ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

 ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಭೂಬಾಲನ್ 

ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ 
Published 10 ಮೇ 2024, 15:46 IST
Last Updated 10 ಮೇ 2024, 15:46 IST
ಅಕ್ಷರ ಗಾತ್ರ

ವಿಜಯಪುರ: ಸತತ ಪರಿಶ್ರಮ ಹಾಗೂ ಆತ್ಮಸ್ಥೈರ್ಯದಿಂದ ಬದುಕಿನಲ್ಲಿ ಸಾಧನೆಗೈಯ್ಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ  ಸಾಧನೆಗೈದ ಜಿಲ್ಲೆಯ ವಿವಿಧ ಮಾಧ್ಯಮಗಳಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು. 

ಬಡತನ ಮತ್ತು ಬದುಕಿನ ಕಷ್ಟ ಕಾರ್ಪಣ್ಯಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸತತ ಓದಿನಿಂದ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಉತ್ತಮ ಸಾಧನೆಗೈದ ನೀವು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ಎಂದರು.

ಇಂದಿನ ವಿದ್ಯಾರ್ಥಿಗಳು ನಿರಂತರ ಓದು, ಕರಾರುವಾಕ್ಕಾದ ಅಧ್ಯಯನ ಇತ್ಯಾದಿ ಕೌಶಲಗಳನ್ನು ಕಾಲಕ್ಕೆ ತಕ್ಕಂತೆ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ,  ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಜಿಲ್ಲೆಗೆ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ವಿಶೇಷ ಗೌರವ ತಂದುಕೊಟ್ಟಿರುವುದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ಸಂಗತಿಯಾಗಿದೆ ಎಂದರು.

ವಿದ್ಯಾರ್ಥಿಗಳ ಸತತ ಪರಿಶ್ರಮ, ಶಿಕ್ಷಕರ ಕಾರ್ಯತತ್ಪರತೆ ಮತ್ತು ಇಲಾಖಾ ಅಧಿಕಾರಿಗಳ ಸಮಯೋಚಿತ ಮಾರ್ಗದರ್ಶನ ಮತ್ತು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವ್ಯವಸ್ಥೆಯ ನೈತಿಕ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದ್ದು, ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದು, ಹೆಮ್ಮೆಯ ವಿಷಯ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಈ ಸಾಧನೆಗಾಗಿ ಅಭಿನಂದನಾರ್ಹವಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಇನ್ನಷ್ಟು ಉತ್ತಮ ಸಾಧನೆಗೆ ಪ್ರೊತ್ಸಾಹಿಸಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಉಮಾದೇವಿ ಸೊನ್ನದ, ಶಿಕ್ಷಣಾಧಿಕಾರಿ ಡಾ.ಅಶೋಕ ಮ. ಲಿಮಕರ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಬಸವರಾಜ ತಳವಾರ, ಪ್ರಮೋದಿನಿ ಬಳೋಳಮಟ್ಟಿ, ಬಸವರಾಜ ಎಸ್.ಸಾವಳಗಿ ಮತ್ತು  ವಿದ್ಯಾರ್ಥಿಗಳು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಪಾಲಕರು, ಪೋಷಕರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT