ಗುರುವಾರ , ಆಗಸ್ಟ್ 11, 2022
26 °C

‘ಶಕ್ತಿಯೋಗ’ ಪರಾಂಗತೆ ಪಲ್ಲವಿ ವಯದಂಡೆ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಗುಮ್ಮಟ ನಗರಿ’ಯ ಪ್ರಸಿದ್ಧ ಯೋಗ ತರಬೇತುದಾರರಾದ ಪಲ್ಲವಿ ವಯದಂಡೆ ಅವರು ಶಕ್ತಿಯೋಗ, ಹಠಯೋಗ, ಧ್ಯಾನಯೋಗ ಮತ್ತು ಅಕ್ಷರ ಯೋಗವನ್ನು ಕರಗತ ಮಾಡಿಕೊಂಡಿದ್ದು, ಪ್ರತಿ ದಿನ ನೂರಾರು ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸರಳವಾಗಿ ಕಲಿಸುವ ಮೂಲಕ ಮನೆಮಾತಾಗಿದ್ದಾರೆ. 

ಮೂಲತಃ ನೆರೆಯ ಮಹಾರಾಷ್ಟ್ರದ ಫಂಡರಪುರದವರಾದ ಪಲ್ಲವಿ ಅವರು ಬಾಲ್ಯದಿಂದಲೇ ಯೋಗಾಭ್ಯಾಸದಲ್ಲಿ ಪರಿಣಿತರಾಗಿದ್ದಾರೆ. ಕ್ಲಾಸಿಕಲ್‌ ಡ್ಯಾನ್ಸರ್‌ ಆಗಿರುವ ಪಲ್ಲವಿ ಅವರು ಯೋಗದಲ್ಲಿ ಎಂ.ಎಸ್‌ಸಿ ಪದವೀಧರೆಯಾಗಿದ್ದಾರೆ.ಸೈನಿಕ ಶಾಲೆಯ ‘ಶಿಶುನಿಕೇತನ’ದಲ್ಲಿ ಒಂದಷ್ಟು ವರ್ಷ ನೃತ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿರುವ ಅವರು, ಸದ್ಯ ನಗರದ ಲಿಂಗದಗುಡಿ ರಸ್ತೆಯ ಫಾರೇಕ್‌ ಬಿಲ್ಡಿಂಗ್‌ನಲ್ಲಿ ‘ಸನ್‌ಸೈನ್‌ ಯೋಗ ಪ್ರೊಡಕ್ಷನ್‌’ ಎಂಬ ಯೋಗ ತರಬೇತಿ ಸಂಸ್ಥೆಯನ್ನು ತೆರೆದು ಯೋಗ ತರಬೇತಿ ನೀಡುತ್ತಿದ್ದಾರೆ.  ಜೊತೆಗೆ ಏರೋಬ್ರಿಕ್ಸ್‌, ಫಿಟ್‌ನೆಸ್‌ ಡ್ಯಾನ್ಸ್‌ ಕೂಡ ಹೇಳಿಕೊಡುತ್ತಿದ್ದಾರೆ. ಅಲ್ಲದೇ, ನಗರದಲ್ಲಿ ವಿಶೇಷ ಆರೋಗ್ಯ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.

ಶಕ್ತಿಯೋಗ, ಹಠಯೋಗದಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉಪಯೋಗ ಹೆಚ್ಚು. ಈ ಯೋಗ ವಿಧಾನಗಳಿಂದ ದೈಹಿಕ ನೋವುಗಳು ನಿವಾರಣೆಯಾಗುತ್ತವೆ. ಚಮ್ಮದ ಕಾಂತಿ ಹೆಚ್ಚುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಹೆಚ್ಚೆಚ್ಚು ಕೂದಲು ಬೆಳೆಯುತ್ತವೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ಪಲ್ಲವಿ.

ಶಕ್ತಿಯೋಗವನ್ನು 6 ರಿಂದ 70 ವರ್ಷದ ವರೆಗಿನವರೂ ಮಾಡಬಹುದು. ಇದರಿಂದ ದೈಹಿಕ, ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ. ಹೃದಯ ಶಕ್ತಿ ಹೆಚ್ಚುತ್ತದೆ. ಶಕ್ತಿಯೋಗ ಅಭ್ಯಾಸದಿಂದ ನಮ್ಮ ನೈಜ ವಯಸ್ಸಿಗಿಂತ ಐದು ವರ್ಷ ಚಿಕ್ಕವರಂತೆ ಕಾಣಬಹುದು. ದಿನಪೂರ್ತಿ ಕ್ರೀಯಾಶೀಲರಾಗಿರಬಹುದು ಎಂಬುದು ವಯದಂಡೆ ಅವರ ಅಭಿಪ್ರಾಯ.

ಕೋವಿಡ್‌ ಬಳಿಕ ಯೋಗದ ಮಹತ್ವದ ಬಗ್ಗೆ ಜನರಲ್ಲಿ ಆಸಕ್ತಿ ಅಧಿಕವಾಗಿದೆ. ಯೋಗ ಜೀವನದ ಒಂದು ಶೈಲಿಯಾಗಬೇಕು. ಊಟ, ನಿದ್ರೆಯಂತೆ ಯೋಗವೂ ಜೀವನದ ಒಂದು ಭಾಗವಾಗಬೇಕು ಎಂಬುದು ಪಲ್ಲವಿ ಅವರ ಪ್ರತಿಪಾದನೆ.  

‘ಭಾರತೀಯರಲ್ಲಿ ಯೋಗದ ಮಹತ್ವ, ಉಪಯೋಗದ ಬಗ್ಗೆ ಅರಿವು ಕಡಿಮೆ. ಕಾರಣ ನಮ್ಮಲ್ಲಿ ಯೋಗ ಹೇಳಿಕೊಡುವ ವಿಧಾನ ಕಠಿಣಗೊಳಿಸಲಾಗಿದೆ. ಹೀಗಾಗಿ ಮಕ್ಕಳು, ಯುವಜನರು ಕಲಿಯಲು ಆಸಕ್ತಿ ತೋರುವುದಿಲ್ಲ. ಅದೇ ವಿದೇಶಗಳಲ್ಲಿ ಯೋಗವನ್ನು ಬಹಳ ಸರಳವಾಗಿ ಅಂದರೆ, ಸಂಗೀತ ಮತ್ತು ನೃತ್ಯದ ಜೊತೆಗೆ ಹೇಳಿಕೊಡುವುದರಿಂದ ಹೆಚ್ಚು ಪ್ರಸಿದ್ಧಿಯಾಗುತ್ತಿದೆ’ ಎನ್ನುತ್ತಾರೆ ಅವರು.

‘ಸನ್‌ಸೈನ್‌ ಯೋಗ ಪ್ರೊಡಕ್ಷನ್‌’ನಲ್ಲಿ ಶಕ್ತಿಯೋಗ, ಹಠಯೋಗವನ್ನು ಕಲಿಸಿಕೊಡಲಾಗುವುದು. ಪ್ರತಿ ದಿನ ಬೆಳಿಗ್ಗೆ 6ರಿಂದ 7 ಹಾಗೂ 7ರಿಂದ 8ರ ವರೆಗೆ ಮಹಿಳೆಯರಿಗೆ ಹಾಗೂ ಸಂಜೆ 7.30ರಿಂದ 8.30ರ ವರಗೆ ಪುರುಷರಿಗೆ ಕಲಿಸಿಕೊಡಲಾಗುವುದು. ಮೂರು ತಿಂಗಳಿಂದ ಒಂದು ವರ್ಷದ ವರೆಗೆ ಹೇಳಿಕೊಡಲಾಗುವುದು. ಆಸಕ್ತರು ಪಲ್ಲವಿ ವಯದಂಡೆ ಅವರ ಮೊಬೈಲ್‌ ಸಂಖ್ಯೆ: 7022018105 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು