ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ದ್ರಾಕ್ಷಿ ನಾಡಲ್ಲಿ ಕಾಶ್ಮೀರಿ ಸೇಬು ಬೆಳೆದ ರೈತ

ಕೊಲ್ಹಾರದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಯಶೋಗಾಥೆ
Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ:ರುಚಿಕರವಾದ ಮತ್ತು ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆಗೆ ಪ್ರಸಿದ್ಧವಾದ ಬಿಸಿಲನಾಡು ವಿಜಯಪುರ ನೆಲದಲ್ಲಿ ಪ್ರಗತಿಪರ ರೈತರೊಬ್ಬರು ಕಾಶ್ಮೀರಿ ಸೇಬು ಬೆಳೆಯುವ ಮೂಲಕ ಬೆರಗು ಮೂಡಿಸಿದ್ದಾರೆ.

ಹೌದು, ಕಾಶ್ಮೀರದ ಹಿಮ ಭರಿತ, ಚಳಿಯ ವಾತಾವರಣದಲ್ಲಿ ಬೆಳೆಯುವ ಸೇಬನ್ನು ಕೃಷ್ಣಾ ತೀರದ ಕಪ್ಪು ಭೂಮಿಯಲ್ಲಿ ಬೆಳೆದವರು ಕೊಲ್ಹಾರದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ.

ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ, ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ. ಮೋಡ ಮುಸುಕಿದ, ಕಡಿಮೆ ಉಷ್ಣಾಂಶದ, ಆರ್ದ್ರ ವಲಯದಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ಮತ್ತು ಮಣಿಪುರಗಳಲ್ಲಿ ಸೇಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇದೇ ಮೊದಲ ಬಾರಿಗೆ ಕೊಲ್ಹಾರದ ರೈತ ಸಿದ್ದಪ್ಪ ಬಾಲಗೊಂಡ ಅವರು ತಮ್ಮ ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆಯುವ ಮೂಲಕ ಹೊಸ ಆಶಾಭಾವ ಮೂಡಿಸಿದ್ದಾರೆ.

ಒಂದು ಎಕರೆ ಪ್ರದೇಶದಲ್ಲಿ ಸುಮಾರು 300 ಸೇಬು ಗಿಡಗಳನ್ನು ಎರಡು ವರ್ಷಗಳ ಹಿಂದೆ ನಾಟಿ ಮಾಡಿದ್ದು, ಇದೀಗ ಗಿಡಗಳು ಫಸಲು ಬಂದಿವೆ. 10ರಿಂದ 40 ಕಾಯಿಗಳು ಹಿಡಿದಿವೆ.ಇನ್ನೊಂದು ತಿಂಗಳಲ್ಲಿ ಹಣ್ಣು ಕೊಯ್ಲಿಗೆ ಬರಲಿದೆ.

ಸೇಬು ಕೃಷಿ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಿದ್ದಪ್ಪ ಬಾಲಗೊಂಡ, ವಿಜಯಪುರ ಹವಾಮಾನ ಮತ್ತು ಭೂಮಿ ಹಣ್ಣುಗಳ ಉತ್ಪಾದನೆಗೆ ಅತ್ಯಂತ ಯೋಗ್ಯವಾಗಿದೆ. ಇಲ್ಲಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಲಿಂಬೆ ದೇಶದಲ್ಲೇ ಹೆಚ್ಚು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಈ ನೆಲದಲ್ಲಿ ಸೇಬು ಬೆಳೆಯಲು ಸಾಧ್ಯವೇ ಎಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ಒಂದು ಎಕರೆ ಪ್ರದೇಶದಲ್ಲಿ ಕಾಶ್ಮೀರದಿಂದ ಗಿಡಗಳನ್ನು ತಂದು ನಾಟಿ ಮಾಡಿ, ಕೃಷಿ ಮಾಡಿದ್ದೇನೆ. ಇದೀಗ ಪ್ರಥಮ ಬೆಳೆ ಬಂದಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

12 ಅಡಿ ಅಂತರದಸಾಲು ಹಾಗೂ 10 ಅಡಿ ಅಂತರಕ್ಕೆ ಗಿಡಗಳನ್ನು ನಾಟಿ ಮಾಡಿದ್ದೇನೆ. ರಾಸಾಯನಿಕ ಗೊಬ್ಬರ, ಔಷಧ ಬಳಸದೇ ಜೀವಾಮೃತ ಬಳಕೆ ಮಾಡಿ ಗಿಡಗಳನ್ನು ಸಾವಯವ ಕೃಷಿಯಲ್ಲಿ ಬೆಳೆಸಿದ್ದೇನೆ. ಗಿಡಗಳು ಸೊಂಪಾಗಿ ಬೆಳೆದಿವೆ ಎಂದು ಹೇಳಿದರು.

ಕೊಳವೆಬಾವಿ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಸೇಬು ಗಿಡಗಳಿಗೆ ಪೂರೈಕೆ ಮಾಡುತ್ತಿದ್ದೇನೆ ಎಂದರು.

ಕಾಶ್ಮೀರದ ಸೇಬು ಬೆಳೆಗಾರರಿಂದ ಅಗತ್ಯ ಮಾಹಿತಿ ಪಡೆದುಕೊಂಡು ಸ್ವಯಂ ಕೃಷಿ ಮಾಡಿದ್ದೇನೆ. ಕೇವಲ ನನ್ನ ಲಾಭಕ್ಕಾಗಿ ಸೇಬು ಬೆಳೆದಿಲ್ಲ. ಈ ಭಾಗದಲ್ಲೂ ಸೇಬು ಬೆಳೆಯಬಹುದು ಎಂಬುದನ್ನು ನಮ್ಮ ರೈತ ಸಮುದಾಯಕ್ಕೆ ತಿಳಿಸುವ ಸದುದ್ದೇಶದಿಂದ ಬೆಳೆದಿದ್ದೇನೆ. ನಮ್ಮ ರೈತರು ಯಾವುದೇ ಹಿಂಜರಿಕೆ ಇಲ್ಲದೇ ಸೇಬು ಬೆಳೆಯಬಹುದು ಎಂದು ಸಲಹೆ ನೀಡಿದರು.

ಬಾಲಗೊಂಡ ತೋಟದಲ್ಲಿ ಬಗೆಬಗೆ ಹಣ್ಣುಗಳು
ಸಿದ್ದಪ್ಪ ಬಾಲಗೊಂಡ ಅವರು ತಮ್ಮ 20 ಎಕರೆ ಹೊಲದಲ್ಲಿ ಕಾಶ್ಮೀರಿ ಸೇಬು ಮಾತ್ರವಲ್ಲದೇ ಡ್ರ್ಯಾಗನ್‌ ಫ್ರೂಟ್‌, ಫ್ಯಾಶನ್‌ ಫ್ರೂಟ್‌, ಕರ್ಜೂರ, ಪೇರಲ, ಸೀತಾಫಲ, ರಾಮ ಫಲ, ಲಕ್ಷ್ಮಣ ಫಲ, ನೇರಲೆ, ಏಲಕ್ಕಿ ಬಾಳೆ, ಸಿಹಿ ಹುಣಸೆ, ಸೀಡ್‌ಲೆಸ್‌ ಲಿಂಬು, ಮೊಸಂಬಿ, ದ್ರಾಕ್ಷಿಯನ್ನೂ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT