ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ ಸಿಗದ ಬಸನಗೌಡ ಪಾಟೀಲ ಯತ್ನಾಳರ ಮುಂದಿನ ನಡೆಯೇನು?

ವಿಜಯಪುರ ಜಿಲ್ಲೆಗೆ ಮತ್ತೆ ಕೈತಪ್ಪಿದ ಸಚಿವ ಸ್ಥಾನ
Last Updated 4 ಆಗಸ್ಟ್ 2021, 12:27 IST
ಅಕ್ಷರ ಗಾತ್ರ

ವಿಜಯಪುರ: ‘ಸಚಿವ ಸ್ಥಾನ ನೀಡದಿದ್ದರೇ ಬೊಮ್ಮಾಯಿ ಸರ್ಕಾರಕ್ಕೆ ಶಾಕ್‌ ಕೊಡಬೇಕಾಗುತ್ತದೆ’ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮುಂದಿನ ನಡೆ ಏನೆಂಬುದು ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

‘ಬೊಮ್ಮಾಯಿ ಸಂಪುಟ ಸೇರುವುದು ನೂರಕ್ಕೆ ನೂರು ಖಚಿತ’ ಎಂದು ಸ್ವತಃ ಯತ್ನಾಳ ಅವರೇ ಎರಡು ದಿನಗಳ ಹಿಂದಷ್ಟೇ ಮಾಧ್ಯಮಗಳ ಎದುರು ವಿಶ್ವಾಸ ವ್ಯಕ್ತಪಡಿಸಿದ್ದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವುದೇ ಅವರ ಈ ಅಚಲ ವಿಶ್ವಾಸಕ್ಕೆ ಕಾರಣವಾಗಿತ್ತು. ಅಲ್ಲದೇ, ಬಿಜೆಪಿ ವರಿಷ್ಠರಿಂದಲೂ ಅವರಿಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು ಎಂದು ಅವರ ಆಪ್ತರು ಹೇಳುತ್ತಿದ್ದರು. ಆದರೆ, ಇದೀಗ ಅವರಿಗೆ ವಿಶ್ವಾಸ ‘ಘಾತ’ವಾಗಿದೆ.

ಯತ್ನಾಳರಿಗೆ ವಿಶ್ವಾಸಘಾತ ಮಾಡಿದವರು ಯಾರೂ? ಹೇಗಾಯಿತು? ಏಕಾಯಿತು? ಗೌಡರಿಗೆ ಹೀಗಾಗಬಾರದಿತ್ತು ಎಂದು ಅವರ ಬೆಂಬಲಿಗರು ಮರಗುತ್ತಿದ್ದಾರೆ.

ಯಡಿಯೂರಪ್ಪ ವಿರೋಧಿ ಬಣ ಯತ್ನಾಳ ಅವರನ್ನು ಬಳಸಿ ಬಿಸಾಡಿತೇ? ಅಥವಾ ಯಡಿಯೂರಪ್ಪನವರಿಂದಲೇಸಚಿವ ಸ್ಥಾನ ತಪ್ಪಿತೇ? ಎಂಬ ಅನುಮಾನ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ದಿನ ಬೆಳಗಾದರೆ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪಗಳ ಸುರಿಮಳೆಗೈಯುತ್ತಿದ್ದ ಯತ್ನಾಳ ಅವರು, ಬೊಮ್ಮಾಯಿ ಅವರನ್ನು ಅದೇ ರೀತಿ ಕಾಡುತ್ತಾರೋ ಅಥವಾ ಮೌನಕ್ಕೆ ಶರಣಾಗುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲೂ ವಿರೋಧ:ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡ ಪರಿಣಾಮ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಲಭಿಸದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲದಿರುವುದು ಈಗಾಗಲೇ ನಗರದ ಸಾರ್ವಜನಿಕರಿಗಷ್ಟೇ ಅಲ್ಲ, ಸ್ವತಃ ಬಿಜೆಪಿ ಮುಖಂಡರು, ಕಾರ್ಯಕರ್ತರ ಬಹಿರಂಗ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಯೂ ಹತ್ತಿರವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಗೌಡರ ನಡೆ ಯತ್ತ ಕಡೆ ಎಂಬುದು ಅವರ ಆಪ್ತರಿಗೂ ತಿಳಿಯದಾಗಿದೆ.

ವಿರೋಧಿಗಳು ಖುಷ್‌:ಯತ್ನಾಳ ಅವರಿಗೆ ಸ್ವಂತಃ ಕ್ಷೇತ್ರವಾದ ವಿಜಯಪುರದಲ್ಲೇ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಇತರೆ ಜನಪ್ರತಿನಿಧಿಗಳ ಜೊತೆ ಸೌಹಾರ್ದ ಸಂಬಂಧವಿಲ್ಲ. ತಮ್ಮ ನೇರ ನಡೆ–ನುಡಿಯಿಂದಾಗಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ಗೌಡರಿಗೆ ಸಚಿವ ಸ್ಥಾನ ಲಭಿಸದೇ ಇರುವುದು ವಿರೋಧಿಗಳಿಗೆ ಹಾಲು–ತುಪ್ಪು ಉಂಡಷ್ಟು ಖುಷಿಯಾಗಿದ್ದಾರೆ.

ನಡಹಳ್ಳಿಯೂ ವಿಫಲ:ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಯಡಿಯೂರಪ್ಪ ಅವರ ಮೂಲಕ ಸಾಕಷ್ಟು ಲಾಭಿ ನಡೆಸಿದ್ದರು. ಅವರೂ ಸಹ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಉಳಿದಂತೆ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತು ವಿಧಾನ ಪರಿಷತ್‌ ಅರುಣ ಶಹಾಪುರ ಅವರು ಸಚಿವ ಸ್ಥಾನದ ಆಕಾಂಕ್ಷೆಯನ್ನು ಎಲ್ಲಿಯೂ ವ್ಯಕ್ತಪಡಿಸಿರಲಿಲ್ಲ. ಆದರೆ, ಅವರ ಬೆಂಬಲಿಗರು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಸಚಿವ ಸ್ಥಾನ ಸಿಗದೇ ಇರುವುದು ಪಕ್ಷ ಸಂಘಟನೆಗೂ ಹಿನ್ನಡೆಯಾಗಲಿದೆ ಎಂಬ ಅಭಿಪ‍್ರಾಯ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT