ಶನಿವಾರ, ಜುಲೈ 31, 2021
25 °C
ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ

ಆಶಾ ಕಾರ್ಯಕರ್ತೆಯರ ಸೇವೆ ಜು.10 ರಿಂದ ಸ್ಥಗಿತ: ಸಂಘದ ಅಧ್ಯಕ್ಷ ಸೋಮಶೇಖರ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹಲವು ಬಾರಿ ಮನವಿ ನೀಡಿದರೂ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿರುವುದರಿಂದ ಜುಲೈ 10ರಿಂದ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ತಿಳಿಸಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 30ರಿಂದ ಆರಂಭಿಸಿ ಒಂದು ವಾರ ನಿರಂತರವಾಗಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಮನವಿ ಪತ್ರಗಳನ್ನು ನೀಡಲಾಗಿದೆ. ಈ ವರ್ಷಾರಂಭದಿಂದ ಇಲ್ಲಿಯವರೆಗೆ ಸರ್ಕಾರಕ್ಕೆ ಒಟ್ಟು 10 ಬಾರಿ ಮನವಿ ಪತ್ರಗಳನ್ನು ನೀಡಿದ್ದೇವೆ ಎಂದರು.

ಕೊರೊನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ನೀಡಿದ ಸೇವೆಯನ್ನು ಕೇಂದ್ರ ಆರೋಗ್ಯ ಇಲಾಖೆಯು ಶ್ಲಾಘಿಸಿದೆ. ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ವಿವಿಧ ರಾಜ್ಯಗಿಂದ ಹಿಂದಿರುಗಿದ ವಲಸಿಗರನ್ನು ಸ್ಕ್ರೀನಿಂಗ್ ಮಾಡಿಸುವುದು, ಆರೋಗ್ಯದ ಕುರಿತು ನಿರಂತರ ಮಾಹಿತಿ ಸಂಗ್ರಹಿಸುವುದು ಮಾಡಿದ್ದಾರೆ ಎಂದು ಹೇಳಿದರು.

ಆದರೆ, ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ವೇತನವಿಲ್ಲದೆ, ಸಾಫ್ಟ್‌ವೇರ್ ಸಮಸ್ಯೆಗಳು ಹೀಗೆ ಹಲವು ಸಮಸ್ಯೆಗಳಿಂದ ಹೈರಾಣಾಗಿದ್ದು, ಅವರ ಗೌರವಧನವನ್ನು ₹ 12 ಸಾವಿರಕ್ಕೆ ಹೆಚ್ಚಿಸಿ ತಕ್ಷಣ ಬಿಡುಗಡೆ ಮಾಡುವಂತೆ ಬೇಡಿಕೆಯಿಟ್ಟಿದ್ದೇವೆ. ಸರ್ಕಾರವು ಇದನ್ನು ಪರಿಗಣಿಸುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದ್ದು ರಾಜ್ಯಾದ್ಯಂತ ಎಲ್ಲಾ ಕಾರ್ಯಕರ್ತೆರು ಸಂಘದೊಡನೆ ನಿಂತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು