ಯಾದಗಿರಿ: ಮೀಸಲಾತಿ ನಿಗದಿ ಗೊಂದಲದಿಂದ ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ಆಡಳಿತವಿದ್ದು, ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.
ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಗುರುಮಠಕಲ್, ಕಕ್ಕೇರಾ, ಕೆಂಭಾವಿ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಿದೆ. ವಡಗೇರಾ ತಾಲ್ಲೂಕು ಕೇಂದ್ರವಾದರೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿದ್ದು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಈಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ನಗರಸಭೆಗಳಿಗೆ ಜಿಲ್ಲಾಧಿಕಾರಿ, ಪುರಸಭೆಗಳಿಗೆ ಉಪವಿಭಾಗಾಧಿಕಾರಿ, ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಆಡಳಿತ ಅಧಿಕಾರಿಯಾಗಿದ್ದಾರೆ.
ಯಾದಗಿರಿ ನಗರಸಭೆಗೆ ಏಪ್ರಿಲ್ 30 ರಿಂದ ಆಡಳಿತ ಅಧಿಕಾರಿ ನೇಮಕವಾಗಿದ್ದರೆ, ಶಹಾಪುರ ನಗರಸಭೆಗೆ ಕಳೆದ 5 ತಿಂಗಳಿಂದ ಆಡಳಿತ ಅಧಿಕಾರಿ, ಸುರಪುರ ನಗರಸಭೆಗೆ ಕಳೆದ ಮಾರ್ಚ್ 9 ರಿಂದ ಅಧ್ಯಕ್ಷ, ಉಪಾಧ್ಯಕ್ಷರಿಲ್ಲ. ಅಲ್ಲಿಂದ ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಗರಸಭೆಯ ಆಡಳಿತಾಧಿಕಾರಿ ಹೊಣೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರ ಮೇಲಿದೆ. ಆದರೆ, ಕಾರ್ಯಭಾರದ ಒತ್ತಡದಿಂದ ನಗರಸಭೆಯ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ನಗರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗೆ ಧ್ವನಿಯಾಗುತ್ತಿಲ್ಲ. ಕಡತಗಳಿಗೆ ಸಹಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಕೂಗು ನಗರದ ಜನತೆಯಿಂದ ಕೇಳಿ ಬರುತ್ತಲಿದೆ.
‘ಜಿಲ್ಲಾಧಿಕಾರಿ ಜಿಲ್ಲೆಯ ನಿರ್ವಹಣೆಯ ಗುರುತರ ಜವಾಬ್ದಾರಿ ಹೊಂದಿದ್ದು, ನಗರಸಭೆಯ ಹೆಚ್ಚುವರಿ ಹೊಣೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತಿದೆ’ ಎಂಬುದು ನಾಗರಿಕರ ಅಭಿಪ್ರಾಯ.
‘ನಗರಸಭೆ ಕಾರ್ಯಕಲಾಪಗಳು, ಸಾಮಾನ್ಯ ಸಭೆ, ಪ್ರಗತಿ ಪರಿಶೀಲನೆ, ಕಾಮಗಾರಿ, ಸ್ವಚ್ಛತಾ ಕಾರ್ಯ, ದೈನಂದಿನ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುತ್ತಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.
‘ಸುರಪುರ ನಗರಸಭೆಯಲ್ಲಿ 16 ಬಿಜೆಪಿ, 15 ಕಾಂಗ್ರೆಸ್ ಸದಸ್ಯರಿದ್ದಾರೆ. ಮೊದಲ ಅವಧಿಯೂ ವಿಳಂಬವಾಗಿ 30 ತಿಂಗಳು ಸುಜಾತ ಜೇವರ್ಗಿ ಅಧ್ಯಕ್ಷರಾಗಿದ್ದರು. ಮೀಸಲಾತಿ ವಿಳಂಬದಿಂದ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ತಡವಾಗುತ್ತಿದೆ. ಅಧ್ಯಕ್ಷರ ಆಯ್ಕೆ ಆದ ಮೇಲೆ ಅವರ ಅವಧಿ ಮುಂದಿನ 30 ತಿಂಗಳು ಇರುತ್ತದೆ‘ ಎನ್ನುತ್ತಾರೆ ಅಧಿಕಾರಿಗಳು.
‘ನಗರಸಭೆ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಆಡಳಿತಾಧಿಕಾರಿಗಳ ಸಹಿ ಬೇಕು. ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ನಮಗೆ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯರು.
ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನಗರಸಭೆ ಸದಸ್ಯರು ಅಧಿಕಾರ ಚಲಾಯಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೈರ್ಮಲ್ಯ, ಬೀದಿದೀಪದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬುದು ನಾಗರಿಕರ ಬೇಸರ.
ಯಾದಗಿರಿ ನಗರಸಭೆಗೆ ಶೀಘ್ರ ಕಾಯಂ ಪೌರಾಯುಕ್ತರು ನೇಮಕವಾದರೆ ಕಡತಗಳು ವಿಲೇವಾರಿ ಆಗಲಿವೆ. ಪ್ರಭಾರಿ ಪೌರಾಯುಕ್ತರಿಗೂ ಕಡತಗಳನ್ನು ವಿಲೇವಾರಿ ಮಾಡಲು ಸೂವಿಸಿದ್ದೇನೆ. ಡಿಯುಡಿಸಿಯವರಿಗೆ ಮೇಲ್ವಿಚಾರಣೆ ಮಾಡಲು ಹೇಳಿದ್ದೇನೆ. ಮೂಲಸೌಕರ್ಯ ಕಲ್ಪಿಸಲು ಬದ್ದರಾಗಿದ್ದೇವೆ- ಡಾ. ಸುಶೀಲಾ ಬಿ. ಜಿಲ್ಲಾಧಿಕಾರಿ
ಯಾದಗಿರಿ ನಗರಸಭೆಯಲ್ಲಿ ಪ್ರಭಾರಿ ಪೌರಾಯುಕ್ತರು ಕೇವಲ ₹5 ಸಾವಿರ ಕಾಮಗಾರಿಗೂ ಸಹಿ ಮಾಡುತ್ತಿಲ್ಲ. ಇದರಿಂದ ವಾರ್ಡ್‌ಗಳಲ್ಲಿ ಸಣ್ಣಪುಟ್ಟ ಕಾಮಗಾರಿಗೂ ಪರದಾಡುವಂತೆ ಆಗಿದೆ. ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ- ಸುರೇಶ ಅಂಬಿಗೇರ, ಯಾದಗಿರಿ ನಗರಸಭೆ ಸದಸ್ಯ
ಸರ್ಕಾರ ಶೀಘ್ರದಲ್ಲಿ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಅನುಮತಿ ಮಾಡಿಕೊಡಬೇಕು. ಇದರಿಂದ ನಗರಸಭೆ ಸುಲಲಿತ ಆಡಳಿತ ಸಾಧ್ಯವಾಗುತ್ತದೆ- ವೇಣುಮಾಧವ ನಾಯಕ, ಸುರಪುರ ನಗರಸಭೆ ಸದಸ್ಯ
ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಕಳೆದ 6 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಅನುದಾನದ ಹಂಚಿಕೆ ಆಗುತ್ತಿಲ್ಲ. ಕಾಮಗಾರಿಗಳ ಅನುಮೋದನೆ ವಿಳಂಬವಾಗುತ್ತಿದೆ. ಜನರಿಗೆ ನಾವು ಮುಖ ತೋರಿಸದಂತಾಗಿದೆ.- ರಾಜಾ ಪಿಡ್ಡನಾಯಕತಾತಾ, ಸುರಪುರ ನಗರಸಭೆ ಸದಸ್ಯ
ನಗರಸಭೆ ವ್ಯಾಪ್ತಿಯ ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. ತೆರಿಗೆ ವಸೂಲಿ ಮಾಡಲು ಸಿಬ್ಬಂದಿ ತಮ್ಮ ಕೈ ಕೆಳಗೆ ಯಾರನ್ನು ನೇಮಿಸಿಕೊಂಡಿಲ್ಲ. ನಗರಸಭೆಯ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ- ರಮೇಶ ಬಡಿಗೇರ ಶಹಾಪುರ ಪೌರಾಯುಕ್ತ
ಪುರಸಭೆ ಸದಸ್ಯರಾದರೂ ನಮ್ಮ ವಾರ್ಡ್‌ನಲ್ಲಿ ಕೆಲಸಗಳಾಗುತ್ತಿಲ್ಲ. ಸಾರ್ವಜನಿಕರಿಗೆ ಏನೂ ಹೇಳಲಾರದ ಪರಿಸ್ಥಿತಿ ಒದಗಿದೆ. ಅಭಿವೃದ್ಧಿ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಸದಸ್ಯರಿಗೆ ಗೊತ್ತಿಲ್ಲದಂತೆ ಅನೇಕ ಕೆಲಸಗಳಾಗುತ್ತಿದ್ದು ಇದರ ಬಗ್ಗೆ ತನಿಖೆಯಾಗಬೇಕು- ಪರಶುರಾಮ ಗೋವಿಂದರ್, ಕಕ್ಕೇರಾ ಪುರಸಭೆ ಸದಸ್ಯ
ಕೆಂಭಾವಿ ಪುರಸಭೆ ಸದಸ್ಯರ ಚುನಾವಣೆ ನಡೆದು ಸದಸ್ಯರಾಗಿ ಆಯ್ಕೆಯಾದರೂ ಯಾವುದೇ ಅಧಿಕಾರ ಇಲ್ಲದ ಕಾರಣ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತದೆ. ಅಧಿಕಾರಿಗಳು ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಹೊಸ ಕಾಮಗಾರಿಗಳು ಅನುಷ್ಠಾನ ಗೊಳಿಸಲು ಸಾಧ್ಯವಾಗುತ್ತಿಲ್ಲ.- ರವಿ ಸೊನ್ನದ ಕೆಂಭಾವಿ ಪುರಸಭೆ ಸದಸ್ಯ
Cut-off box - ಒಮ್ಮೆ ಮಾತ್ರ ಆಡಳಿತಾಧಿಕಾರಿ ಸಭೆ ಗುರುಮಠಕಲ್: ಇಲ್ಲಿನ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮೇ ತಿಂಗಳಲ್ಲಿ ಕೊನೆಗೊಂಡಿದ್ದು ಈವರೆಗೆ ಒಮ್ಮೆ ಮಾತ್ರ ಪುರಸಭೆ ಆಡಳಿತಾಧಿಕಾರಿ ಸಭೆ ನಡೆಸಿದ್ದಾರೆ. ಸದ್ಯ ಯಾದಗಿರಿ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಇಲ್ಲಿನ ಪುರಸಭೆ ಆಡಳಿತಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ. ಈ ಹಿಂದಿನ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಒಂದು ಬಾರಿ ಅಭಿವೃದ್ಧಿ ವಿಷಯ ಸೇರಿ ವಿವಿಧ ವಿಷಯಗಳಿಗೆ ಪೂರಕವಾಗಿ ಸಭೆ ನಡೆಸಿದ್ದರು. ನಂತರ ಅವರ ವರ್ಗವಾಗಿದ್ದು ಅವರ ಸ್ಥಳಕ್ಕೆ ಹೊಸ ಉಪವಿಭಾಗಾಧಿಕಾರಿ ಸಜ್ಜನ್ ನಿಯುಕ್ತರಾದ ನಂತರ ಒನ್ನೂ ಸಭೆ ನಡೆಸಿಲ್ಲ. ‘ಯಾದಗಿರಿ ಜಿಲ್ಲೆಯ ಎಲ್ಲಾ ಪುರಸಭೆಗಳ ಆಡಳಿತಾಧಿಕಾರಿ ಜತೆಗೆ ಯಾದಗಿರಿ ನಗರಸಭೆ ಹೆಚ್ಚುವರಿ ಕಾರ್ಯದೋತ್ತಡದ ಕಾರಣ ಅವರು ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಪುರಸಭೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಯ ಸದಸ್ಯರು
ಯಾದಗಿರಿ ನಗರಸಭೆ ವಾರ್ಡ್‌ಗಳು;31
ಶಹಾಪುರ ನಗರಸಭೆ ವರ್ಡ್‌ಗಳು; 31
ಸುರಪುರ ನಗರಸಭೆ ವಾರ್ಡ್‌ಗಳು; 31
ಗುರುಮಠಕಲ್ ಪುರಸಭೆ ವಾರ್ಡ್‌ಗಳು;23
ಕಕ್ಕೇರಾ ಪುರಸಭೆ ವಾರ್ಡ್‌ಗಳು;23
ಕೆಂಭಾವಿ ಪುರಸಭೆ ವಾರ್ಡ್‌ಗಳು;23
ಪೂರಕ ಮಾಹಿತಿ: ಅಶೋಕ ಸಾವವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ ಅಶೋಕ ಸಾವವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.