ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲು ದ್ರವ ಸಂಗ್ರಹವೇ ನಿತ್ಯ ಕಾಯಕ: ಪ್ರಶಾಂತ ಎಸ್‌. ಕುಂಬಾರ

Last Updated 11 ಮೇ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಕಳೆದ ಒಂಬತ್ತು ತಿಂಗಳಿಂದ ಪ್ರತಿ ದಿನ 150ರಿಂದ 200 ಜನರ ಗಂಟಲು ದ್ರವ(ಕೋವಿಡ್‌ ಸ್ವ್ಯಾಬ್‌) ಸಂಗ್ರಹ ಮಾಡುತ್ತಾ ಬರುತ್ತಿದ್ದೇನೆ. ಇವರಲ್ಲಿ ಎಷ್ಟೋ ಜನ ಪಾಸಿಟಿವ್‌ ಇರುತ್ತಾರೋ ಗೊತ್ತಿರುವುದಿಲ್ಲ. ಆದರೂ ಎಲ್ಲರನ್ನೂ ಆರ್‌ಟಿಪಿಸಿಆರ್‌ಪರೀಕ್ಷೆ ಮಾಡುವ ಕಾಯಕ ನಮ್ಮದು ಎನ್ನುತ್ತಾರೆ ವಿಜಯಪುರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎನ್‌ಸಿಡಿ ಪ್ರೋಗ್ರಾಂ ಅಡಿ ಸ್ಟಾಪ್‌ ನರ್ಸ್‌ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪ್ರಶಾಂತ ಎಸ್‌.ಕುಂಬಾರ.

ನನ್ನಂತೆ ಸ್ಟಾಫ್‌ ನರ್ಸ್‌ಗಳಾದ ಬಾನು ಬಿರಾದಾರ, ಮಂಜುನಾಥ ಹೆರಕಲ್‌, ಪ್ರೇರಣಾ ಸಾಳ್ವೆ, ಸಾವಕ್ಕ ಜಾನಮಟ್ಟಿ ಸೇರಿದಂತೆ ಐವರು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಪಾಳೆ ಪ್ರಕಾರ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ತೊಡಗುತ್ತೇವೆ.

ನಾವು ಕಾರ್ಯನಿರ್ವಹಿಸುವ ವಾತಾವರಣದಲ್ಲಿ ಬಹುಬೇಗ ಕೋವಿಡ್‌ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪಿಪಿಇ ಕಿಟ್‌ ಧರಿಸಿ, ಡಬಲ್‌ ಮಾಸ್ಕ್‌ ಧರಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತೇವೆ. ಈಗಾಗಲೇ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದೇವೆ. ಹೀಗಾಗಿ ಧೈರ್ಯದಿಂದ ಸ್ವ್ಯಾಬ್‌ ಪರೀಕೆಯಲ್ಲಿ ತೊಡಗಿದ್ದೇವೆ.

ಪಿಪಿಇ ಕಿಟ್‌ ಹೆಚ್ಚು ಹೊತ್ತು ಧರಿಸಿಕೊಂಡಿರುವುದು ಕಷ್ಟವಾಗುತ್ತದೆ. ಮೈಯೆಲ್ಲ ಬೆವರುತ್ತದೆ. ಉಸಿರು ಹಿಂದೆ, ಮುಂದೆ ಆಗುತ್ತದೆ. ಇಂತಹ ಸನ್ನಿವೇಶವನ್ನು ಒಮ್ಮೊಮ್ಮೆ ನೆನೆದರೆ ಭಯ ಎನಿಸುತ್ತದೆ. ಆದರೆ, ಜನರ ಆರೋಗ್ಯ ಸೇವೆ ಮಾಡಬೇಕೆಂದೇ ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿರುವಾಗ ಇದೆಲ್ಲ ಸಹಜ. ಇಂತಹ ಅಪಾಯಕಾರಿ ನೌಕರಿ ಏಕೆ ಬೇಕು, ಬಿಟ್ಟು ಬಾ ಎಂದು ಮನೆಯಲ್ಲಿ ಹೇಳುತ್ತಾರೆ. ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ನೌಕರಿ ಬಿಡುವುದು ಸರಿಯಲ್ಲ ಎಂಬ ಕಾರಣಕ್ಕೆ ಧೈರ್ಯಗುಂದದೇ ಕೆಲಸ ಮಾಡುತ್ತಿದ್ದೇನೆ.

ನಮ್ಮೂರು ಇಂಡಿ ತಾಲ್ಲೂಕಿನ ತಡವಲಗಾ. ಪ್ರತಿದಿನ ಊರಿಗೆ ಹೋಗಿ ಬರಲು ದೂರವಾಗುವುದರಿಂದ ವಿಜಯಪುರದಲ್ಲೇ ರೂಂ ಮಾಡಿಕೊಂಡು ಇದ್ದೇನೆ. ಈ ಸಂದರ್ಭದಲ್ಲಿ ಮನೆಗೂ ಹೋಗುವುದು ಸರಿಯಲ್ಲ ಎಂಬ ಕಾರಣಕ್ಕೆ ಸದ್ಯ ಹೋಗಿಲ್ಲ. ಒಂದೆಡೆ ಬೇಸರ, ಇನ್ನೊಂದೆಡೆ ಖುಷಿ. ಈ ಎರಡರ ನಡುವೆ ಕಾಯಕ ಸಾಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT