ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು, ಸಿಡಿಲಿನ ಆರ್ಭಟ; ಮೂವರು ಸಾವು

ಮುದ್ದೇಬಿಹಾಳದಲ್ಲಿ ಮಳೆರಾಯನ ಆರ್ಭಟ; ಅಂಗಡಿಗಳಿಗೆ ನುಗ್ಗಿದ ಚರಂಡಿ ನೀರು ಲಕ್ಷಾಂತರ ರೂಪಾಯಿ ನಷ್ಟ
Last Updated 5 ಮೇ 2021, 16:06 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಮಳೆ ಆರ್ಭಟಿಸಿದೆ.

ವಿಜಯಪುರ ನಗರದ ಟಕ್ಕೆ ಪ್ರದೇಶದ ಮಸೀದಿ ಬಳಿ ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಜೊತೆಗೆ ನಾಲ್ಕು ಆಡುಗಳು ಸಿಡಿಲಿನಿಂದ ಸಾವನಪ್ಪಿವೆ.

ಅಶೋಕರಾಮ ಕಾರಜೋಳ(48), ಬಾಷಾಸಾಬ್‌ ಕರಜಗಿ(40) ಮತ್ತು ಜಾವಿದ್‌ ಹಾಜಿಸಾಬ್‌ ಜಾಲಗೇರಿ(33) ಸಾವಿಗೀಡಾಗಿದ್ದಾರೆ.

ಸಬೀನಾ ಮತ್ತು ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಲದಿಂದ ಬರುವ ವೇಳೆ ಗಾಳಿ, ಮಳೆ ಆರಂಭವಾದ ಕಾರಣ ರಕ್ಷಣೆಗಾಗಿ ಟಕ್ಕೆ ದರ್ಗಾ ಬಳಿ ಇರುವ ಮಸೀದಿ ಆವರಣದಲ್ಲಿ ರಕ್ಷಣೆ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎಂದು ವಿಜಯಪುರ ಗ್ರಾಮೀಣ ಠಾಣೆ ಪಿಎಸ್‌ಐ ಆನಂದ ಟಕ್ಕನವರ ತಿಳಿಸಿದ್ದಾರೆ.

ಮಳೆ ಆರ್ಭಟ:ಮುದ್ದೇಬಿಹಾಳ ಪಟ್ಟಣದಲ್ಲಿ ಬುಧವಾರ ಸಂಜೆ ಗುಡುಗು ಸಿಡಿಲಿನೊಂದು ಧಾರಾಕಾರ ಮಳೆ ಸುರಿಯಿತು. ಭಾರೀ ಮಳೆಯ ಪರಿಣಾಮ ಚರಂಡಿ ತುಂಬಿ ರಸ್ತೆ ಮೇಲೆ ಹರಿದಿದೆ. ಕೆಲ ಅಂಗಡಿ,ಮಳಿಗೆಗಳಿಗೆ, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಒಂದು ವಾರದಿಂದ ಮೋಡಗಳ ಕಣ್ಣಾಮುಚ್ಚಾಲೆ, ಗುಡುಗು, ಸಿಡಿಲಿನ ಅರ್ಭಟ ನಡೆದಿದ್ದರೂ ಮಳೆ ಬಂದಿರಲಿಲ್ಲ. ಆದರೆ, ಬುಧವಾರ ಜೋರಾಗಿ ಒಂದು ತಾಸು ಬಿದ್ದ ಮಳೆಯಿಂದಾಗಿ ಬಿಸಿಲಿನ ಧಗೆಯನ್ನು ತಂಪಾಗಿದೆ.

ಮಳೆರಾಯನ ಆರ್ಭಟಕ್ಕೆ ಪಟ್ಟಣದ ಬಸವೇಶ್ವರ ವೃತ್ತದ ಮುಖ್ಯ ರಸ್ತೆಯಲ್ಲಿ ಇರುವ ಕಿರಾಣಿ ಅಂಗಡಿಗಳಿಗೆ, ಪಾರ್ಶ್ವ ಮೊಬೈಲ್ ಅಂಗಡಿ, ರಮೇಶ ಕಂಠಿ, ಮಹೇಶ ನಾಗಠಾಣ, ಸೋಲಂಕಿ ಅವರ ಕಿರಾಣಿ ಅಂಗಡಿಗಳಲ್ಲಿ ಚರಂಡಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕೋವಿಡ್‌ ಕರ್ಫ್ಯೂ ಕಾರಣ ಮನೆಗಳಲ್ಲಿಯೇ ಉಳಿದಿರುವ ಈ ಎಲ್ಲ ಅಂಗಡಿಗಳ ಮಾಲೀಕರಿಗೆ ಅವರ ಮಿತ್ರರು ಫೋನ್ ಮಾಡಿ ವಿಷಯ ತಿಳಿಸಿದ ತಕ್ಷಣವೇ ಮನೆಯಿಂದ ದೌಡಾಯಿಸಿ ಬಂದರೂ ಹಾನಿ ತಪ್ಪಿಸಲಾಗಲಿಲ್ಲ.

ಕಿರಾಣಿ ಅಂಗಡಿಗಳ ದವಸ ಧಾನ್ಯಗಳಲ್ಲಿ ಚರಂಡಿ ನೀರು ಸೇರಿ ಹಾನಿಯಾಗಿದ್ದರೆ. ನಿಕೇಶ ಓಸ್ವಾಲ ಹಾಗೂ ಮುಕೇಶ ಓಸ್ವಾಲ ಅವರಿಗೆ ಸೇರಿದ ಪಾರ್ಶ್ವ ಮೊಬೈಲ್ ಅಂಗಡಿಗೆ ನುಗ್ಗಿದ ನೀರಿನಿಂದಾಗಿ 70 ಕ್ಕೂ ಹೆಚ್ಚು ಮೊಬೈಲ್, ಇತರೆ ಎಲೆಕ್ಟ್ರಾನಿಕ್ ಸಾಮಾನುಗಳು ಸೇರಿ ಒಂದು ಲಕ್ಷಕ್ಕೂ ಮಿಕ್ಕಿ ಹಾನಿಯಾಗಿದೆ.

ಬಸವೇಶ್ವರ ವೃತ್ತದಲ್ಲಿ ಮುಖ್ಯ ಚರಂಡಿ ಕಾಮಗಾರಿ ನಡೆದಿದ್ದು, ಮಳೆ ಬಂದಾಗಲೆಲ್ಲ ವ್ಯಾಪಾರಸ್ಥರು ಹಾನಿ ಅನುಭವಿಸುತ್ತಲೇ ಇದ್ದಾರೆ. ಬುಧವಾರ ಸುರಿದ ಮಳೆಯ ನೀರು ನಧಾಪ್‌ ಕಾಂಪ್ಲೆಕ್ಸ್ ನ ಬಳಿಯ ಚರಂಡಿ ನೀರು ನುಗ್ಗಿಬಂದು ಹಾನಿಯಾಗಿದೆ.

ಪುರಸಭೆಯವರು ಕಾಲಕಾಲಕ್ಕೆ ಚರಂಡಿ ಸ್ವಚ್ಛ ಮಾಡದ‌ ಕಾರಣವೇ ಈ ಅವಾಂತರಕ್ಕೆ ಕಾರಣವೆಂದು ಅಂಗಡಿಕಾರರು ದೂರಿದರು.

ಪುರಸಭೆ ಜೆಸಿಬಿಯಿಂದ ಚರಂಡಿಯ ಸ್ವಚ್ಛತಾ ಕಾರ್ಯ ನಡೆದಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು ಪಾರ್ಶ್ವ ಮೊಬೈಲ್ ಸೇರಿದಂತೆ ಸುತ್ತಲಿನ ಅಂಗಡಿಗಳಲ್ಲಿ ನುಗ್ಗಿದ ನೀರು ತೆಗೆಯುವ ಕಾರ್ಯವನ್ನು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT