ಭಾನುವಾರ, ಜನವರಿ 17, 2021
20 °C
ಯುವ ಕಾಂಗ್ರೆಸ್‌ ವಿಜಯಪುರ ಜಿಲ್ಲಾ, ಬ್ಲಾಕ್ ಘಟಕಗಳಿ‌ಗೆ ಚುನಾವಣೆ ಜ.11ಕ್ಕೆ

ಯುವ ಕಾಂಗ್ರೆಸ್‌ ವಿಜಯಪುರ: ಅಬ್ದುಲ್‌ ಖಾದರ್‌ ಮರು ಆಯ್ಕೆಗೆ ವೇದಿಕೆ ಸಜ್ಜು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಯುವ ಕಾಂಗ್ರೆಸ್ ವಿಜಯಪುರ‌ ಜಿಲ್ಲಾ ಮತ್ತು ಬ್ಲಾಕ್‌ ಘಟಕಗಳಿಗೆ ಜನವರಿ 11 ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಆನ್‌ಲೈನ್‌ ವೋಟಿಂಗ್‌ ಮೂಲಕ ಚುನಾವಣೆ ನಡೆಯಲಿದೆ.

ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾದ ಅಬ್ದುಲ್‌ ಖಾದರ್‌, ಸಿದ್ಧಪ್ಪ  ಛಾಯಗೋಳ, ಪ್ರಕಾಶ ಗುಡಿಮನಿ, ಸಂತೋಷ ಪಾಟೀಲ, ದೇವೇಂದ್ರ ರಾಠೋಡ, ಚನ್ನಬಸಪ್ಪ ವಾರದ, ಜೀವನ್‌ ಮ್ಯಾಗೇರಿ, ಅಬ್ದುಲ್‌ ಯೂಸೂಫ್ ನಾಯಿಕೋಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಅಬ್ದುಲ್‌ ಖಾದರ್‌ ಅವರನ್ನೇ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷದ ಮುಖಂಡರು ವೇದಿಕೆ ಸಜ್ಜುಗೊಳಿಸಿದ್ದು, ಆಯ್ಕೆ ಬಹುತೇಕ ಅಂತಿಮವಾಗಿದೆ.

ಚುನಾವಣೆ ನೆಪದಲ್ಲಿ ಯುವ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿಸುವ ಬದಲು ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಅಬ್ದುಲ್‌ ಖಾದರ್‌ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಸಿದ್ದು ಛಾಯಗೋಳ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಾಗೂ ಇನ್ನುಳಿದವರನ್ನು ವಿವಿಧ ಪದಾಧಿಕಾರಿಗಳ ಹುದ್ದೆಗೆ ಆಯ್ಕೆ ಮಾಡಲು ಯುವ ಮುಖಂಡರಾದ ಸಂಯುಕ್ತಾ ಪಾಟೀಲ ಮತ್ತು ಸಂಗಮೇಶ ಛಾಯಗೋಳ ಅವರ ನೇತೃತ್ವದಲ್ಲಿ ಸಂಧಾನ ನಡೆದಿದ್ದು, ಎಲ್ಲರೂ ಒಮ್ಮತಕ್ಕೆ ಬಂದಿರುವುದಾಗಿ ಖಚಿತ ಮೂಲಗಳಿಂದ ತಿಳಿದುಬಂದಿದೆ.

ವಿವಿಧ ಬ್ಲಾಕ್‌ಗಳಿಗೂ ಆಯ್ಕೆ:

ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಜೊತೆಗೆ ವಿವಿಧ ಬ್ಲಾಕ್‌ಗಳಿಗೂ ಅಧ್ಯಕ್ಷರ ಆಯ್ಕೆ ಬಹುತೇಕ ಅಂತಿಮವಾಗಿದೆ.

ಮುದ್ದೇಬಿಹಾಳಕ್ಕೆ ಮಹಮ್ಮದ್‌ ರಫೀಕ್‌ ಶಿರೋಳ(2ನೇ ಬಾರಿಗೆ), ಇಂಡಿ–ಅವಿನಾಶ ಬಗಲಿ, ವಿಜಯಪುರ ನಗರ–ಮೋಹಿನ್‌ ಶೇಖ್‌(3ನೇ ಬಾರಿ), ಬಬಲೇಶ್ವರ –ಪ್ರವೀಣ ಪಾಟೀಲ(2ನೇ ಬಾರಿಗೆ), ಸಿಂದಗಿ–ಇರ್ಫಾನ್‌ ಅಳಂದ, ಹೂವಿನ ಹಿಪ್ಪರಗಿ–ಮಂಜುನಾಥ ಬುದ್ನಿ, ಆಲಮೇಲ–ನಜೀರ್‌ ಕಲಾಲ್‌, ದೇವರ ಹಿಪ್ಪರಗಿ–ಮುನೀರ್‌ ಬಿಜಾಪುರ, ಜಲನಗರ–ಸಚಿನ್‌ ಮಲಘಾಣ ಮತ್ತು ತಿಕೋಟಾ ಬ್ಲಾಕ್‌ಗೆ ಈರಪ್ಪ ಸಿಂಧೂರ ಆಯ್ಕೆ ನಿಶ್ಚಿತವಾಗಿದೆ.

ಇನ್ನುಳಿದಂತೆ ಬಸವನ ಬಾಗೇವಾಡಿ, ಕೊಲ್ಹಾರ, ನಾಗಠಾಣ, ಚಡಚಣ, ಬಳೊಳ್ಳಿ, ತಾಳಿಕೋಟೆ ಬ್ಲಾಕ್‌ಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲದ ಕಾರಣ ಅರ್ಹರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

11,300 ಮತದಾರರು:

ಜಿಲ್ಲೆಯಲ್ಲಿ 11,300 ಜನ ಯುವ ಕಾಂಗ್ರೆಸ್‌ ಸದಸ್ಯರಿದ್ದು, ಇವರೆಲ್ಲರೂ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಬಹುತೇಕ ಸ್ಪರ್ಧಿಗಳು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರನ್ನು ಯುವ ಕಾಂಗ್ರೆಸ್ ಸದಸ್ಯರನ್ನಾಗಿ ಹೆಸರು ನೋಂದಾಯಿಸಿದ್ದಾರೆ.

ಹೆಚ್ಚು ಮತ ಪಡೆದವರು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಕಡಿಮೆ ಮತ ಪಡೆದ ಮೂವರು ಉಪಾಧ್ಯಕ್ಷರಾಗಿ (ಒಂದು ಸಾಮಾನ್ಯ, ಒಂದು ಎಸ್‌ಸಿ, ಒಂದು ಮಹಿಳಾ) ಹಾಗೂ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲಿದ್ದಾರೆ.

ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಲ್ಲಿ ಯಾರೊಬ್ಬರೂ ಸ್ಪರ್ಧಿಸಿಲ್ಲ. ಮತದಾನ ಮುಗಿದ ಬಳಿಕ ಪಕ್ಷದ ಸಕ್ರಿಯ ಕಾರ್ಯಕರ್ತೆಯೊಬ್ಬರನ್ನು ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಪಕ್ಷದ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಐವೈಸಿ ಆ್ಯಪ್‌:

ಯುವ ಕಾಂಗ್ರೆಸ್‌ ಚುನಾವಣೆಗಾಗಿ ಐವೈಸಿ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ಗೂಗಲ್‌ ಪ್ಲೇಸ್ಟೋರ್‌ನಿಂದ ಐವೈಸಿ ಆ್ಯಪ್‌ ಅನ್ನು ಜ.9 ರಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ. ಈ ಆ್ಯಪ್‌ ಮೂಲಕವೇ ಸದಸ್ಯರು ಮತ ಚಲಾಯಿಸಬೇಕಾಗುತ್ತದೆ.

ಯುವಕರಿಗೆ ಅವಕಾಶ: ಖಾದರ್‌

ವಿಜಯಪುರ: ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಕರೆ ತರಲು ಆದ್ಯತೆ ನೀಡುವ ಜೊತೆಗೆ ಮುಂಬರುವ ಮಹಾನಗರ ಪಾಲಿಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಯುವ ಕಾಂಗ್ರೆಸ್‌ ಮುಖಂಡರಿಗೆ ಹೆಚ್ಚಿನ ಸೀಟುಗಳನ್ನು ಕೊಡಿಸಲು ಪ್ರಯತ್ನ ನಡೆಸಲಾಗುವುದು ಎಂದು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಅಬ್ದುಲ್‌ ಖಾದರ್‌ ತಿಳಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಜೊತೆಗೆ ಯುವಕರು, ರೈತರ ಸಮಸ್ಯೆಗಳಿಗೆ ಯುವ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದೆ. ಯುವಕರ ಕೈಗೆ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

ಸಂಯುಕ್ತಾ ಪಾಟೀಲ ಸ್ಪರ್ಧೆ

ವಿಜಯಪುರ: ಯುವ ಕಾಂಗ್ರೆಸ್‌ ರಾಜ್ಯ ಘಟಕದ ಹಾಲಿ ಕಾರ್ಯದರ್ಶಿಯಾಗಿರುವ ಜಿಲ್ಲೆಯವರೇ ಆದ ಸಂಯುಕ್ತಾ ಪಾಟೀಲ ಅವರು ಈ ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರ ಪುತ್ರಿಯಾಗಿರುವ ಸಂಯುಕ್ತಾ ಅವರು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕಿಯೂ ಆಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು