಪ್ಪ ಸುಣಗಾರ ಅವರು ಕಾಂಗ್ರೆಸ್ ಪುರಸಭೆ ಸದಸ್ಯರ ಸಭೆ ಕರೆದು ಹಣಮಂತ ಪರ ಅಭಿಪ್ರಾಯ ಮೂಡಿಸಲು ಮುಂದಾದಾಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಎಲ್ಲ ಸದಸ್ಯರಿಗೆ ಫೋನ್ ಮಾಡಿ ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಯಾರೂ ಆ ಸಭೆಗೆ ಹಾಜರಾಗಬಾರದು. ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಶಾಸಕರು ಕರೆದ ಸಭೆಗೆ ಮಾತ್ರ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದು ಕಳೆದ 30 ವರ್ಷಗಳಿಂದ ಪುರಸಭೆ ಚುನಾವಣೆ ರೂವಾರಿಗಳಾಗಿದ್ದ ಶರಣಪ್ಪ ಸುಣಗಾರ ಅವರನ್ನು ದೂರಿಡುವ ತಂತ್ರ ಎನ್ನಲಾಗಿದೆ.

ಶಾಂತವೀರ ಮನಗೂಳಿ ಮತ್ತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರ ಪರವಾಗಿ ಹೆಚ್ಚಿನ ಸದಸ್ಯರು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮೂಲದಿಂದ ತಿಳಿದು ಬಂದಿದೆ.

ಅಧ್ಯಕ್ಷ ಸ್ಥಾನಕ್ಕೆ 13ನೆಯ ವಾರ್ಡ್ ಸದಸ್ಯ ಶಾಂತವೀರ ಬಿರಾದಾರ ಕೂಡ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.  ಈ ಮೂವರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಎದುರಾದಾಗ ಸುಣಗಾರ ಬಗ್ಗೆ ಅನುಕಂಪ ಕೆಲಸ ಮಾಡಿದರೆ, ಮನಗೂಳಿ ಬಗ್ಗೆ ರಾಜಕೀಯ ಲಾಬಿ ನಡೆಯುತ್ತದೆ ಎನ್ನಲಾಗಿದೆ.

ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ತಮ್ಮ ಸಹೋದರನ ಪರ ನಿಲ್ಲುತ್ತಾರೋ? ಇಲ್ಲವೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕೈ ಹಿಡಿಯುತ್ತಾರೋ? ಇವರಿಬ್ಬರ ಮಧ್ಯೆ ಮೂರನೆಯ ಸದಸ್ಯ ಅಧ್ಯಕ್ಷ ಕುರ್ಚಿಗೆ ಕೂರಿಸುತ್ತಾರೋ? ಕಾದು ನೋಡಬೇಕಿದೆ ಎಂದು ವಿಶ್ಲೇಷಿಸುತ್ತಾರೆ ಸ್ಥಳೀಯರು.

ಸದಸ್ಯ ಹಣಮಂತ ಸುಣಗಾರ
ಸದಸ್ಯ ಹಣಮಂತ ಸುಣಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT