ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ಶಿವನ ಆರಾಧನೆಯೇ ಅತಿರುದ್ರ ಯಾಗ’

ಅಬ್ಬೆತುಮಕೂರಿನಲ್ಲಿ ಅತಿರುದ್ರ ಯಾಗಕ್ಕೆ ಚಾಲನೆ, 108 ದಂಪತಿ ಋತ್ವಿಜರ ಪೌರೋಹಿತ್ಯ
Last Updated 26 ಮಾರ್ಚ್ 2023, 7:06 IST
ಅಕ್ಷರ ಗಾತ್ರ

ಯಾದಗಿರಿ: ಶಿವನನ್ನು ಸಾಂಪ್ರದಾಯಿಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ- ಬ್ರಹ್ಮಾಂಡದ ಪ್ರತಿರೂಪ ಹೋಲುತ್ತದೆ. ಅಭಿಷೇಕ ಶಿವನ ಹೃದಯಕ್ಕೆ ಪ್ರಿಯವಾದ ಆಚರಣೆಯಾಗಿದೆ. ಶಿವನ ಆರಾಧನೆಯೇ ಅತಿರುದ್ರ ಯಾಗವೆಂದು ಕಾಶಿ ನೂತನ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಅಬ್ಬೆತುಮಕೂರಿನಲ್ಲಿ ಶನಿವಾರ ಅತಿರುದ್ರ ಯಾಗಕ್ಕೆ ಚಾಲನೆ ನೀಡಿ ಮಾತನಾಡಿ, ಅತಿ ರುದ್ರಂ 14641 ರುದ್ರಂಗಳನ್ನು ಒಳಗೊಂಡಿದೆ. ಕೃಷ್ಣ ಯಜುರ್ವೇದ ಸಂಹಿತೆಯ 4ನೇ ಕಾಂಡದ 5ನೇ ಪ್ರಪಾತದಲ್ಲಿ ರುದ್ರಾಧ್ಯಾಯದಲ್ಲಿ ನೀಡಲಾದ ನಮಕಂ ಮತ್ತು ಚಮಕಂಗಳ ಸಂಯೋಜನೆಯಾಗಿದೆ ರುದ್ರಂ. ನಮಕಂವನ್ನು ಒಮ್ಮೆ ಪಠಿಸುವುದರೆ ಜೊತೆಗೆ ಚಮಕವನ್ನು ಒಮ್ಮೆ ಪಠಿಸಿದರೆ ಅದು ಒಂದು ರುದ್ರವಾಗಿರುತ್ತದೆ ಎಂದರು.

ಈ ಮಹಾ ಯಾಗವನ್ನು ಲೋಕ ಕಲ್ಯಾಣಕ್ಕಾಗಿ ಮತ್ತು ಸಮಸ್ತ ಮನುಕುಲದ ಒಳಿತಿಗಾಗಿ ಹಾಗೂ ಶಾಂತಿ ಮತ್ತು ಸಮೃದ್ಧಿಗಾಗಿ ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಇಂತಹ ಭವ್ಯವಾದ ಆಚರಣೆಯನ್ನು ನಿಸ್ವಾರ್ಥವಾಗಿ ನಡೆಸುತ್ತಿರುವುದು ಇಲ್ಲಿನ ಭಕ್ತರ ಸೌಭಾಗ್ಯವೇ ಸರಿ ಎಂದರು.

ಇದಕ್ಕೂ ಮುನ್ನ ಕಾಶಿ ನೂತನ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಯಾಗ ಮಂಟಪವನ್ನು ಪ್ರವೇಶ ಮಾಡುವುದರೊಂದಿಗೆ ಅತಿರುದ್ರ ಯಾಗಕ್ಕೆ ಚಾಲನೆ ದೊರೆಯಿತು.

ಯಾಗ ಮಂಟಪದಲ್ಲಿ ಕಾಶಿ ನೂತನ ಜಗದ್ಗುರುಗಳ ಪಾದ ಪೂಜೆಯನ್ನು ನೆರವೇರಿಸುವುದರೊಂದಿಗೆ ಅತಿರುದ್ರ ಯಾಗವನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು.

ಶ್ರೀ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಪ್ರಧಾನ ಯಾಗ ಕುಂಡದ ಮುಂದೆ ಸಂಕಲ್ಪ ಮಾಡಿದರು. ಋತ್ವಿಜರಲ್ಲಿ ಪ್ರಮುಖರಾದ ಗವ್ವ ಮಠಮಂ ವಿಶ್ವನಾಥ ಶಾಸ್ತ್ರೀಗಳು ದೇವಿ ಪ್ರಾರ್ಥನೆ ನೆರೆವೇರಿಸಿದರು.

ಯಾಗದ ಪೌರೋಹಿತ್ಯ ವಹಿಸಿದ ಸುಮಾರು 200 ಜನ ಋತ್ವಿಜರಿಂದ ವೇದ ಪಾರಾಯಣವನ್ನು ಮಾಡಿಸಲಾಯಿತು. ತರುವಾಯ ಸಂಗೀತದೊಂದಿಗೆ ರುದ್ರನಿಗೆ ರಾಜೋಪಚಾರವನ್ನು ಮಾಡಲಾಯಿತು. ನಂತರ ಅಗ್ನಿ ಅಂಕುರವಾಗುತ್ತಲೇ ಅತಿರುದ್ರ ಯಾಗ ಆರಂಭ ಮಾಡಲಾಯಿತು.

ಪ್ರಧಾನ ಯಾಗ ಕುಂಡದ ಮುಂದೆ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ಕಿರಿಯ ಸ್ವಾಮೀಜಿ ಶಿವಶೇಖರ ಸ್ವಾಮಿಗಳು ಅತಿರುದ್ರ ಯಾಗದಲ್ಲಿ ಪಾಲ್ಗೊಂಡರು. ಗವ್ವ ಮಠಮಂ ವಿಶ್ವನಾಥ ಶಾಸ್ತ್ರಿಗಳು ಅತಿರುದ್ರ ಯಾಗವನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.

108 ಯಾಗ ಕುಂಡಗಳ ಮುಂದೆ 108 ದಂಪತಿ ಋತ್ವಿಜರ ಪೌರೋಹಿತ್ಯದ ಮಾರ್ಗದರ್ಶನದಂತೆ ಅತಿರುದ್ರ ಯಾಗದ ಪೂಜೆಯಲ್ಲಿ ಪಾಲ್ಗೊಂಡರು.

ನಿರಂತರ 3 ಗಂಟೆಗಳ ಕಾಲ ನಡೆದ ಅತಿರುದ್ರ ಯಾಗದ ಭಕ್ತಿಯ ದೃಶ್ಯಗಳನ್ನು ಯಾಗ ಮಂಟಪದ ಮುಂದೆ ಅಳವಡಿಸಲಾದ ಎಲ್.ಇ.ಡಿ ಪರದೆಗಳಲ್ಲಿ ಸಹಸ್ರಾರು ಭಕ್ತರು ಕಣ್ತುಂಬಿಸಿಕೊಂಡು ಪುಳಕಿತರಾದರು.

ಅತಿರುದ್ರ ಯಾಗದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಾನವಿಯ ಕಲ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಯಚೂರಿನ ಸೋಮವಾರಪೇಟೆಯ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ದಂಡಗುಂಡ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಸಗರದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT