ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಪುರ ಸಂತ್ರಸ್ತರಿಗೆ ಲಭಿಸಿದ ಶಾಶ್ವತ ನೆಲೆ

ನಿವೇಶನ ಹಕ್ಕುಪತ್ರ ವಿತರಣೆ; ಸಚಿವೆ ಶಶಿಕಲಾ ಜೊಲ್ಲೆ ಸಂತಸ
Last Updated 9 ಆಗಸ್ಟ್ 2021, 13:48 IST
ಅಕ್ಷರ ಗಾತ್ರ

ವಿಜಯಪುರ: ಭೀಮಾ ನದಿಗೆ ನಿರ್ಮಿಸಲಾಗಿರುವಸೊನ್ನಾ ಬ್ಯಾರೇಜ್ ಹಿನ್ನೀರಿನಿಂದ ಪ್ರತಿ ವರ್ಷ ಸಮಸ್ಯೆ ಅನುಭವಿಸುತ್ತಿದ್ದ ತಾರಾಪುರ ಗ್ರಾಮಸ್ಥರಿಗೆ ಶಾಶ್ವತ ನೆಲೆ ಕಲ್ಪಿಸಲಾಗಿದೆ ಎಂದುಮುಜರಾಯಿ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಂತಸ ವ್ಯಕ್ತಪಡಿಸಿದರು.

ಸಿಂದಗಿ ತಾಲ್ಲೂಕಿನ ತಾರಾಪುರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾಗಲಿರುವ ಅರ್ಹ 47 ಫಲಾನುಭವಿಗಳಿಗೆ ಸೋಮವಾರ ನಿವೇಶನ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ದಶಕದಿಂದ ನನೆಗುದಿಗೆ ಬಿದ್ದಿದ್ದ ತಾರಾಪುರದ ಸಂತ್ರಸ್ತರ ಸ್ಥಳಾಂತರ ಸಮಸ್ಯೆಗೆ ಕೊನೆಗೂ ಪರಿಹಾರ ಲಭಿಸಿದೆ. ನನ್ನ ಜೀವನದಲ್ಲಿ ಮರೆಯಲಾಗದ ದಿನ ಇದಾಗಿದೆ ಎಂದರು.

18 ಎಕರೆ 5 ಗುಂಟೆ ಜಾಗದಲ್ಲಿ 261 ನಿವೇಶನಗಳಿದ್ದು, 246 ಅರ್ಹ ಫಲಾನುಭವಿಗಳಿದ್ದಾರೆ. 2016ರಲ್ಲಿ 199 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇನ್ನುಳಿದ 47 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಗೊಂದಲವಾಗಿತ್ತು. ಇದೀಗ ಎಲ್ಲ ಫಲಾನುಭವಿಗಳಿಗೂ ಹಂಚಿಕೆಯಾಗಿದೆ ಎಂದು ಹೇಳಿದರು.

ಇನ್ನುಳಿದ15 ನಿವೇಶನಗಳನ್ನು ಶಾಲೆ, ಅಂಗನವಾಡಿ, ಸಮುದಾಯ ಭವನ, ದೇವಾಲಯ, ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಾಗೂಅಂಗವಿಕಲರು, ವಿಧವೆಯರು, ಮದುವೆಯಾಗದ ಹೆಣ್ಣು ಮಕ್ಕಳಿಗೆ ನೀಡಲಾಗುವುದು ಎಂದರು.

ಹಕ್ಕುಪತ್ರ ವಿತರಣೆ ಸಾಕಷ್ಟು ಗೊಂದಲದಿಂದ ಕೂಡಿತ್ತು. ಅಧಿಕಾರಿಗಳು ಕಷ್ಟಪಟ್ಟು ಸಮಸ್ಯೆ ಬಗೆಹರಿಸಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಿದ್ದಾರೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಜಲ ಜೀವನ್ ಮಿಷನ್ ಅಡಿ ಪ್ರತಿ ಮನೆಗೆ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿ, ತಾರಾಪುರದ ಜನರಿಗೆ ಇಂದು ಒಳ್ಳೆಯ ದಿನ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆ ಪರಿಹಾರವಾಗಿದೆ‌. ಉಪವಿಭಾಗಾಧಿಕಾರಿ ರಾಹುಲ್‌ ಸಿಂಧೆ ಅವರು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಹಂಚಿಕೆ ವಿಳಂಬವಾಯಿತು. ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಿಂದ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಶಾಪಗ್ರಸ್ತ ತಾರಾಪುರಕ್ಕೆ ಜೊಲ್ಲೆ ಅವರು ವಿಮೋಚನೆ ದೊರಕಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸಿಂದಗಿ ಉಪ ಚುನಾವಣೆ ಇರುವುದರಿಂದ ಈ ವಿಷಯಕ್ಕೆ ಕೈಹಾಕಿದರೆ ರಾಜಕೀಯ ಪ್ರವೇಶವಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರಿಗೆ ಹೇಳದ್ದೆ. ಆದರೆ, ಡಿಸಿ, ಎಸಿ ಅವರು ಬದ್ಧತೆಯಿಂದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವ ಮೂಲಕ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಸಂತ್ರಸ್ತರು ಆದಷ್ಟು ಬೇಗ ಹೊಸ ಗ್ರಾಮಕ್ಕೆ ಸ್ಥಳಾಂತರವಾಗಬೇಕು. ಪ್ರತಿವರ್ಷ ಸಮಸ್ಯೆ ಅನುಭವಿಸುವುದು ಇಲ್ಲಿಗೆ ಕೊನೆಯಾಗಬೇಕು ಎಂದು ಹೇಳಿದರು.

ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಹಳೆಯ ಊರನ್ನು ಬಿಟ್ಟು ಹೋಗಲು ಮನಸ್ಸಿಗೆ ಬೇಸರ ಸಹಜ. ಆದರೂ ಹೊಸ ತಾರಾಪುರಕ್ಕೆ ಸ್ಥಳಾಂತರವಾಗಲೇಬೇಕು. ಇಲ್ಲವಾದರೆ ಸರ್ಕಾರವೇ ಸ್ಥಳಾಂತರ ಮಾಡಬೇಕಾಗುತ್ತದೆ ಎಂದರು.

ಗ್ರಾಮಸ್ಥ ಶಾಂತನಗೌಡ ಬಿರಾದಾರ ಮಾತನಾಡಿ, ನಿವೇಶನ ಹಕ್ಕುಪತ್ರ ನೀಡಿದ್ದೀರಿ. ಆದರೆ,ಮನೆ ಕಟ್ಟಲು ನೆರವು ನೀಡಬೇಕು. ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನೀಡಬೇಕು.ರಸ್ತೆ, ಮೂಲ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಸಂತ್ರಸ್ತರ ಬೇಡಿಕೆಗಳ ಕುರಿತು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಸಚಿವೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಉಪ ವಿಭಾಧಿಕಾರಿ ರಾಹುಲ್ ಶಿಂಧೆ,ಮಾಜಿ ಶಾಸಕ ರಮೇಶ ಭೂಸನೂರ,
ಕಡಣಿ ಗ್ರಾ.ಪಂ. ಅಧ್ಯಕ್ಷೆ ಶಿವಗಂಗಮ್ಮ ತಳವಾರ, ಕರ್ನಾಟಕ ನೀರಾವರಿ ನಿಗಮದ ಅಫಜಲಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ ಜಾಕಾ ಉಪಸ್ಥಿತರಿದ್ದರು.

***

ಹಕ್ಕುಪತ್ರ ಸಿಕ್ಕಿದ ಮೇಲೆ ಹಳೇ ಮನೆಗಳನ್ನು ಬಿಟ್ಟು ಹೊಸ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಸ್ಥಳಾಂತರವಾಗಬೇಕು

–ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT