ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ವಿಡಿಸಿಸಿ ಬ್ಯಾಂಕ್‌: ₹11.56 ಕೋಟಿ ನಿವ್ವಳ ಲಾಭ ಗಳಿಕೆ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ರಾಜ್ಯದಲ್ಲಿ ಮೂರನೇ ಸ್ಥಾನ: ಅಧ್ಯಕ್ಷ ಶಿವಾನಂದ ಪಾಟೀಲ
Last Updated 14 ನವೆಂಬರ್ 2021, 12:15 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ 2020–21ನೇ ಸಾಲಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಿ ಸರ್ವಾಂಗೀಣ ಪ್ರಗತಿ ಸಾಧಿಸುವುದರೊಂದಿಗೆ ವರ್ಷಾಂತ್ಯಕ್ಕೆ ₹11.56 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಬ್ಯಾಂಕ್‌ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.

ಬ್ಯಾಂಕಿನ ಸಮರ್ಪಕ ಕಾರ್ಯನಿರ್ವಹಣೆ ಹಾಗೂ ಅಭಿವೃದ್ಧಿಪರ ಚಟುವಟಿಕೆಗಳನ್ನು ಪರಿಗಣಿಸಿ 2020–21ನೇ ಸಾಲಿನ ನಬಾರ್ಡ್‌ ಲೆಕ್ಕ ಪರಿಶೋಧನೆಯಲ್ಲಿ ‘ಅ’ ವರ್ಗದ ಬ್ಯಾಂಕನ್ನಾಗಿ ಗುರುತಿಸಿದೆ ಎಂದರು.

2002ರಿಂದ 2020ರ ವರೆಗೆ ಸಾಲಮನ್ನಾ ಯೋಜನೆಯಡಿ ₹3251 ಕೋಟಿ ಹಾಗೂ ಬೆಳೆವಿಮೆ ಸೌಲಭ್ಯದಡಿ ₹ 356 ಕೋಟಿ ಸೇರಿದಂತೆ ಒಟ್ಟು ₹3700 ಕೋಟಿಯನ್ನು ಜಿಲ್ಲೆಯ ರೈತರಿಗೆ ತಲುಪಿಸಲಾಗಿದೆ ಎಂದು ಹೇಳಿದರು.

ಸದ್ಯ ಎಕರೆಗೆ ₹ 50 ಸಾವಿರದ ವರೆಗೆ ಹಾಗೂ ಗರಿಷ್ಠ ₹ 3 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದ್ದು, ಇನ್ನು ಮುಂದೆ ಎಕರೆಗೆ ₹ 55 ಸಾವಿರ ಸಾಲ ನೀಡಲಾಗುವುದು ಎಂದು ಘೋಷಿಸಿದರು.

ಬ್ಯಾಂಕ್‌ ಸದ್ಯ ₹5059 ಕೋಟಿ ವಾರ್ಷಿಕ ವ್ಯವಹಾರ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಆರ್ಥಿಕ ವಹಿವಾಟು ಮಾಡಲಾಗುವುದು ಎಂದರು.

ಪರಿಹಾರ ನೀಡಲು ಯೋಜನೆ

ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವಿಗೀಡಾದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲು ಬ್ಯಾಂಕ್‌ ಯೋಜನೆ ರೂಪಿಸಿದ್ದು, ಇದಕ್ಕಾಗಿ ₹ 7 ಕೋಟಿ ವಿನಿಯೋಗ ಮಾಡುವ ಉದ್ದೇಶವಿದೆ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ಹೇಳಿದರು.

ರಾಜ್ಯ ಸರ್ಕಾರದ ಕೋವಿಡ್‌ ಪರಿಹಾರ ನಿಧಿಗೆ ಬ್ಯಾಂಕಿನಿಂದ ₹ 1 ಕೋಟಿ ನೀಡಲಾಗಿದೆ. ಕೋವಿಡ್‌ನಿಂದ ಸಾವಿಗೀಡಾದ ಬ್ಯಾಂಕಿನ ನಾಲ್ಕು ಸಿಬ್ಬಂದಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

ಜಿಲ್ಲೆಯ ನಾಲ್ವರು ರಾಷ್ಟ್ರೀಯ ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ಗಳಿಗೆ ತಲಾ ₹ 1.5 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೇ, 121 ವಿವಿಧ ಕ್ರೀಡಾಪಟುಗಳಿಗೆ ₹ 69.09 ಲಕ್ಷ ಆರ್ತಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

9 ಹೊಸ ಶಾಖೆ

ಪ್ರಸ್ತುತ ಜಿಲ್ಲೆಯಾದ್ಯಂತ ಬ್ಯಾಂಕ್‌ ಒಟ್ಟು 43 ಶಾಖೆಯನ್ನು ಹೊಂದಿದೆ. ಇನ್ನೂ ಒಂಬತ್ತು ಹೊಸ ಶಾಖೆಯನ್ನು ಆರಂಭಿಸಲು ಸಹಕಾರ ಇಲಾಖೆಯ ಅನುಮೋದನೆ ಪಡೆಯಲಾಗಿದೆ. 2021–22ನೇ ಸಾಲಿನಲ್ಲಿ ಈ ಹೊಸ ಶಾಖೆಗಳ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಸಾಲ ವಿತರಣೆ

2020–21ನೇ ಸಾಲಿನಲ್ಲಿ ಬ್ಯಾಂಕ್‌ ಕೃಷಿಗಾಗಿ ₹ 1283.48 ಕೋಟಿ, ಕೃಷಿಯೇತರ ಉದ್ದೇಶಗಳಿಗಾಗಿ ₹1143.24 ಕೋಟಿ ಸೇರಿದಂತೆ ಒಟ್ಟಾರೆ ₹2426.72 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದರು.

ಸಾಲ ವಸೂಲಾತಿ

2020–21ನೇ ಸಾಲಿನಲ್ಲಿ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಶೇ 99.28ರಷ್ಟಾಗಿದ್ದು, ಕೃಷಿಯೇತರ ಸಾಲ ವಸೂಲಾತಿ ಶೇ 80.95ರಷ್ಟಾಗಿದೆ. ಒಟ್ಟಾರೆ ಸಾಲ ವಸೂಲಾತಿ ಶೇ 91.78 ರಷ್ಟಾಗಿದೆ ಎಂದರು.

ಎನ್‌ಪಿಎ

ಕಳೆದ ಮಾರ್ಚ್‌ 31ಕ್ಕೆ ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣ ಶೇ 6.79ರಷ್ಟಿದೆ.ನೆಟ್‌ ಎನ್‌ಪಿಎ ಪ್ರಮಾಣ ಶೇ 2.63ರಷ್ಟು ಇದೆ ಎಂದು ತಿಳಿಸಿದರು.

ಸಿಆರ್‌ಎಆರ್‌

ಭಾರತೀಯ ರಿಸರ್ವ ಬ್ಯಾಂಕಿನ ನಿರ್ದೇಶನದಂತೆ ಜಿಲ್ಲಾ ಬ್ಯಾಂಕ್‌ ಶೇ 9ರಷ್ಟುಸಿಆರ್‌ಎಆರ್‌ ಹೊಂದಬೇಕಾಗಿದೆ. ಆದರೆ, ನಮ್ಮ ಬ್ಯಾಂಕ್‌ ಶೇ 11.53ರಷ್ಟಿದೆ. ಇದು ಬ್ಯಾಂಕಿನ ಆರ್ಥಿಕ ಸದೃಢತೆಯನ್ನು ಸ್ಪಷ್ಟಪಡಿಸುತ್ತದೆ ಎಂದರು.

ಡಿಜಿಟಲ್‌ ಬ್ಯಾಂಕಿಂಗ್‌

ಬ್ಯಾಂಕ್‌ ಸಂಪೂರ್ಣವಾಗಿ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್‌ ಸೇವೆಗಳಾದ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ, ಡಿಬಿಟಿ, ಎಸ್‌ಎಂಎಸ್‌ ಅಲರ್ಟ್‌, ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ಆಂತರಿಕ ಶಾಖಾ ವ್ಯವಹಾರಗಳನ್ನು ಗಣಕೀಕೃತ ವ್ಯವಸ್ಥೆಯಡಿ ಜಾರಿಗೊಳಿಸಿದೆ ಎಂದು ಹೇಳಿದರು.

ರೈತರಿಗೆ ರುಪೇ ಕಾರ್ಡ್‌

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬೆಳೆ ಸಾಲ ಪಡೆದ 2.5 ಲಕ್ಷ ರೈತರಿಗೆ ಕೆಸಿಸಿ ರುಪೇ ಕಾರ್ಡ್‌ ವಿತರಣೆ ಕ್ರಮಕೈಗೊಳ್ಳಗಾಇದೆ. ಇದುವರೆಗೆ 1.80 ಲಕ್ಷ ರೈತರಿಗೆ ರುಪೇ ಕಾರ್ಡ್‌ ವಿತರಿಸಲಾಗಿದೆ. ರೈತರು ಅವಶ್ಯಕತೆ ಆಧರಿಸಿ ನಮ್ಮ ಹಾಗೂ ಇತರೆ ಬ್ಯಾಂಕಿನ ಎಟಿಎಂ ಮೂಲಕ ವ್ಯವಹರಿಸಬಹುದಾಗಿದೆ ಎಂದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಡಿ ಬಿರಾದಾರ, ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಶೇಖರ ದಳವಾಯಿ, ಸುರೇಶ ಬಿರಾದಾರ, ಗುರುಶಾಂತ ನಿಡೋಣಿ, ಸೋಮನಗೌಡ ಬಿರಾದಾರ, ಕಲ್ಲಕನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಅರವಿಂದ ಪೂಜಾರಿ, ರಾಜೇಶ್ವರಿ ಹೆಬ್ಬಾಳ, ಉಪ ನಿಬಂಧಕ ಸಿ.ಎಸ್‌.ನಿಂಬಾಳ,ಎಂ.ಜಿ.ಪಾಟೀಲಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬಳಿಕ ನಡೆದ ಬ್ಯಾಂಕಿನ 102ನೇ ಮಹಾಸಭೆಯಲ್ಲಿ ಯುಪಿಎಸ್‌ಸಿಯಲ್ಲಿ 326ನೇ ರ‍್ಯಾಂಕ್‌ ಗಳಿಸಿರುವ ನಗರದ ನೇತ್ರಾ ಮೇಟಿ ಅವರನ್ನು ಸನ್ಮಾನಿಸಲಾಯಿತು.

***

ಬ್ಯಾಂಕಿನ 100 ವರ್ಷಗಳ ಐತಿಹಾಸಿಕ ಸಾಧನೆಯ ಸ್ಮರಣೆಗಾಗಿ ಶತಮಾನೋತ್ಸವ ಭವನ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿದೆ. ಸರ್ಕಾರ ಅನುಮತಿ ನೀಡಿದರೆ ಶತಮಾನೋತ್ಸವ ಆಚರಿಸಲಾಗುವುದು

–ಶಿವಾನಂದ ಪಾಟೀಲ

ಅಧ್ಯಕ್ಷ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT