ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ದರಕ್ಕೆ ಮಾಸ್ಕ್ ಮಾರಾಟ ಮಾಡಿದರೆ ಕ್ರಮ

ಕೊರೊನಾ ತಡೆಗೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆ
Last Updated 23 ಮಾರ್ಚ್ 2020, 17:18 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸರ್ಜಿಕಲ್ 3 ಲೇಯರ್ ಮಾಸ್ಕ್‌ಗಳನ್ನು ₹10 ರೂಪಾಯಿಗಿಂತ ಮತ್ತು 2 ಲೇಯರ್ ಮಾಸ್ಕ್‌ಗಳನ್ನು ₹8 ರೂಪಾಯಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

200 ಎಂ.ಎಲ್ ಸ್ಯಾನಿಟೈಸರ್ ಅನ್ನು ₹100ಗೆ ಮಾರಾಟ ಮಾಡಬೇಕು. ಅಗತ್ಯ ವಸ್ತುಗಳ ಹೊರತುಪಡಿಸಿ ಇತರೆ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಆದೇಶಿಸಲಾಗಿದೆ. ಅದೇ ರೀತಿ ಜ್ಯೂಸ್ ಅಂಗಡಿ, ಐಸ್‍ಕ್ರೀಮ್ ಅಂಗಡಿ ಮತ್ತು ಚಹಾ ಅಂಗಡಿಗಳನ್ನು ಕೂಡ ಬಂದ್ ಮಾಡಿಸುವಂತೆ ಸೂಚಿಸಿದ ಅವರು, ಕೊರೊನಾ ವೈರಸ್ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ 31ರವರೆಗೆ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಕೈಗೊಳ್ಳಲು ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಅದರಂತೆ ಸಾರ್ವಜನಿಕರು ನಡೆದುಕೊಳ್ಳಬೇಕು ಎಂದು ಹೇಳಿದರು.

ಇನ್ನು ವಿದೇಶಗಳಿಂದ ಬಂದು ಹೋಮ್ ಐಸೊಲೇಷನ್‍ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮನೆಬಿಟ್ಟು ಹೊರಬರುವಂತಿಲ್ಲ. ಸಾರ್ವಜನಿಕರು ಕೂಡ ಅನವಶ್ಯಕವಾಗಿ ಮನೆಯಿಂದ ಹೊರಬರುವುದು ಅಥವಾ ಗುಂಪುಗುಂಪಾಗಿ ಸೇರುವುದು ಮಾಡಬಾರದು. ಅಗತ್ಯ ವಸ್ತುಗಳ ಖರೀದಿಗಷ್ಟೇ ಯಾರಾದರು ಒಬ್ಬರು ಹೊರಬಂದರೆ ಸಾಕು. ಈ ಕುರಿತು ಡಂಗೂರ ಸಾರಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನವಣೆ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT