ಶನಿವಾರ, ಜನವರಿ 29, 2022
23 °C
ಜಿಲ್ಲೆಯಲ್ಲೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ

ವಿಜಯಪುರ: ವಾರಾಂತ್ಯ ಕರ್ಫ್ಯೂ; ಜನಜೀವನ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಿಂದ ಶನಿವಾರ ಜನಜೀವನ ಸ್ತಬ್ಧವಾಗಿತ್ತು. ಭಾನುವಾರವೂ ಯಥಾ ರೀತಿ ಮುಂದುವರಿಯಲಿದೆ.

ನಾಲ್ಕೈದು ತಿಂಗಳಿಂದ ವಾರಂತ್ಯದ ರಜೆ ದಿನಗಳಲ್ಲಿ ನಗರದ ಪ್ರವಾಸಿ ತಾಣಗಳಿಗೆ ಮುತ್ತಿಕ್ಕುತ್ತಿದ್ದ ಪ್ರವಾಸಿಗರು ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಕಂಡುಬರಲಿಲ್ಲ. ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಬಾರಾ ಕಮಾನ್‌, ಇಬ್ರಾಹಿಂರೋಜಾ, ಆಲಮಟ್ಟಿ ಜಲಾಶಯ, ಬಸವನ ಬಾಗೇವಾಡಿಯಲ್ಲಿರುವ ಬಸವಣ್ಣನ ಜನ್ಮ ಸ್ಥಳ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದವು. 

ಪ್ರಮುಖ ಹೆದ್ದಾರಿ, ರಸ್ತೆ, ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಸಂಚಾರಕ್ಕೆ ತಡೆವೊಡ್ಡಿದ್ದರು. ಹೋಗಿ ಬರುವ ಬೈಕ್‌, ಕಾರು ಮತ್ತಿತರರ ವಾಹನಗಳನ್ನು ತಡೆದು, ವಿಚಾರಣೆ ಮಾಡಿದರು. ತುರ್ತು ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದರು. ಅನಗತ್ಯವಾಗಿ ತಿರುಗಾಡುವ ಬೈಕ್‌, ಕಾರುಗಳನ್ನು ತಡೆದು ದಂಡ ವಿಧಿಸಿದರು. 

ಕಿರಾಣಿ ಅಂಗಡಿಗಳು, ಹಾಲು, ಹಣ್ಣು, ತರಕಾರಿ, ಹೂವು, ಮೀನು, ಮಾಂಸದ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರ ಸಂಖ್ಯೆ ಕ್ಷೀಣವಾಗಿತ್ತು.

ನಗರ ಸಾರಿಗೆ ಬಸ್‌ಗಳು ಹಾಗೂ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಸ್‌, ರೈಲುಗಳ ಸಂಚಾರ ಎಂದಿನಂತೆ ಇತ್ತಾದರೂ ಪ್ರಯಾಣಿಕರು ಸಂಖ್ಯೆ ಕಡಿಮೆ ಇತ್ತು. ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ಕಂಡುಬಂದರು.

ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜಿಗೆ ರಜೆ ನೀಡಲಾಗಿತ್ತು. ಕೋವಿಡ್‌ಗೆ ಅಂಜಿದ ಜನರು ದಿನಪೂರ್ತಿ ಮನೆಯಲ್ಲಿ ಕಳೆದರು. ಖಾಸಗಿ ಕಂಪನಿಗಳ ಕಚೇರಿಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳು ಕಾರ್ಯನಿರ್ವಹಿಸಿದವು.

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿತ್ತು.  ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಮಾಲ್‌ಗಳು, ಮದ್ಯದ ಅಂಗಡಿಗಳು ಬಾಗಿಲು ಬಂದ್‌ ಆಗಿದ್ದವು.

ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧವಿತ್ತು. ಬಹುತೇಕ ಕಡೆ ಭಕ್ತರ ದರ್ಶನಕ್ಕೆ, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.

ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದವು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ಅಡಚಣೆಯಾಗಲಿಲ್ಲ.

ನಗರ ಮತ್ತು ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಅಷ್ಟೊಂದು ಇಲ್ಲ. ಆದರೆ, ಎನ್‌ಟಿಪಿಸಿಯಲ್ಲಿ ಕೊರೊನಾ ಸೋಂಕು ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದ್ದು, ನಿರ್ಬಂಧ ವಿಧಿಸಲಾಗಿದೆ.

ಜಿಲ್ಲೆಯ ಗಡಿ ಭಾಗದಲ್ಲಿ ಮಹಾರಾಷ್ಟ್ರದಿಂದ ಬರುವ, ಹೋಗುವ ವಾಹನಗಳು, ಪ್ರಯಾಣಿಕರನ್ನು ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ನಿಯಮ ಉಲ್ಲಂಘನೆ: ಕೋವಿಡ್‌ ಮೂರನೇ ಅಲೆ ಆರಂಭವಾಗಿದ್ದರೂ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಜನರು ಮುಖಕ್ಕೆ ಮಾಸ್ಕ್‌ ತೊಡುವುದು, ಕೈಗಳಿಗೆ ಸ್ಯಾನಿಟೈಜ್‌ ಮಾಡುವುದು ಕಡಿಮೆಯಾಗಿದೆ. ಅಲ್ಲದೇ, ಮಾರುಕಟ್ಟೆ, ಅಂಗಡಿ, ಮಳಿಗೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರವಿಲ್ಲದೇ ಜನರು ಗುಂಪು ಸೇರುವುದು ಸಾಮಾನ್ಯವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು