ಬುಧವಾರ, ನವೆಂಬರ್ 25, 2020
26 °C

ಕನ್ನಡ ಭಾಷೆ, ಭಾರತೀಯ ಸಂಸ್ಕೃತಿ ಕಲಿಸಿ: ಶಶಿಕಲಾ ಜೊಲ್ಲೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಂದೆ, ತಾಯಂದಿಯರು ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಕಲಿಸಲು ಆದ್ಯತೆ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ 65ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕವೆಂದರೆ ಕೇವಲ ದೇಶಾಭಿಮಾನವಲ್ಲ, ಕೇವಲ ಭಾಷಾಭಿಮಾನವಲ್ಲ, ಕೇವಲ ಇತಿಹಾಸಾಭಿಮಾನವಲ್ಲ; ಅದು ಇವೆಲ್ಲವುಗಳನ್ನು ಮೀರಿದ, ಇವೆಲ್ಲವುಗಳನ್ನು ಒಳಗೊಂಡ ಪರಿಶುದ್ಧ ಭಾವನೆ ಎಂದು ಹೇಳಿದರು.

ಶತ, ಶತಮಾನಗಳಿಂದಲೂ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಏಕೀಕರಿಸಿ, ಕನ್ನಡದ ನಾಡು, ನುಡಿಗಳು ಪ್ರಜ್ವಲವಾಗಿ ಬಾಳಿ–ಬೆಳಗಬೇಕೆಂದು ಹಂಬಲಿಸಿ, ಹಲವಾರು ವರ್ಷಗಳವರೆಗೆ ನಿರ್ಣಾಯಕ ಹೋರಾಟ ನಡೆಸಿದ ನಿಸ್ವಾರ್ಥ ಕನ್ನಡ ಕಲಿಗಳು ಸಂಪೂರ್ಣ ನೆಮ್ಮದಿ ಮತ್ತು ಸಂತೃಪ್ತಿಯನ್ನು ಅನುಭವಿಸಿದ ದಿನ ನವೆಂಬರ್‌ 1 ಎಂದು ಹೇಳಿದರು. 

‘ಒಬ್ಬ ವ್ಯಕ್ತಿಯನ್ನು ಆತನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿಸಿದರೆ ಆ ಮಾತುಗಳು ಆತನ ತಲೆಯನ್ನು ತಲುಪುತ್ತವೆ. ಆದರೆ, ಅದೇ ವ್ಯಕ್ತಿಯನ್ನು ಆತನ ಮಾತೃ ಭಾಷೆಯಲ್ಲಿ ಮಾತನಾಡಿಸಿದರೆ ಆ ಮಾತುಗಳು ಆತನ ಹೃದಯ ತಲುಪುತ್ತದೆ’ ಎಂಬ ನೆಲ್ಸನ್‌ ಮಂಡೇಲಾ ಅವರು ಮಾತುಗಳನ್ನು ಉದಾಹರಿಸುವ ಮೂಲಕ ಮಾತೃ ಭಾಷೆಯ ಮಹತ್ವದ ಬಗ್ಗೆ ತಿಳಿಸಿದರು.

ಸುಶ್ರಾವ್ಯವಾಗಿ ಹಾಡಿದ ಸಚಿವೆ: ಭಾಷಣ ಆರಂಭಿಸುವ ಮುನ್ನಾ ಸಚಿವೆ ಶಶಿಕಲಾ ಜೊಲ್ಲೆ ‘ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೇ, ಭಾಷಣದ ನಡುವೆ ಕವನಗಳನ್ನು ವಾಚಿಸಿದರು.

ಗಮನ ಸೆಳೆದ ಪರೇಡ್‌ ಕಮಾಂಡರ್‌: ರಾಜ್ಯೋತ್ಸವದಲ್ಲಿ ಪೊಲೀಸ್‌, ಅಗ್ನಿ ಶಾಮಕ ಸಿಬ್ಬಂದಿಯಿಂದ ನಡೆದ ಆಕರ್ಷಕ ಪಥ ಸಂಚನದ ಬಳಿಕ ಕೊನೆಯಲ್ಲಿ ಪರೇಡ್‌ ಕಮಾಂಡರ್‌ ಶಂಕರಗೌಡ ಡಿ.ಪಾಟೀಲ ಅವರು ಕನ್ನಡದಲ್ಲಿ ಪಥ ಸಂಚಲನ ನಿರ್ಗಮನದ ಅನುಮತಿಯನ್ನು ಸಚಿವರ ಬಳಿ ಕೇಳುವ ಮೂಲಕ ಗಮನ ಸೆಳೆದರು.

ನಡೆಯದ ಸಾಂಸ್ಕೃತಿಕ ಕಾರ್ಯಕ್ರಮ: ಕೋವಿಡ್‌ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಕೇವಲ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ಪಥಸಂಚಲನ, ಸಾಧಕರಿಗೆ ಸನ್ಮಾನ ಹಾಗೂ ರಾಜ್ಯೋತ್ಸವ ಸಂದೇಶಕ್ಕೆ ಕಾರ್ಯಕ್ರಮ ಸೀಮಿತವಾಯಿತು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಪೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಓಂಕಾರ ಕಾಕಡೆ ‌ ಉಪಸ್ಥಿತರಿದ್ದರು.

ಕೊರೊನಾ ವಾರಿಯರ್ಸ್‌ಗೆ ಸನ್ಮಾನ
ವಿಜಯಪುರ: ಕೋವಿಡ್‌ ವಾರಿಯರ್ಸ್‌ಗಳಾದ ಜಿಲ್ಲೆಯ ವೈದ್ಯರು, ನರ್ಸ್‌, ಪೊಲೀಸ್, ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಖಾಸಗಿ ಆಸ್ಪತ್ರೆ ವೈದ್ಯರನ್ನು ವಿಶೇಷವಾಗಿ ಸನ್ಮಾನಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕಾ ಡಾ.ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ. ಎಂ.ಬಿ.ಬಿರಾದಾರ ಸೇರಿದಂತೆ ಪ್ರಮುಖರನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸನ್ಮಾನಿಸಿದರು.

ರಾಜ್ಯೋತ್ಸವ ಪುರಸ್ಕಾರ: ಸಾಹಿತ್ಯ, ಕನ್ನಡ ಸೇವೆ, ಸಂಗೀತ, ನೃತ್ಯ, ಜಾನಪದ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಕೃಷಿ, ತೋಟಗಾರಿಕೆ, ಪತ್ರಿಕೋದ್ಯಮ, ಕ್ರೀಡೆ, ರಂಗಭೂಮಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 20 ಜನರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು