ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಗೋದಾಮು ದುರಂತ | ‘ಇಲ್ಲಿರಲು ಆಗಲ್ಲ, ನಮ್ಮೂರಿಗೆ ಹೋಗಲು ಹಣವಿಲ್ಲ’

Published 7 ಡಿಸೆಂಬರ್ 2023, 3:34 IST
Last Updated 7 ಡಿಸೆಂಬರ್ 2023, 3:34 IST
ಅಕ್ಷರ ಗಾತ್ರ

ವಿಜಯಪುರ: ‘ಕಣ್ಣೆದುರೇ ನಮ್ಮವರು ಜೀವಕಳೆದುಕೊಂಡಿದ್ದಾರೆ. ಇಲ್ಲಿ ಕೆಲಸ ಮಾಡಲು ಆಗಲ್ಲ. ಆ ಘೋರ ಘಟನೆ ಪದೇ ಪದೇ ಕಣ್ಮುಂದೆ ಬರುತ್ತಿದೆ. ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ಮಾನಸಿಕವಾಗಿ ಕುಗ್ಗಿದ್ದೇವೆ. ನಮಗೆ ಬಾಕಿ ಕೂಲಿ ಕೊಟ್ಟರೆ, ನಮ್ಮೂರಿಗೆ ಮರಳುತ್ತೇವೆ’

ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಗೋದಾಮು ದುರಂತದಲ್ಲಿ ಬದುಕುಳಿದಿರುವ ಬಿಹಾರದ ಕಾರ್ಮಿಕರ ಬೇಡಿಕೆ ಇದು. ನಿರಾಸೆ, ಬೇಸರ ಮತ್ತು ಆತಂಕದಲ್ಲಿ ಇರುವ ಅವರು ‘ನಮ್ಮೂರಿಗೆ ಸುರಕ್ಷಿತವಾಗಿ ತಲುಪಿದರೆ ಸಾಕು’ ಎಂಬ ಸ್ಥಿತಿಯಲ್ಲಿದ್ದಾರೆ.

‘ದುರಂತದ ವಿಷಯ ಗೊತ್ತಾದ ಕೂಡಲೇ ಊರಿನಿಂದ ಪತ್ನಿ, ಮಕ್ಕಳು, ಬಂಧುಗಳು ದೂರವಾಣಿ ಕರೆ ಮಾಡಿ, ಊರಿಗೆ ಮರಳಲು ಕೋರುತ್ತಿದ್ದಾರೆ. ಬಂದು ಬಿಡಿ, ಇಲ್ಲಿಯೇ ಏನಾದರೂ ಮಾಡಿ ಬದುಕೋಣ ಎಂದು ಗೋಗರೆಯುತ್ತಿದ್ದಾರೆ’ ಎಂದು ಕಾರ್ಮಿಕ ದಿಲೀಪ್ ಮುಖಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಕ್ಷಣವೇ ಊರಿಗೆ ಹೋಗಲು ಕೈಯಲ್ಲಿ ಹಣವಿಲ್ಲ. ರೈಲು ಟಿಕೆಟ್‌ ತೆಗೆಸಲು ನಮ್ಮ ಕೈಯಲ್ಲಿ ಹಣವಿಲ್ಲ, ಮಾಲೀಕರು ನಮ್ಮ ಬಾಕಿ ಕೂಲಿ ಕೊಟ್ಟರೆ ಈಗಲೇ ಹೊರಡುತ್ತೇವೆ. ಮರಳಿ ಬರುತ್ತೇವೆಯೇ ಇಲ್ಲವೇ ಎಂಬುದು ಗೊತ್ತಿಲ್ಲ’ ಎಂದು ಅವರು ತಿಳಿಸಿದರು.

ಮತ್ತೊಬ್ಬ ಕೂಲಿಕಾರ್ಮಿಕ ಶ್ಯಾಮ್ ಪಾಸ್ವಾನ್,‘ಇಲ್ಲಿ ಈಗ ಕೆಲಸ ಮಾಡಲು ಭಯವಾಗುತ್ತಿದೆ. ಆರೋಗ್ಯ ಹದಗೆಟ್ಟರೂ ಬೇಗನೇ ಚಿಕಿತ್ಸೆ ಸಿಗಲ್ಲ. ಘಟನೆ ನಡೆದಾಗ ಅಧಿಕಾರಿಗಳು, ಪೊಲಿಸರು, ಜನಪ್ರತಿನಿಧಿಗಳು ಬಂದು ಸಾಂತ್ವನ ಹೇಳಿ ಹೋದರು. ಆದರೆ, ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎಂದರು.

‘ಸಾವಿಗೀಡಾದವರಿಗೆ ಮಾಲೀಕ ಇನ್ನೂ ಪರಿಹಾರ ಕೊಟ್ಟಿಲ್ಲ. ಸರ್ಕಾರವೂ ಪರಿಹಾರ ಕೊಟ್ಟಿಲ್ಲ, ಶವಗಳ ಅಂತ್ಯಕ್ರಿಯೆಗೂ ಹಣ ಸಿಕ್ಕಿಲ್ಲ. ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ’ ಎಂದರು.

‘ಮುಖಿಯಾ ಹೆಸರುಳ್ಳವರು ಬಿಹಾರದಲ್ಲಿ ಮೀನುಗಾರಿಕೆ ಕೆಲಸ ಮಾಡುವವರು. ನಮ್ಮ ಕುಟುಂಬ ಮೊದಲಿನಿಂದಲೂ ಮೀನುಗಾರಿಕೆ ಮಾಡುತ್ತಿದೆ. ಆದರೆ, ಈಗ ಅಲ್ಲಿ ಮೀನುಗಾರಿಕೆ ಲಾಭದಾಯಕವಾಗಿಲ್ಲ. ಕೂಲಿ ಸಹ ಗಿಟ್ಟುತ್ತಿಲ್ಲ. ಇಲ್ಲಿಯಾದರೂ ನಿಶ್ಚಿತ ಕೂಲಿ ಸಿಗುವುದೆಂದು ಬಂದೆವು. ಆದರೆ, ನಮ್ಮ ಆಪ್ತರು ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಬರುವುದೆಂದು ನಿರೀಕ್ಷಿಸಿರಲಿಲ್ಲ’ ಎಂದು ಕಾರ್ಮಿಕ ಮಂಗಲ್ ಮುಖಿಯಾ ತಿಳಿಸಿದರು.

ಊರು ತಲುಪಿದ ಕಾರ್ಮಿಕರ ಶವ 

‘ಗೋದಾಮು ದುರಂತದಲ್ಲಿ ಸಾವಿಗೀಡಾದ ಏಳು ಜನ ಕಾರ್ಮಿಕರ ಶವಗಳನ್ನು ಹೈದರಾಬಾದ್‌ನಿಂದ ಪಟ್ನಾಕ್ಕೆ ವಿಮಾನದ ಮೂಲಕ ಸಾಗಿಸಲಾಗಿದೆ. ಬುಧವಾರ ಸಂಜೆ ಆಯಾ ಕಾರ್ಮಿಕರ ಊರುಗಳಿಗೆ ಶವಗಳನ್ನು ತಲುಪಿಸಲಾಗಿದೆ’ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ‘ಪ್ರಜಾವಾಣಿ’ ತಿಳಿಸಿದರು. ‘ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಮೊತ್ತವನ್ನು ಮೃತರ ಕುಟುಂಬದವರಿಗೆ ತಲುಪಿಸುವ ಸಂಬಂಧ ಬಿಹಾರ ರಾಜ್ಯದ ಆಯಾ ಜಿಲ್ಲಾಧಿಕಾರಿಗಳಿಂದ ಅಗತ್ಯ ಮಾಹಿತಿ ದಾಖಲೆ ಪತ್ರಗಳನ್ನು ಪಡೆದು ಬ್ಯಾಂಕ್‌ ಖಾತೆಗೆ ಶೀಘ್ರದಲ್ಲೇ ಹಾಕಲಾಗುವುದು’ ಎಂದು ಹೇಳಿದರು. ‘ವಿಜಯಪುರದಲ್ಲಿ ಇರುವ ಕೂಲಿಕಾರ್ಮಿಕರು ತಮ್ಮ ಊರಿಗೆ ತೆರಳುವ ಸಂಬಂಧ ಸಹಕಾರ ಕೇಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಲ್ಲ ಅವರಿಗೆ ಯಾವುದೇ ರೀತಿ ಅನಾನುಕೂಲ ಆಗದಂತೆ ಜಿಲ್ಲಾಡಳಿತ ಅಗತ್ಯ ನೆರವು ನೀಡಲು ಸಿದ್ಧವಿದೆ. ಗೋದಾಮಿನ ಮಾಲೀಕರಿಂದ ಕಾರ್ಮಿಕರಿಗೆ ಬಾಕಿ ಕೂಲಿ ಕೊಡಿಸಲಾಗುವುದು’ ಎಂದರು.

ಗೋದಾಮು ದುರಂತದ ಆರೋಪಿಗಳು ವಕೀಲರ ಮೂಲಕ ಕೋರ್ಟ್‌ಗೆ ಶರಣಾಗಲು ಯತ್ನ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ.
ಋಷಿಕೇಶ ಸೋನಾವಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ
ವಿಜಯಪುರ ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಗೋದಾಮಿನ ಹೊರಭಾಗದಲ್ಲಿ ಬುಧವಾರ ಮಧ್ಯಾಹ್ನ ಅಡುಗೆ ಸಿದ್ಧಪಡಿಸುತ್ತಿರುವ ಬಿಹಾರದ ಕೂಲಿಕಾರ್ಮಿಕರು 
–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಗೋದಾಮಿನ ಹೊರಭಾಗದಲ್ಲಿ ಬುಧವಾರ ಮಧ್ಯಾಹ್ನ ಅಡುಗೆ ಸಿದ್ಧಪಡಿಸುತ್ತಿರುವ ಬಿಹಾರದ ಕೂಲಿಕಾರ್ಮಿಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT