ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ನಲ್ಲಿ ಬಳಲುತ್ತಿರುವ ಬಿಸಿಲೂರ ಪ್ರಯಾಣಿಕರು; ಜನರ ಅಸಮಾದಾನ

ಮೈಮರೆತ ಮಹಾನಗರ ಪಾಲಿಕೆ
Last Updated 30 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ನಗರದ ಪ್ರಮುಖ ಜನದಟ್ಟಣೆ ವೃತ್ತಗಳಲ್ಲಿ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸಲು ‌ಮಹಾನಗರ ಪಾಲಿಕೆಯು ಕಳೆದ ಎರಡು ವರ್ಷ ನೆರಳಿನ (ಚಪ್ಪರ) ವ್ಯವಸ್ಥೆ ಮಾಡುವ ಮೂಲಕ ಆಸರೆಯಾಗಿತ್ತು. ಆದರೆ, ಈ ವರ್ಷ ಪಾಲಿಕೆ ಅತ್ತ ಗಮನಹರಿಸದೇ ಇರುವುದರಿಂದ ಟ್ರಾಫಿಕ್‌ನಲ್ಲಿ ಜನರು ಬಿಸಿಲಿನ ಆಘಾತ ಎದುರಿಸುವಂತಾಗಿದೆ.

ಈಗಾಗಲೇಗುಮ್ಮಟನಗರಿಯ ಉಷ್ಣಾಂಶ ಸರಾಸರಿ 34 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದು ಏಪ್ರಿಲ್‌, ಮೇನಲ್ಲಿ 40 ಡಿಗ್ರಿ ಮೀರಲಿದೆ. ಕೆಲವೊಮ್ಮೆ ಗರಿಷ್ಠ 42 ಡಿಗ್ರಿ ತಲು‍ಪುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅದರಲ್ಲೂ ಮಧ್ಯಾಹ್ನದ ಹೊತ್ತಿನಲ್ಲಿ ನಗರದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನಗಳೊಂದಿಗೆ ಕಾದು ನಿಲ್ಲುವುದು ಕಷ್ಟವಾಗುತ್ತದೆ.

ಬಿಸಿಲಾಘಾತ(ಸನ್‌ಸ್ಟೋಕ್‌)ಕ್ಕೆ ಕೆಲವರು ತಲೆ ಸುತ್ತಿ ಬೀಳುವ ಸಾಧ್ಯತೆ ಹೆಚ್ಚು. ಮತ್ತೆ ಕೆಲವರು ಬಾಯಾರಿಕೆ ತಾಳಲಾರದೇ ಆಯಾಸದಿಂದ ತೊಂದರೆಗೆ ಒಳಗಾಗುವುದು ಸಾಮಾನ್ಯ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಸುಡು ಬಿಸಿಲಿನಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಿಮಿಷಗಟ್ಟಲೇ ಕಾಯುವಾಗ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು.

ಬಿಸಿಲ ಬವಣೆಯನ್ನು ಅರಿತ ಮಹಾನಗರ ಪಾಲಿಕೆಯು ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಎದುರಿನ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ಚೌಕಿ ಮತ್ತು ವಾಟರ್‌ ಟ್ಯಾಂಕ್‌ ಸರ್ಕಲ್‌ನಲ್ಲಿ ರಸ್ತೆಯ ಮೇಲೆ ಉದ್ದನೆಯ ಹಸಿರು ನೆಟ್‌ ಅನ್ನು ಶಾಮಿಯಾನದಂತೆ ಅಳವಡಿಸಿ, ನೆರಳಿನ ವ್ಯವಸ್ಥೆ ಮಾಡಿತ್ತು. ಆದರೆ, ಈ ವರ್ಷ ಈ ವ್ಯವಸ್ಥೆ ಮಾಡದೇ ಇರುವುದು ಬಿಸಿಲೂರ ಜನರಿಗೆ ತೊಂದರೆಯಾಗಿದೆ.

2020ರಲ್ಲಿಪ್ರಾಯೋಗಿಕವಾಗಿ ಒಂದು ವೃತ್ತದಲ್ಲಿ ಮಾತ್ರ ನೆರಳಿನ ಪರದೆ ಹಾಕಲಾಗಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಉತ್ತೇಜಿತರಾಗಿ 2021ರಲ್ಲಿ ನಾಲ್ಕೈದು ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೋದ ವರ್ಷ ಆಗಾಗ ಜೋರಾದಗಾಳಿ, ಮಳೆ ಸುರಿದ ಪರಿಣಾಮ ಹಸಿರು ನೆಟ್‌ ಹರಿದು ಹೋಗಿತ್ತು.

ಆಯಾ ವೃತ್ತಗಳಲ್ಲಿ ಜನ ಮತ್ತು ವಾಹನಗಳ ದಟ್ಟಣೆಗೆ ಅನುಗುಣವಾಗಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕೆಲ ವೃತ್ತಗಳಲ್ಲಿ ಜನದಟ್ಟಣೆ ಅಧಿಕವಾಗಿರುವುದರಿಂದ ಉದ್ದನೆಯ ಹಸಿರು ಹೊದಿಕೆಯನ್ನು ಅಳವಡಿಸಲಾಗಿತ್ತು. ಕೆಲವು ಕಡೆ ಚಿಕ್ಕದಾಗಿ ಅಳವಡಿಸಲಾಗಿತ್ತು.

ಮಾರ್ಚ್‌ನಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗುವ ಹಸಿರು ಪರದೆ ಜೂನ್‌ ವರೆಗೂ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ವರ್ಷ ನೆರಳಿನ ವ್ಯವಸ್ಥೆ ಅಳವಡಿಸಿಲ್ಲದಿರುವುದು ಸಾರ್ವಜನಿಕರ ಅಸಮಾದಾನಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ಮಹಾನಗರ ಪಾಲಿಕೆ ಆಯುಕ್ತ ವಿಜಯ್‌ ಮೆಕ್ಕಳಕಿ ಅವರಿಗೆ ಫೋನ್‌ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

***

ವಿಜಯಪುರ ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿನೆತ್ತಿ ಸುಡುವ ಬಿಸಿಲಲ್ಲಿ ನಿಲ್ಲಲು ಕಷ್ಟವಾಗುತ್ತದೆ. ಆದಷ್ಟು ಬೇಗ ಪಾಲಿಕೆಯಿಂದ ನೆರಳಿನ ವ್ಯವಸ್ಥೆ ಮಾಡಬೇಕು

–ಸಂಗಮೇಶ ಶೆಟ್ಟರ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT