ಬುಧವಾರ, ನವೆಂಬರ್ 25, 2020
24 °C

ವೀರಶೈವ ಮಹಾಸಭಾ ಚುನಾವಣೆ ಡಿ.27ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಈ ಹಿಂದೆ ಚುನಾವಣೆಯಾಗದೇ ಇರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ಡಿಸೆಂಬರ್‌ 27ರಂದು ಚುನಾವಣೆ ನಡೆಯಲಿದೆ ಎಂದು ಸಭಾದ ಚುನಾವಣಾಧಿಕಾರಿ ಎಚ್‌.ಎಂ.ರೇಣುಕ ಪ್ರಸನ್ನ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ 12 ಜಿಲ್ಲಾ ಮತ್ತು 106 ತಾಲ್ಲೂಕು ಘಟಕಗಳಿಗೆ ಚುನಾವಣೆ ನಡೆದಿದೆ. ಉಳಿದ ಜಿಲ್ಲೆ, ತಾಲ್ಲೂಕು ಘಟಕಗಳಿಗೆ ಚುನಾವಣೆ ನಡೆಯಬೇಕಾಗಿದೆ ಎಂದರು.

ಡಿಸೆಂಬರ್‌ 9ರಿಂದ ನಾಮಪತ್ರ ಸಲ್ಲಿಕೆ ಆರಂಭ, ಡಿ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಡಿ.16 ನಾಮಪತ್ರ ಪರಿಶೀಲನೆ, ಡಿ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಡಿ.27 ಮತದಾನ ಹಾಗೂ ಅದೇ ದಿನ ಸಂಜೆ 4ರ ನಂತರ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ನಿಯಮಗಳ ಪ್ರಕಾರ ಮಹಾಸಭಾಕ್ಕೆ ಚುನಾವಣೆ ನಡೆಯಬೇಕಾದರೆ ಜಿಲ್ಲಾ ಘಟಕಕ್ಕೆ ಕನಿಷ್ಠ 1 ಸಾವಿರ ಸದಸ್ಯರಿರಬೇಕು, ತಾಲ್ಲೂಕು ಘಟಕಗಳಿಗೆ ಕನಿಷ್ಠ 300 ಸದಸ್ಯರಿರಬೇಕು ಎಂದರು.

ವಿಜಯಪುರ ಜಿಲ್ಲಾ ಘಟಕ ಮತ್ತು ಮುದ್ದೇಬಿಹಾಳ ತಾಲ್ಲೂಕು ಘಟಕವು ಚುನಾವಣೆಗೆ ಅರ್ಹತೆ ಪಡೆದಿದೆ. ಇನ್ನು ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 270 ಸದಸ್ಯರಿದ್ದು, ಚುನಾವಣೆ ನಡೆಸಲು ಇನ್ನೂ 30 ಸದಸ್ಯರ ಅಗತ್ಯವಿದೆ. ಅದೇ ರೀತಿ ಇಂಡಿ ತಾಲ್ಲೂಕಿನಲ್ಲಿ 240 ಸದಸ್ಯರಿದ್ದು, 60 ಸದಸ್ಯರ ಅಗತ್ಯವಿದೆ. ಸಿಂದಗಿ ತಾಲ್ಲೂಕಿನಲ್ಲಿ 220 ಸದಸ್ಯರಿದ್ದು, 80 ಸದಸ್ಯರ ಅಗತ್ಯವಿದೆ. ಅವಶ್ಯಕ ಸದಸ್ಯರು ಹೆಸರು ನೋಂದಾಯಿಸಿದರೆ ಈ ಮೂರು ತಾಲ್ಲೂಕುಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ಚುನಾವಣಾ ವೇಳಾ ಪಟ್ಟಿ ಪ್ರಕಾರ ನವೆಂಬರ್‌ 10ರ ವರೆಗೆ ಸದಸ್ಯರಾಗಲು ಅವಕಾಶವಿದೆ. ಹೊಸದಾಗಿ ಸದಸ್ಯರಾಗುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನದಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ಮಹಾಸಭಾದ ಪದಾಧಿಕಾರಿಗಳಾದ ವಿ.ಸಿ.ನಾಗಠಾಣ, ಸಿದ್ರಾಮಪ್ಪ ಉಪ್ಪಿನ, ಎಸ್.ವೈ.ಗದಗ, ಎಚ್‌.ಆರ್‌.ಮಾಚಪ್ಪನವರ, ಎಸ್‌.ಎ.ಪಾಟೀಲ, ಶಂಕರಗೌಡ ಪಾಟೀಲ, ಡಾ.ಸೋಮಶೇಖರ ವಾಲಿ, ಪಿ.ಬಿ.ಪಾಟೀಲ ಮುದ್ದೇಬಿಹಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

ವೀರಶೈವ ಲಿಂಗಾಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಹಾಗೂ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು

–ಎಚ್‌.ಎಂ.ರೇಣುಕ ಪ್ರಸನ್ನ, ಚುನಾವಣಾಧಿಕಾರಿ 

ಅಖಿಲ ಭಾರತ ವೀರಶೈವ ಸಭಾ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.