ಶನಿವಾರ, ಏಪ್ರಿಲ್ 4, 2020
19 °C
ಸರಸ್ವತಿ ಮೂರ್ತಿ, ಕೈತೋಟ, ಅತ್ಯುತ್ತಮ ಪರಿಸರ

ಕಕ್ಕೇರಾ: ‘ಹಸಿರು ಶಾಲೆ’ಗೆ ಪ್ರಶಸ್ತಿಯ ಗರಿಮೆ

ಮಹಾಂತೇಶ ಸಿ. ಹೊಗರಿ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಸಾರ್ವಜನಿಕರು ಹಾಗೂ ಮುಖ್ಯ ಗುರುಗಳು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಬೆಳೆಯಬಲ್ಲವು ಎಂಬುವುದಕ್ಕೆ ಪಟ್ಟಣದ ಸಮೀಪದ ಏದಲಭಾವಿ ಗ್ರಾಮದ ಶಾಲೆಯೇ ಉದಾಹರಣೆ.

‘ನಮ್ಮ ಶಾಲೆಯು ಎಲ್ಲ ಶಾಲೆಯಂತೆ ಇರಬಾರದು ಎಂದು ನಿರ್ಧಾರ ಮಾಡಿದೆ. ಮಕ್ಕಳು ಹಾಗೂ ಊರಿನ ನಾಗರಿಕರ ಶ್ರಮದಿಂದ ಉತ್ತಮ ಶಾಲೆಯಾಗಿ ಮಾರ್ಪಟ್ಟಿತು. ಶಾಲೆಗೆ ಅನೇಕ ಪ್ರಶಸ್ತಿಗಳು ಬರುತ್ತಿರುವುದು ಸಂತಸವಿದೆ’ ಎಂಬುದು ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಹುಣಸಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ದುಂಡಪ್ಪ ಕೋಲಕಾರ ಅವರ ಮನದಾಳದ ಮಾತು.

ಶಾಲೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದೆ. ಶಾಲೆಗೆ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಸಜ್ಜಿತವಾದ 11 ಕೊಠಡಿಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರನಾಯಕರ ಭಾವಚಿತ್ರ, ರಾಷ್ಟ್ರ ಪ್ರಾಣಿ, ಪಕ್ಷಿ ಚಿತ್ರಗಳನ್ನು ಚಿತ್ರಿಸಲಾಗಿದೆ. ಹಾಗೆಯೇ ಹಸಿರು ಹುಲ್ಲು ಹಾಸಿನಲ್ಲಿ ಕರ್ನಾಟಕದ, ಭಾರತದ ನಕ್ಷೆ ರೂಪಿಸಿರುವುದು ಗಮನ ಸೆಳೆಯುತ್ತದೆ.

2014-15 ನೇ ಸಾಲಿನಲ್ಲಿ ಹಸಿರು ಶಾಲೆ ಜಿಲ್ಲಾ ಪ್ರಶಸ್ತಿ ಲಭಿಸಿದೆ. 1 ರಿಂದ 8 ನೇ ತರಗತಿ ಹೊಂದಿದ್ದು 3 ಜನ ಕಾಯಂ ಶಿಕ್ಷಕರು ಹಾಗೂ ಮೂವರು ಅತಿಥಿ ಶಿಕ್ಷಕರು ಇದ್ದಾರೆ. ಇಂಗ್ಲಿಷ್‌ ಹಾಗೂ ಹಿಂದಿ ಸೇರಿ ಇಬ್ಬರು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈ ಎರಡು ವಿಷಯಗಳ ಮೇಲೆ ವಿದ್ಯಾರ್ಥಿಗಳ ಹಿಡಿತ ಸಾಧಿಸಲು ಶಿಕ್ಷಕರನ್ನು ನೇಮಿಸುವುದು ಅವಶ್ಯ ಎಂದು ಗ್ರಾಮಸ್ಥರಾದ ಅಮರೇಶ ಹಡಪದ ಹೇಳುತ್ತಾರೆ.

ಮಕ್ಕಳಿಗಾಗಿ ಕೈತೋಟ ನಿರ್ಮಿಸಿ ತರಕಾರಿಗಳನ್ನು ಬೆಳೆಯಲಾಗಿದೆ. ಶಾಲೆಯ ಆವರಣದೊಳಗೆ ತೆಂಗು, ಅಶೋಕ ಮರ ಹಾಗೂ ಗಾರ್ಡನ್‌ ನಿರ್ಮಿಸಿ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. 

ಬಿಸಿಯೂಟ ತಯಾರಿಸಲು ಉತ್ತಮ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೌಚಾಲಯ ನಿರ್ಮಿಸಿ ಸ್ವಚ್ಛತೆ ಕಾಪಾಡಿಕೊಂಡು ಬರಲಾಗಿದೆ.

ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಇದೆ. ಇನ್ನೂ ಹೆಚ್ಚಿನ ಶಿಕ್ಷಣ ನೀಡುವುದಕ್ಕಾಗಿ ಎಲ್‌ಸಿಡಿ ಪ್ರೊಜೆಕ್ಟರ್‌ ಇದ್ದು ಬಹು ವಿಷಯ ಆಧಾರಿತ ಸಿ.ಡಿಗಳ ಮುಖಾಂತರ ವಿದ್ಯಾರ್ಥಿಗಳಿಗೆ ಪಠ್ಯೇತರ ಬೋಧನೆ ನಡೆಸಿಕೊಂಡು ಬರಲಾಗುತ್ತದೆ.

ಒಟ್ಟು 217 ವಿದ್ಯಾರ್ಥಿಗಳು ದಾಖಲಾತಿ ಇದೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಡೊಳ್ಳು ಕುಣಿತ, ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಶಿಕ್ಷಕ ಬಸವರಾಜ ನೀಲಗಾರ ಹೇಳಿದರು.

*
ಈ ಹಿಂದೆ ಇದ್ದ ಮುಖ್ಯ ಗುರು ದುಂಡಪ್ಪ ಕೋಲಕಾರ ಹಾಗೂ ಮುರಗೇಂದ್ರಸ್ವಾಮಿ ಶ್ರಮದಿಂದ ನಮ್ಮ ಶಾಲೆ ಈ ಉನ್ನತ ಮಟ್ಟಕ್ಕೆ ಏರಿದೆ. ಆಟ- ಪಾಠದಲ್ಲಿ ಅವರು ಹಾಕಿದ ಅಡಿಪಾಯ, ಭದ್ರ ಬುನಾದಿಯಾಗಿ ಗಮನ ಸೆಳೆಯುತ್ತಿದೆ
-ಹಣಮಂತ ಬಾಚಾಳ, ಕರವೇ ಹೋಬಳಿ ಘಟಕ ಅಧ್ಯಕ್ಷ

*
ಗ್ರಾಮಸ್ಥರ ಸಹಕಾರದಿಂದ ಶಾಲೆಯ ಪರಿಸರವೇ ಮಕ್ಕಳಿಗೆ ಹೆಚ್ಚಿನ ಜ್ಞಾನ ತಂದು ಕೊಡುವಂತಿದೆ.
-ಸಂಗಪ್ಪ ವಿಶ್ವಕರ್ಮ, ಮುಖ್ಯ ಶಿಕ್ಷಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು