ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಹೆಚ್ಚಿಸಿದ ರಿಯಲ್‌ ಎಸ್ಟೇಟ್‌ ಮಾಫಿಯಾ; ಮನೆ, ಸೈಟು ಖರೀದಿಸುವುದು ದುಸ್ತರ

ಬಡವರಿಗೆ ಸೂರು ಗಗನಕುಸುಮ
Last Updated 9 ನವೆಂಬರ್ 2020, 12:27 IST
ಅಕ್ಷರ ಗಾತ್ರ

ವಿಜಯಪುರ:ಕೋವಿಡ್‌ನಿಂದ ಆರ್ಥಿಕ ಪರಿಸ್ಥಿತಿ ಏರುಪೇರಾದರೂ ಜಿಲ್ಲೆಯಲ್ಲಿ ನಿವೇಶನ, ಹೊಸ ಮನೆಗಳ ಬೆಲೆ ಇಳಿದಿಲ್ಲ. ರಿಯಲ್‌ ಎಸ್ಟೇಟ್‌ ಮಾಫಿಯಾದಿಂದ ಬಡವರಿಗೆ ಕನಸಿನ ಸೈಟು, ಪ್ಲಾಟು ಖರೀದಿಸುವುದು ದುಸ್ತರವಾಗಿದೆ.

ಸ್ವಂತ ಸೂರು ಪ್ರತಿಯೊಬ್ಬರ ಕನಸು. ಎಲ್ಲವೂ ತುಟ್ಟಿಯಾಗಿರುವ ಈ ಕಾಲದಲ್ಲಿ ನಿವೇಶನ ಹೊಂದುವುದೇ ಕಷ್ಟ. ಇನ್ನು ಮನೆ ಕನಸಿನ ಗೋಪುರವಷ್ಟೆ ಎಂಬುದು ಮನೆಯಿಲ್ಲದ ಬಡ ಜನತೆಯ ಮಾತು. ಇಂತವರ ನೆರವಿಗೆಂದೆ ಇರುವ ಕರ್ನಾಟಕ ಗೃಹ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ವಸತಿ ಯೋಜನೆಗಳಡಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಹತ್ತಾರು ಬಡಾವಣೆ, ನಿವೇಶನ, ಮನೆಗಳನ್ನು ನಿರ್ಮಿಸಿ ಆಯ್ದ ಫಲಾನುಭವಿಗಳಿಗೆ ನೀಡುವ ಕಾರ್ಯ ಮಂದಗತಿಯಲ್ಲಿ ಸಾಗಿದೆ.

ಜಿಲ್ಲೆಯ ಪ್ರತಿ ನಗರ, ಪಟ್ಟಣಗಳಲ್ಲೂ ಬಡವರು ಸೂರಿಗಾಗಿ ಕಾದು ಕುಳಿತಿದ್ದಾರೆ. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ವಿವಿಧ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಮನೆಗಳ ಕೆಲಸ ಸ್ಥಗಿತಗೊಂಡಿದೆ.

ಕರ್ನಾಟಕ ಗೃಹ ಮಂಡಳಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳು ಮತ್ತು ಮನೆಗಳ ಬೆಲೆ ಖಾಸಗಿ ಬಡಾವಣೆಗಳಿಗಿಂತ ಅಧಿಕವಾಗಿರುವುದರಿಂದ ಹಾಗೂ ನಗರ, ಪಟ್ಟಣದ ಹೊರವಲಯದಲ್ಲಿ ಬಡಾವಣೆಗಳನ್ನು ನಿರ್ಮಿಸುವುದರಿಂದ ಜನರು ಖರೀದಿಸಲು ಮುಂದೆ ಬರುತ್ತಿಲ್ಲ.

‘ಸರ್ಕಾರ ನಿಗದಿ ಪಡಿಸಿರುವ ಬೆಲೆಗೂ, ಮಾರುಕಟ್ಟೆ ಬೆಲೆಗೂ ಅಜಗಜಾಂತರ ವ್ಯತ್ಯಾಸವಿರುವುದರಿಂದ ಹೊಸ ಬಡಾವಣೆ ನಿರ್ಮಿಸಲು ಭೂಮಿ ಖರೀದಿಸಲು ಗೃಹ ಮಂಡಳಿಗೆ ಕಷ್ಟವಾಗಿದೆ. ಸರ್ಕಾರ ನಿಗದಿಪಡಿಸಿರುವ ಬೆಲೆಗೆ ಭೂಮಿ ಕೊಡಲು ರೈತರು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಗೃಹ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ್‌ ಮೆಣಸಗಿ.

ಸದ್ಯ ರೈತರಿಂದ ಖರೀದಿಸುವ ಭೂಮಿಗೆ ಹಣವನ್ನು ನೀಡುವ ಬದಲು 50:50 ಅಥವಾ 60:40 ಅನುಪಾತದಲ್ಲಿ ನಿವೇಶನವನ್ನೇ ಹಂಚಿಕೆ ಮಾಡುತ್ತೇವೆ. ಭೂ ಮಾಲೀಕರಿಗೆ ಗೃಹ ಮಂಡಳಿ ಅಭಿವೃದ್ಧಿ ಪಡಿಸಿದ ನಿವೇಶನವನ್ನು ನೀಡಲಿದ್ದು, ಅವರು ಅವುಗಳನ್ನು ಮಾರಾಟ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಎಲ್ಲ ಹಳೇ ತಾಲ್ಲೂಕು ಕೇಂದ್ರಗಳಲ್ಲಿ ಗೃಹ ಮಂಡಳಿಯಿಂದ ಬಡಾವಣೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಹೊಸ ತಾಲ್ಲೂಕುಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಗೃಹ ಮಂಡಳಿ ನಿವೇಶನ, ಮನೆ ಖರೀದಿಗೆ ಜನ ಆಸಕ್ತಿ ವಹಿಸುತ್ತಾರೆ. ಆದರೆ, ಹಣ ಪಾವತಿಗೆ ಕಂತಿನ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಇದೆ ಎಂದು ಮೆಣಸಗಿ ಹೇಳುತ್ತಾರೆ.

ಒಲವು ತೋರದ ಜನ: ವಿಜಯಪುರ ನಗರದಲ್ಲಿ ಖಾಸಗಿ ಲೇಔಟ್‌ಗಳು ಮತ್ತು ಗುಂಟಾ ಪ್ಲಾಟ್‌ಗಳು ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ಜನರುಗೃಹ ಮಂಡಳಿಯತ್ತ ಹೆಚ್ಚು ಒಲವು ತೋರುತ್ತಿಲ್ಲ. ಗೃಹ ಮಂಡಳಿ ನಿರ್ಮಿಸಿರುವ ಬಡಾವಣೆಗಳಲ್ಲಿರುವ ಅನೇಕ ಮನೆಗಳು ಪಾಳು ಬಿದ್ದಿವೆ. ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ವಿಜಯಪುರ ನಗರದಲ್ಲಿ ಖಾಸಗಿ ಲೇಔಟ್‌ಗಳ ಹಾವಳಿಗೆ ಕಡಿವಾಣ ಹಾಕಲು ಹಾಗೂ ಗುಂಟಾ ಪ್ಲಾಟ್‌ಗಳಿಂದ ಆಗುತ್ತಿರುವ ಮೋಸವನ್ನು ತಡೆಯುವ ಉದ್ದೇಶದಿಂದವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಬಡಾವಣೆಗಳ ನಿರ್ಮಾಣಕ್ಕೆ ಯೋಜನೆ ಕೈಗೆತ್ತಿಕೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿವೇಶನ ಹಂಚಿಕೆಯಲ್ಲಿ ವಿಳಂಬ: ಸಿಂದಗಿ ಪುರಸಭೆಯಲ್ಲಿ ಸೂರಿಲ್ಲದವರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ ಎದ್ದು ಕಾಣುತ್ತಿದೆ. ಅಂತರಗಂಗಿ ರಸ್ತೆಯಲ್ಲಿ 10 ಎಕರೆ 5 ಗುಂಟೆ ಜಮೀನು ಖರೀದಿಸಿ 411 ಪ್ಲಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಫಲಾನುಭವಿಗಳ ಆಯ್ಕೆಯೂ ಮಾಡಲಾಗಿದ್ದು, ಇದರಲ್ಲಿ 186 ಫಲಾನುಭವಿಗಳಿಗೆ ಹಕ್ಕು ಪತ್ರ ಕೂಡ ನೀಡಿ ವರ್ಷಗಳೇ ಗತಿಸಿವೆ. ಆದರೆ, ಇನ್ನೂ ನಿವೇಶನಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಾರಂಭವಾಗದೇ ನನೆಗುದಿಗೆ ಬಿದ್ದಿದೆ.

ಇದೇ ರೀತಿ ಆಲಮೇಲ ರಸ್ತೆಯಲ್ಲಿಯೂ 14 ಎಕರೆ ಜಮೀನು ಖರೀದಿಸಿದ್ದರೂ ನಿವೇಶನ ನಕ್ಷೆ ಸಿದ್ಧಗೊಂಡಿಲ್ಲ. ಅಲ್ಲದೇ, 24 ಎಕರೆ ಜಮೀನು ಅಂತರಗಂಗಿ ರಸ್ತೆಯಲ್ಲಿಯೇ ಗುರುತಿಸಲಾಗಿದೆ. ಇನ್ನೂ ಪುರಸಭೆ ಹೆಸರಿಗೆ ಹಸ್ತಾಂತರವಾಗಿಲ್ಲ.

ವಸತಿ ರಹಿತರಿಗಾಗಿ 500 ಮನೆಗಳ ನಿರ್ಮಾಣ: ಬಸವನಬಾಗೇವಾಡಿ ಪಟ್ಟಣದಿಂದ 2 ಕಿ.ಮೀ ದೂರದ ಇಂಗಳೇಶ್ವರ ರಸ್ತೆ ಬದಿಯ 11 ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ಜಿ+1 ಮಾದರಿಯ 250 ನಿವೇಶನದಲ್ಲಿ 500 ಮನೆಗಳ ನಿರ್ಮಾಣ ಕಾರ್ಯ ಶೇ 90 ರಷ್ಟಾಗಿದೆ. ಪುರಸಭೆಯು ಈಗಾಗಲೇ ಫಲಾನುಭವಿಗಳನ್ನು ಆಯ್ಕೆ ಮಾಡಿದೆ.

ಫಲಾನುಭವಿಗಳಿಗೆ ಹಣ ತುಂಬಲು ತೊಂದರೆಯಾಗಬಾರದು ಎಂಬ ಉದ್ಧೇಶದಿಂದ ಅವರಿಗೆ ಬ್ಯಾಂಕ್ ಸಾಲ, ಸೌಲಭ್ಯ ಸೇರಿದಂತೆ ಪ್ರತಿ ದಿನ ಪಿಗ್ಮಿ ಮೂಲಕ ಹಣ ಜಮಾ ಮಾಡುವ ಅನುಕೂಲತೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಶೇ 20 ರಷ್ಟು ಫಲಾನುಭವಿಗಳು ತಮ್ಮ ಪಾಲಿನ ಹಣ ಜಮಾ ಮಾಡಿದ್ದಾರೆ.

ಇಂಡಿಯಲ್ಲಿ ಹಂಚಿಕೆ: ಇಂಡಿ ಪುರಸಭೆಯ ವ್ಯಾಪ್ತಿಯಲ್ಲಿ 2013ರಿಂದ 2018ರ ವರೆಗೆ ವಾಜಪೇಯಿ ಅರ್ಬನ್ ಹೌಸಿಂಗ್ ಯೋಜನೆಯಡಿಯಲ್ಲಿ 643 ಮನೆಗಳನ್ನು ಹಂಚಿಕೆ ಮಾಡಲಾಗಿದೆ.ಡಾ. ಬಿ.ಆರ್.ಅಂಬೇಡ್ಕರ್ ನಿವಾಸ್‌ ಯೋಜನೆಯ ಅಡಿಯಲ್ಲಿ 2015 ರಿಂದ 2018ರ ವರೆಗೆ ಒಟ್ಟು 441 ಮನೆಗಳನ್ನು ವಿತರಣೆ ಮಾಡಲಾಗಿದೆ.

ನಿವೇಶನ ಹಂಚಿಕೆ ನನೆಗುದಿಗೆ

ಮುದ್ದೇಬಿಹಾಳದಲ್ಲಿ ನಿವೇಶನ ಹಂಚಿಕೆ ನನೆಗುದಿಗೆ ಬಿದ್ದಿದೆ. ನಾಲತವಾಡ ರಸ್ತೆಯಲ್ಲಿ 70 ಎಕರೆ ಭೂಮಿ ಗೃಹ ಮಂಡಳಿ ಖರೀದಿಸಿ, ಅಲ್ಲಿ 800 ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲು ಉದ್ದೇಶಿಸಿದೆ. ಜೊತೆಗೆ ಅಲ್ಲಿಯೇ 30 ಮನೆಗಳನ್ನು ಸಹ ಕಟ್ಟಿದೆ. ಆದರೆ, ಅಲ್ಲಿ ಎಲ್ಲ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಶೇ 30 ರಷ್ಟು ಹಣ ಕಟ್ಟಬೇಕೆಂಬ ನಿಯಮದಡಿಯಲ್ಲಿ ಒಂದಿಷ್ಟು ಹಣ ಕಟ್ಟಿದ್ದಾರೆ. ನಂತರ ಸರಿಯಾಗಿ ಹಣ ಕಟ್ಟದೇ ಇರುವುದರಿಂದ ಯೋಜನೆ ಅರ್ಧದಲ್ಲಿಯೇ ನಿಂತಿದೆ.

ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ ಮೆಣಸಗಿ, ‘ಇಲ್ಲಿ ಎಲ್ಲವೂ ಸರಿಯಾಗಿದೆ. ಮಂಡಳಿಯವರು ರಸ್ತೆ, ವಿದ್ಯುತ್ ಸಂಪರ್ಕ, ಚರಂಡಿ ಎಲ್ಲ ಸಿದ್ಧಪಡಿಸಿ ಕೊಟ್ಟಿದ್ದಾರೆ. ಅವರು ಕೇಳಿದಷ್ಟು ಹಣ ಕಟ್ಟಿದ್ದೇವೆ, ಆದರೆ, ಇದನ್ನು ಪುರಸಭೆ ಈವರೆಗೆ ತನ್ನ ಸುಪರ್ದಿಗೆ ಪಡೆದಿಲ್ಲ’ ಎಂದರು.

ಎರಡನೆಯ ಹಂತದ ಯೋಜನೆಯಲ್ಲಿ ತಯಾರಾಗಿರುವ ಮನೆಗಳಲ್ಲಿ ಕೆಲವು ಜನ ವಾಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ದೂರದ ಬಡಾವಣೆಯಲ್ಲಿ ಭಯ ಕಾಡುತ್ತಿದೆ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ಪಟ್ಟಣದಿಂದ ನೀರು ಹೊತ್ತು ತರಬೇಕು. ಎಂಟು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾರೆ ಅದು ಸಾಲುವುದಿಲ್ಲ ಎಂದು ಅಲ್ಲಿಯ ನಿವಾಸಿ ಜನ್ನತುಲ್ಲಾ ಫಿರ್ದೋಶ ಹೇಳಿದರು.

ರದ್ದಾದ 3ನೇ ಹಂತ: ಪಟ್ಟಣದಲ್ಲಿ ಗೃಹ ಮಂಡಳಿ ಮೂರನೇ ಹಂತದಲ್ಲಿ ಹಡಲಗೇರಿ ಹಾಗೂ ಬಿದರಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 200 ಎಕರೆ ಭೂಮಿ ಖರೀದಿಸಿತ್ತು. ಇದರಲ್ಲಿ ನಿವೇಶನ ಪಡೆಯಲು ಒಂದು ಸಾವಿರಕ್ಕೂ ಹೆಚ್ಚು ಜನ ₹72 ಲಕ್ಷ ಹಣ ತುಂಬಿದ್ದಾರೆ. ಆದರೆ, ರಾಜಕೀಯ ಕಾರಣಗಳಿಗಾಗಿ ಇಡೀ ಯೋಜನೆ ರದ್ದಾಗಿದ್ದು, ಬಹುತೇಕ ಮಧ್ಯಮ ವರ್ಗದವರು ನಿವೇಶನ, ಮನೆ ಕಟ್ಟಿಕೊಳ್ಳುವ ಕನಸು ನನಸಾಗಲಿಲ್ಲ. ಜನರು ತುಂಬಿದ ಹಣ ಇನ್ನೂ ಗೃಹ ಮಂಡಳಿ ಖಾತೆಯಲ್ಲಿಯೇ ಇದೆ. ಅದನ್ನು ವಾಪಸ್ ಪಡೆಯಲು ಹೋರಾಟ ಮಾಡಲಾಗುತ್ತಿದೆ ಎನ್ನುತ್ತಾರೆಸಾಮಾಜಿಕ ಹೋರಾಟಗಾರ ಅರವಿಂದ ಕೊಪ್ಪ.

---

ವರದಿ ಮಾಡಿದ ಪ್ರಜಾವಾಣಿತಂಡ: ಬಸವರಾಜ್‌ ಸಂಪಳ್ಳಿ,ಶಾಂತೂ ಹಿರೇಮಠ, ಮಹಾಬಲೇಶ್ವರ ಗಡೇದ, ಪ್ರಕಾಶ ಮಸಬಿನಾಳ, ಎ.ಸಿ.ಪಾಟೀಲ, ಎಸ್‌.ಎಸ್.ಗಡೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT