ಭಾನುವಾರ, ಮೇ 22, 2022
25 °C
ಶಾಸಕ ಎಂ.ಬಿ.ಪಾಟೀಲ ಬೆಂಬಲಿಗರ ಸಮಾಲೋಚನಾ ಸಭೆ; ಕಾರಜೋಳ ನಡೆಗೆ ಕಿಡಿ

‘ಸುಳ್ಳು ದೂರು, ತೇಜೋವಧೆ ನಿಲ್ಲಿಸಿ: ಕೊನೇ ಎಚ್ಚರಿಕೆ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಚಿವ ಗೋವಿಂದ ಕಾರಜೋಳ ಅವರು ಶಾಸಕ ಎಂ.ಬಿ.ಪಾಟೀಲ ವಿರುದ್ಧ ದಲಿತರನ್ನು ಅನಗತ್ಯವಾಗಿ ಎತ್ತಿಕಟ್ಟಿ, ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸುವುದು, ಬೆದರಿಕೆ ಹಾಕಿಸುವುದು, ತೇಜೋವಧೆ ಮಾಡಿಸುವುದು, ಪ್ರತಿಕೃತಿ ಸುಡುವುದು, ಮನೆಗೆ ಮುತ್ತಿಗೆ ಹಾಕಿಸುವುದನ್ನು ನಿಲ್ಲಿಸಬೇಕು ಎಂದು ಎಂ.ಬಿ.ಪಾಟೀಲ ಬೆಂಬಲಿಗರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ  ಎಂ.ಬಿ.ಪಾಟೀಲ ಬೆಂಬಲಿಗರು, ವಿವಿಧ ಸಂಘಟನೆಗಳ ಮುಖಂಡರು, ಕಾರಜೋಳ ಮತ್ತು ಅವರ ಬೆಂಬಲಿಗರು ಎಂ.ಬಿ.ಪಾಟೀಲ ವಿರುದ್ಧ ಪ್ರತಿಭಟನೆ, ಹೇಳಿಕೆ, ತೇಜೋವಧೆ ಮುಂದುವರಿಸಿದರೆ ಜಿಲ್ಲೆಯಾದ್ಯಂತ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಕೊನೇ ಎಚ್ಚರಿಕೆ ನೀಡಿದರು.

ಶತಮಾನಗಳ ಇತಿಹಾಸ ಇರುವ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ ಅವರು 30 ವರ್ಷಗಳಿಂದ ಶಾಸಕರಾದಗಿ, ಸಚಿವರಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ಸಲ್ಲಿಸಿದ ಸೇವೆ ಜನಮಾನಸದಲ್ಲಿ ವಿಶೇಷವಾಗಿ ರೈತ ಸಮುದಾಯದ ಬದುಕಿನಲ್ಲಿ ಬದಲಾವಣೆ ತಂದಿದೆ. ಅವರ ವಿರುದ್ಧ ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಅಟ್ರಾಸಿಟಿ(ಜಾತಿ ನಿಂದನೆ) ಪ್ರಕರಣ ದಾಖಲಿಸಲು ಕಾರಜೋಳ ಪ್ರಚೋಧನೆ ನೀಡಿರುವುದನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.

ರಾಜಕಾರಣದಲ್ಲಿ ರಾಜಕೀಯ ಒಲವು–ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯ ಸಹಜ. ಆದರೆ, ಅದನ್ನೇ ಮುಂದಿಟ್ಟುಕೊಂಡು ಇನ್ನೊಬ್ಬರ ಮನೆ ಮುಂದೆ ಹೋಗಿ ಪದೇಪದೇ ದೊಂಬಿ ಮಾಡುವುದು, ಅಶ್ಲೀಲ ಶಬ್ಧಗಳಿಂದ ನಿಂದಿಸುವುದು, ಹಲಗೆ ಬಾರಿಸುವುದು, ಘೋಷಣೆ ಕೂಗುವುದು, ತೇಜೋವಧೆ ಮಾಡುವುದು ಅವಳಿ ಜಿಲ್ಲೆಯ ಇತಿಹಾಸದಲ್ಲಿ ಎಂದೂ ಆಗಿರಲಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಅಧಿಕಾರ ಇದ್ದಾಗ ಅದನ್ನು ಸದ್ಭಳಕೆ ಮಾಡಿಕೊಂಡು ಜನಸಮುದಾಯಕ್ಕೆ ಲೋಕಹಿತ ಕಾರ್ಯಗಳನ್ನು ಮಾಡುವ ಮೂಲಕ ಇತರೆಯವರಿಗೆ ಮಾದರಿಯಾಗಬೇಕು. ಎಂ.ಬಿ.ಪಾಟೀಲ ಅವರು ಈ ಹಿಂದೆ ಸಚಿವರಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ನಿರ್ಣಾಯಕ ಹಂತಕ್ಕೆ ತಲುಪಿಸಿರುವುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರ ಮುಂದುವರಿದ ಭಾಗವನ್ನು ಈಗ ಅಧಿಕಾರದಲ್ಲಿರುವ ಕಾರಜೋಳ ಪೂರ್ಣಗೊಳಿಸಲಿ. ಯುಕೆಪಿ ಮೂರನೇ ಹಂತದ ಕಾಮಗಾರಿಗಳನ್ನು ಎಂ.ಬಿ.ಪಾಟೀಲರಂತೆ ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಿ, ಜನ ಮಾನಸದಲ್ಲಿ ಒಳ್ಳೆಯ ಕೆಲಸದಿಂದ ಶಾಶ್ವತ ಸ್ಥಾನ ಪಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡರಾದ ಅಬ್ಧುಲ್‌ ಹಮೀದ್‌ ಮುಶ್ರೀಫ್‌, ಎನ್‌.ಎಸ್‌.ಅಳ್ಳೊಳ್ಳಿ, ದಾನಮ್ಮ ಗೌಡತಿ ಪಾಟೀಲ, ಅಶೋಕ ವಾರದ, ರಾಚಪ್ಪ ಖಜ್ಜಿಡೋಣಿ, ಅಶೋಕ ಪಾಟೀಲ ಹಡಗಲಿ, ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ, ವಿ.ಎಸ್‌.ಪಾಟೀಲ, ಸೋಮನಾಥ ಬಾಗಲಕೋಟೆ, ತಮ್ಮಣ್ಣ ಹಂಗರಗಿ, ಆರ್‌.ಜಿ.ಯರನಾಳ, ಗಂಗಾಧರ ಸಾಲಕ್ಕಿ, ಚಂದ್ರಶೇಖರ ಅರಕೇರಿ, ಜಕ್ಕಪ್ಪ ಯಡವಿ, ಸಾಹೇಬಗೌಡ ಬಿರಾದಾರ ತದ್ದೇವಾಡಿ, ನಾಗರಾಜ ಹದ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾಲೋಚನ ಸಭೆಗೆ ಜಿಲ್ಲೆಯ ಮೂಲೆ, ಮೂಲೆಯಿಂದ ಆಗಮಿಸಿದ್ದ ಸಹಸ್ರಾರು ಬೆಂಬಲಿಗರಿಂದ ಕಿತ್ತೂರು ರಾಣಿ ಸಮುದಾಯ ಭವನ ಕಿಕ್ಕಿರಿದು ತುಂಬಿತ್ತು.

* ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಮನೆ, ಸಂಸ್ಥೆ ಬಿಟ್ಟು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಸಲ್ಲದ ಆರೋಪ ಬೇಡ. 

–ಡಾ.ಮಹಾಂತೇಶ ಬಿರಾದಾರ, ಕಾರ್ಯದರ್ಶಿ, ಚಿಂತನ ಸಾಂಸ್ಕೃತಿಕ ಬಳಗ, ವಿಜಯಪುರ

* ಎಂ.ಬಿ.ಪಾಟೀಲ ಮತ್ತು ಕಾರಜೋಳ ಇಬ್ಬರಲ್ಲಿ ಯಾರು ದಲಿತ ವಿರೋಧಿ, ದಲಿತರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಜನತಾ ನ್ಯಾಯಾಲಯಕ್ಕೆ ಬಿಡೋಣ

–ಸೋಮನಾಥ ಕಳ್ಳಿಮನಿ, ಅಹಿಂದ ಮುಖಂಡ, ವಿಜಯಪುರ

* ಎಂ.ಬಿ.ಪಾಟೀಲ ಅವರ ವಿರುದ್ಧ ಮುಗ್ಧ ದಲಿತರನ್ನು ಕಾರಜೋಳ ಅವರು ದುರ್ಬಳಕೆ ಮಾಡಿಕೊಳ್ಳಬಾರದಿತ್ತು. ಅವರನ್ನು ಮೇಲೆತ್ತುವ ಕೆಲಸ ಮಾಡಬೇಕಿತ್ತು 

–ಚನ್ನಪ್ಪ ಕೊಪ್ಪದ, ರೈತ ಮುಖಂಡ, ಯಕ್ಕುಂಡಿ

***

ಕಾರಜೋಳ ಮತ್ತು ಅವರ ಬೆಂಬಲಿಗರು ಸುಮ್ಮನಿರದಿದ್ದರೆ ಎಂ.ಬಿ.ಪಾಟೀಲ ಜೊತೆ ಅವಳಿ ಜಿಲ್ಲೆಯಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ಒಮ್ಮೆ ತೋರಿಸಬೇಕಾದೀತು 

–ರಮೇಶ ಬಡ್ರಿ, ರೈತ ಮುಖಂಡ, ಸಂಗಾಪುರ ಎಸ್‌.ಎಚ್‌.

***

30 ವರ್ಷಗಳಿಂದ ಲಿಂಗಾಯತರು ಕಾರಜೋಳ ಬೆನ್ನಿಗೆ ನಿಂತಿದ್ದಾರೆ. ಆದರೆ, ಲಿಂಗಾಯತ ಸಮಾಜಕ್ಕೆ ಅವರು ಏನು ಮಾಡಿಲ್ಲ. ಕಾರಜೋಳ ತಿಳಿದುಕೊಂಡಷ್ಟು ಲಿಂಗಾಯತರು ಸರಳವಾಗಿಲ್ಲ  

–ಹೊನಮಲ್ಲ ಸಾರವಾಡ, ಲಿಂಗಾಯತ ಮುಖಂಡ, ಹೊನ್ನುಟಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು