ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಮಸ್ಯೆಗಳ ಆಗರವಾದ ಬಾಲಛೇಡ ಸರ್ಕಾರಿ ಶಾಲೆ

ಮಲ್ಲಿಕಾರ್ಜುನ ಅರಕೇರಕರ್‌
Published 29 ನವೆಂಬರ್ 2023, 4:53 IST
Last Updated 29 ನವೆಂಬರ್ 2023, 4:53 IST
ಅಕ್ಷರ ಗಾತ್ರ

ಬಾಲಛೇಡ (ಸೈದಾಪುರ): ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿರುವ ಬಾಲಛೇಡ ಗ್ರಾಮದ ಸರ್ಕಾರಿ ಶಾಲೆಯ ಸ್ಥಿತಿ ಕಂಡರೂ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಕಾಯಕಲ್ಪಕ್ಕೆ ಮುಂದಾಗದಿರುವುದು ವಿಚಿತ್ರವೇ ಸರಿ.

ಈ ಹಿರಿಯ ಪ್ರಾಥಮಿಕ ಶಾಲೆಯು ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ತಡೆಗೋಡೆ, ತರಗತಿ ಕೋಣೆಗಳು, ಚರಂಡಿ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿವೆ.

293 ಮಕ್ಕಳಿಗೆ 2 ಶೌಚಾಲಯ: ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ 150 ಬಾಲಕರು, 143 ಬಾಲಕಿಯರು ಸೇರಿದಂತೆ ಒಟ್ಟು 293 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಕೇವಲ 2 ಶೌಚಾಲಯಗಳಿವೆ.

ಶಿಥಿಲಾವಸ್ಥೆ ತಲುಪಿದ ತರಗತಿ ಕೋಣೆಗಳು: ಈ ಶಾಲೆಯಲ್ಲಿ ಪ್ರಮುಖವಾಗಿ ಮಕ್ಕಳ ದಾಖಲಾತಿ-ಹಾಜರಾತಿಗೆ ಅನುಗುಣವಾಗಿ ತರಗತಿ ಕೋಣೆಗಳಿಲ್ಲ. 20 ವರ್ಷಗಳ ಹಿಂದೆ ನಿರ್ಮಿಸಿದ 3 ಕೊಠಡಿಗಳು, ಪಕ್ಕದಲ್ಲಿರುವ ಒಂದು ಅಂಗನವಾಡಿ ಕೇಂದ್ರದ ಒಂದು ಕೋಣೆಯಲ್ಲಿ ಪಾಠಪ್ರವಚನಗಳು ನಡೆಯುತ್ತವೆ. ಕೆಲ ತರಗತಿಯ ಮಕ್ಕಳು ಕೋಣೆಗಳಲ್ಲಿ, ಕೆಲ ತರಗತಿ ಮಕ್ಕಳು ಶಾಲಾ ಮುಂಭಾಗದಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಮಳೆಗಾಲದಲ್ಲಿ ಕೋಣೆಗಳು ಸೋರುತ್ತವೆ. ಇದರಿಂದ ಕೋಣೆಗಳ ಮೇಲ್ಛಾವಣಿ ಶಿಥಿಲಾವಸ್ಥೆಗೊಂಡಿದ್ದು ಛಾವಣಿಯ ಸಿಮೆಂಟ್ ಉದುರಿ, ಕಬ್ಬಿಣದ ಕಂಬಿಗಳು ಹೊರಗಡೆ ಕಾಣುತ್ತಿವೆ. ಹೆಚ್ಚು ಮಳೆ ಬಂದರೆ ಕೆಲವೊಮ್ಮೆ ಶಾಲೆಗೆ ರಜೆ ನೀಡಬೇಕಾಗುತ್ತದೆ. ಮಕ್ಕಳಿಗನುಗುಣವಾಗಿ ಕೋಣೆಗಳು ಇಲ್ಲದಿರುವುದರಿಂದ ಕಲಿಕೆಗೆ ಮತ್ತು ಶಿಕ್ಷಕರ ಬೋಧನೆಗೆ ಸಮಸ್ಯೆಯಾಗುತ್ತಿದೆ.

ಶಾಲಾ ಮೈದಾನದಲ್ಲಿ ಗ್ರಾಮದ ಕೊಳಚೆ ನೀರು: ಶಾಲೆಗೆ ತಡೆಗೋಡೆ ಇಲ್ಲದಿರುವುದರಿಂದ ಗ್ರಾಮದ ಅಕ್ಕಪಕ್ಕದ ಮನೆಗಳ ಕೊಳಚೆ ನೀರು ಶಾಲಾವರಣದೊಳಗೆ ಬಂದು ಸೇರುತ್ತಿದೆ. ಶಾಲೆಗೆ ತಡೆಗೋಡೆ ಇಲ್ಲದಿರುವುದರಿಂದ ಹಂದಿ, ಕೊಳಿ, ನಾಯಿಗಳು ಓಡಾಟವು ಹೆಚ್ಚಾಗಿದೆ. ಇದರಿಂದ ಮಕ್ಕಳು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗುತ್ತಿಲ್ಲ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಬರುವಾಗ ಮನೆಯಿಂದಲೇ ಬಾಟಲಿಗಳಲ್ಲಿ ತುಂಬಿಕೊಂಡು ಬರಬೇಕು. ಅವು ಖಾಲಿಯಾದರೆ ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಮನೆಗೆ ತೆರಳಿ ತುಂಬಿಕೊಂಡು ಬರಬೇಕು.
ಈ ಗ್ರಾಮವು ಒಟ್ಟು 6 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಸದಸ್ಯರು ಮನಸ್ಸು ಮಾಡಿದರೆ ಈ ಶಾಲೆಯ ಬಹುತೇಕ ಸಮಸ್ಯೆಗಳನ್ನು ಪಂಚಾಯಿತಿಯಲ್ಲಿರುವ ನರೇಗಾ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ಶಾಲಾಭಿವೃದ್ಧಿಯನ್ನು ಮಾಡಬಹುದು. ಆದರೆ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ನಡುವೆ ಸಹಕಾರದ ಕೊರತೆ ಎದ್ದು ಕಾಣುತ್ತದೆ. ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಇಲ್ಲಿನ ಸಮಸ್ಯೆಯ ಬಗ್ಗೆ ಗಮನ ಹರಿಸದೇ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಶಾಲಾ ಮೇಲುಸ್ತುವಾರಿ ಸಮಿತಿಯು ರಚನೆಯಾಗದೇ ಇರುವುದರಿಂದ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ.

ಆಟದ ಮೈದಾನವೇ ಇಲ್ಲ. ಶಾಲೆಗೆ ರಸ್ತೆಯೇ  ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇರುವ ಚಿಕ್ಕ ದಾರಿಯ ಮದ್ಯದಲ್ಲಿ ಸದಾ ಚರಂಡಿಯ ನೀರು ಹರಿಯುತ್ತಿರುತ್ತದೆ. ಇದರಿಂದ ಶಾಲೆಗೆ ಬರುವವರು ಕೆಸರನಲ್ಲಿ ದಾಟಿಕೊಂಡು ಬರುವಂತಾಗಿದೆ. ಶಾಲೆಗೆ ತಿಂಗಳಿಗೊಮ್ಮೆ ಬರುವ ಪಡಿತರವನ್ನು ಬಿಸಿಯೂಟದ ಕೋಣೆಗೆ ಮುಖ್ಯರಸ್ತೆಯಿಂದ ಹೊತ್ತುಕೊಂಡು ಬಂದು ಹಾಕಲು ಕೂಲಿ ಆಳುಗಳು ಬೇಸರ ವ್ಯಕ್ತಪಡಿಸುತ್ತಾರೆ.

ಮಕ್ಕಳ ಅಭ್ಯಾಸಕ್ಕೆ ತರಗತಿ ಕೋಣೆಗಳ ಅವಶ್ಯಕತೆ ಇರುವುದರಿಂದ ಹೊಸದಾಗಿ 2 ಕೋಣೆಗಳು ನಿರ್ಮಾಣ ಹಂತದಲ್ಲಿವೆ. ಇದರ ಜೊತೆಗೆ ಇನ್ನು 2 ಕೋಣೆಗಳು ಆಗಬೇಕು. ಜೊತೆಗೆ ಮುಖ್ಯ ರಸ್ತೆಯಿಂದ ಶಾಲೆಯವರೆಗೆ ರಸ್ತೆಯಾದರೆ ಉತ್ತಮವಾಗುತ್ತದೆ. ವಿಶೇಷವಾಗಿ ಗ್ರಾಮಸ್ಥರ ಸಹಕಾರ ಇಲ್ಲದಿರುವುದರಿಂದ ಶಾಲಾಭಿವೃದ್ಧಿಯ ಯಾವುದೇ ಕೆಲಸ ಆಗುತ್ತಿಲ್ಲ.

–ಬಸಣ್ಣ ಹೂಗಾರ, ಮುಖ್ಯ ಶಿಕ್ಷಕ

ಶಾಲೆಗೆ ರಸ್ತೆ, ತಡೆಗೋಡೆಯನ್ನು ನಿರ್ಮಿಸಲು ನರೇಗಾ ಯೋಜನೆಯಲ್ಲಿ ಅನುದಾನ ಇಡಲಾಗಿದೆ. ಸ್ಥಳೀಯರ ಆಕ್ಷೇಪಣೆಯಿಂದ ವಿಳಂಬವಾಗಿದೆ. ಶೀಘ್ರದಲ್ಲಿ ಅದನ್ನು ಬಗೆಹರಿಸಿ ಕಾರ್ಯಾರಂಭ ಮಾಡುತ್ತೇವೆ.

–ಗಿರಿಮಲ್ಲಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈದಾಪುರ

ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸೌಕರ್ಯಗಳು ಮತ್ತು ವಾತಾವರಣ ಒದಗಿಸಿಕೊಡಬೇಕು. ಆಗ ಮಾತ್ರ ಮಕ್ಕಳಲ್ಲಿ ಜ್ಞಾನರ್ಜನೆ ಸಹಜವಾಗಿ ಒಡಮೂಡುತ್ತದೆ. ಆದ್ದರಿಂದ ಆದಷ್ಟು ಬೇಗ ಸಂಬಂಧಿಸಿದವರು ಗ್ರಾಮದ ಶಾಲೆಗೆ ಮೂಲ ಸೌಕರ್ಯ ಮಾಡಿಸಿಕೊಡಬೇಕು.

–ತಾಯಪ್ಪ ಪೂಜಾರಿ, ಪಾಲಕ

ಸೈದಾಪುರ ಸಮೀಪದ ಬಾಲಛೇಡ ಗ್ರಾಮದ ಸರ್ಕಾರಿ ಶಾಲೆಯ ಕೋಣೆಯ ಮೇಲ್ಛಾವಣಿಯ ಸ್ಥಿತಿ
ಸೈದಾಪುರ ಸಮೀಪದ ಬಾಲಛೇಡ ಗ್ರಾಮದ ಸರ್ಕಾರಿ ಶಾಲೆಯ ಕೋಣೆಯ ಮೇಲ್ಛಾವಣಿಯ ಸ್ಥಿತಿ
ಸೈದಾಪುರ ಸಮೀಪದ ಬಾಲಛೇಡ ಗ್ರಾಮದ–––
ಸೈದಾಪುರ ಸಮೀಪದ ಬಾಲಛೇಡ ಗ್ರಾಮದ–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT