ಶನಿವಾರ, ಮೇ 21, 2022
27 °C
ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ದ್ವಿಸದಸ್ಯ ಕ್ಷೇತ್ರ

ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್: ಬಿಜೆಪಿ, ಕಾಂಗ್ರೆಸ್ ತುತ್ತಿಗೆ ಪಕ್ಷೇತರ ‘ಕೈ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಪಿ.ಎಚ್.ಪೂಜಾರ, ಸುನೀಲ್‌ ಗೌಡ ಪಾಟೀಲ ಮತ್ತು ಮಲ್ಲಿಕಾರ್ಜುನ ಲೋಣಿ

ವಿಜಯಪುರ: ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ದ್ವಿಸದಸ್ಯ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಪಿ.ಎಚ್‌.ಪೂಜಾರ, ಕಾಂಗ್ರೆಸ್‌ನ ಸುನೀಲ್‌ಗೌಡ ಪಾಟೀಲ ಹಾಗೂ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚುನಾವಣಾ ಪೂರ್ವದಲ್ಲಿ ‘ನಮಗೊಂದು, ನಿಮಗೊಂದು’ ಎಂಬ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಲೋಣಿ ಸ್ಪರ್ಧೆ ಅರಗಿಸಿಕೊಳ್ಳದಂತಾಗಿದೆ. ಲೋಣಿ ಯಾರ ಗೆಲುವಿಗೆ ಅಡ್ಡಿಯಾಗುತ್ತಾರೆ ಎಂಬ ಲೆಕ್ಕಾಚಾರ ನಡೆದಿದೆ.

ಬಾಗಲಕೋಟೆಯಿಂದ ಎರಡು ಬಾರಿ ಶಾಸಕರಾಗಿದ್ದ ಪಿ.ಎಚ್‌.ಪೂಜಾರ ಅಖಂಡ ವಿಜಯಪುರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜಕಾರಣಿ. ಬಹಳ ವರ್ಷಗಳಿಂದ ರಾಜಕೀಯ ಅವಕಾಶಗಳಿಂದ ವಂಚಿತರಾಗಿದ್ದ ಅವರು ಈ ಚುನಾವಣೆ ಮೂಲಕ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಕ್ಕೆ ಅಣಿಯಾಗಿದ್ದಾರೆ. ಅವಳಿ ಜಿಲ್ಲೆಯಲ್ಲಿ ಬಿಜೆಪಿಯ ಒಂಬತ್ತು ಶಾಸಕರು, ಇಬ್ಬರು ಸಂಸದರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಗ್ರಾ. ಪಂ. ಸದಸ್ಯರಿದ್ದಾರೆ ಎನ್ನುವ ಲೆಕ್ಕಾಚಾರದಿಂದ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿ ಪೂಜಾರ ಇದ್ದಾರೆ.

ಕಾಂಗ್ರೆಸ್‌ಗೆ ಒಳ ಏಟಿನ ಭೀತಿ: ಹಾಲಿ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಅವರಿಗೆ ಟಿಕೆಟ್‌ ಲಭಿಸದಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಎಸ್‌.ಆರ್‌. ಪರ ಕಾಂಗ್ರೆಸಿಗರು ಈ ಚುನಾವಣೆಯಲ್ಲಿ ಯಾವ ‘ಆಟ’ ಆಡಲಿದ್ದಾರೆ ಎಂಬುದು ನಿಗೂಢವಾಗಿದೆ.

ಸುನೀಲ್‌ ಗೌಡರ ಸಹೋದರರಾದ ಶಾಸಕ ಎಂ.ಬಿ.ಪಾಟೀಲ ಸ್ಥಳೀಯವಾಗಿ ಅದರಲ್ಲೂ ಪಕ್ಷದೊಳಗೆ ಬಹಳಷ್ಟು ವಿರೋಧಿಗಳನ್ನು ಕಟ್ಟಿಕೊಂಡಿದ್ದಾರೆ. ಎಂ.ಬಿ. ಪಾಟೀಲ ಶಕ್ತಿಯನ್ನು ಪಕ್ಷದಲ್ಲಿ ಕುಂದಿಸಲು ವಿರೋಧಿಗಳು ಈ ಚುನಾವಣೆಯಲ್ಲಿ ತಂತ್ರ ಹೆಣೆದಿರುವುದು ಗುಟ್ಟಾಗಿ ಉಳಿದಿಲ್ಲ.

ಶಾಸಕರಾದ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ ಮೊದಲಿನಿಂದಲೂ ಎಸ್‌.ಆರ್‌.ಪಾಟೀಲ ಪಾಳೆಯದಲ್ಲಿ ಗುರುತಿಸಿಕೊಂಡವರು. ಈ ಚುನಾವಣೆಯಲ್ಲಿ ಇವರಿಬ್ಬರು ಯಾವ ಪಾತ್ರ ವಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇನ್ನೊಂದೆಡೆ ಎಸ್‌.ಆರ್‌.ಪಾಟೀಲ ಅವರಿಗೆ ಟಿಕೆಟ್‌ ತಪ್ಪಿರುವುದಕ್ಕೆ ಬಾಗಲಕೋಟೆ ಜಿಲ್ಲೆಯ ಬಹಳಷ್ಟು ಕಾಂಗ್ರೆಸ್‌ನ ಮಾಜಿ, ಹಾಲಿ ಶಾಸಕರು ಹಾಲು ಕುಡಿದಷ್ಟು ಖುಷಿಯಾಗಿದ್ದು, ಸುನೀಲ್‌ಗೌಡರ ಬೆನ್ನಿಗೆ ನಿಂತಿದ್ದಾರೆ.

ಲೋಣಿ ಪರ ಸಮಾಜ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಲಿಂಗಾಯತ ಗಾಣಿಗ ಸಮಾಜಕ್ಕೆ ಸೇರಿದ ವಿಜಯಪುರ ಜಿ. ‍ಪಂ. ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಮ್ಮ ಸಮಾಜದ ವೋಟು ಮತ್ತು ಸಮಾಜದ ನಾಯಕರ ಬೆಂಬಲವನ್ನು ನಂಬಿಕೊಂಡಿದ್ದಾರೆ. ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸಿದ್ದ ಪಿ.ಸಿ.ಗದ್ದಿಗೌಡರ, ದಿ.ಸಿದ್ದು ನ್ಯಾಮಗೌಡ, ಜಿ.ಎಸ್‌.ನ್ಯಾಮಗೌಡ ಇದೇ ಸಮಾಜಕ್ಕೆ ಸೇರಿದ್ದು, ಇದೀಗ ಅದೇ ಸಮಾಜಕ್ಕೆ ಸೇರಿದ ಲೋಣಿ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂದು ಇಡೀ ಸಮಾಜ ಟೊಂಕ ಕಟ್ಟಿ ನಿಂತಿದೆ. ಜೊತೆಗೆ ಕಾಂಗ್ರೆಸ್‌, ಬಿಜೆಪಿ ಅತೃಪ್ತರು ತೆರೆಮರೆಯಲ್ಲಿ ಕೈಜೋಡಿಸಿದ್ದಾರೆ.

ಪಕ್ಷ ರಾಜಕೀಯಕ್ಕಿಂತ ಹೆಚ್ಚಾಗಿ ಒಳ ಒಪ್ಪಂದ, ಜಾತಿ ಪ್ರೇಮ, ಹಣಬಲ ಮತ್ತು ವ್ಯಕ್ತಿಗತ ರಾಜಕಾರಣಕ್ಕೆ ಪ್ರಸಿದ್ಧವಾಗಿರುವ ಅವಳಿ ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಯಾರು ಯಾರಿಗೆ ಒಳ ಏಟು ನೀಡುತ್ತಾರೆ ಎಂಬುದು ಹಾವು–ಏಣಿ ಆಟದಷ್ಟೇ ರೋಚಕವಾಗಿದೆ.

* ನಾಲ್ಕು ದಶಕಗಳ ಹೋರಾಟದ ಬದುಕು ನನ್ನದು, ಅವಳಿ ಜಿಲ್ಲೆಯ ಮುಳುಗಡೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಬಿಜೆಪಿ ಸರ್ಕಾರಗಳ ಸಾಧನೆ ಈ ಚುನಾವಣೆಯಲ್ಲಿ ನನ್ನ ಕೈಹಿಡಿಯಲಿದೆ.

–ಪಿ.ಎಚ್‌.ಪೂಜಾರ, ಬಿಜೆಪಿ ಅಭ್ಯರ್ಥಿ

* ಗ್ರಾ.ಪಂ.ಸದಸ್ಯರಿಗೆ ₹ 3 ಸಾವಿರ ಗೌರವಧನ ಕೊಡಿಸಲು ಆದ್ಯತೆ ನೀಡುತ್ತೇನೆ. ಕೋವಿಡ್ ವೇಳೆ ಪ್ರತಿ ಗ್ರಾ.ಪಂ.ಗೆ ಸ್ಯಾನಿಟೈಸರ್‌ ಮಷಿನ್‌ ಒದಗಿಸಿದ್ದೇನೆ. ಸದಸ್ಯರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ.

–ಸುನೀಲ್‌ಗೌಡ ಪಾಟೀಲ, ಕಾಂಗ್ರೆಸ್‌ ಅಭ್ಯರ್ಥಿ

* ಎರಡೂ ಪಕ್ಷಗಳು ಒಡ್ಡಿದ ಆಸೆ, ಆಮಿಷಗಳಿಗೆ ಒಳಗಾಗದೇ ಅವಳಿ ಜಿಲ್ಲೆಯ ಗ್ರಾ. ಪಂ.ಸದಸ್ಯರ ಸ್ವಾಭಿಮಾನ, ಗೌರವ ಹಾಗೂ ಮತದಾನದ ಹಕ್ಕಿನ ರಕ್ಷಣೆಗಾಗಿ ಸ್ಪರ್ಧಿಸಿದ್ದೇನೆ. ಜಯಗಳಿಸುವ ವಿಶ್ವಾಸವಿದೆ.

–ಮಲ್ಲಿಕಾರ್ಜುನ ಲೋಣಿ,  ಪಕ್ಷೇತರ ಅಭ್ಯರ್ಥಿ 

ಜಿಲ್ಲೆ;ಪುರುಷರು;ಮಹಿಳೆಯರು;ಒಟ್ಟು ಮತದಾರರು;ಮತಗಟ್ಟೆಗಳು

ವಿಜಯಪುರ;1878;2060;3938;208
ಬಾಗಲಕೋಟೆ:1678;1769;3447;203

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು