ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬಂದ್ ಭಾಗಶಃ ಯಶಸ್ವಿ

Last Updated 28 ಸೆಪ್ಟೆಂಬರ್ 2021, 3:15 IST
ಅಕ್ಷರ ಗಾತ್ರ

ಸುರಪುರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಇತರ ಸಂಘಟನೆಗಳು ಭಾರತ ಬಂದ್ ಬೆಂಬಲಿಸಿ ಕರೆ ನೀಡಿದ ಸುರಪುರ ಬಂದ್ ಭಾಗಶಃ ಯಶಸ್ವಿಯಾಯಿತು.

ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಸಂಚಾರ ವಿರಳವಾಗಿತ್ತು.

ಗೋಪಾಲಸ್ವಾಮಿ ದೇಗುಲದಿಂದ ನಡೆದ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡಿತು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಶೋಷಣೆಗೆ ಸಾರ್ವಜನಿಕರು, ರೈತರು, ವ್ಯಾಪಾರಸ್ಥರು ಒಳಗಾಗಿದ್ದಾರೆ. ನೀತಿ, ಸಿದ್ಧಾಂತ ಕೈಬಿಟ್ಟು ಅನೀತಿ, ಬಂಡವಾಳಶಾಹಿಗಳ ಪರ, ಸಂವಿಧಾನ ವಿರೋಧವಾಗಿ ಬಿಜೆಪಿ ದುರಾಡಳಿತ ನಡೆಸುತ್ತಿದೆ’ ಎಂದು ದೂರಿದರು.

‘ಮೊದಲು ನೋಟ್ ಬ್ಯಾನ್ ತೊಂದರೆ ನೀಡಿತು. ಬಳಿಕ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಎದ್ದೇಳದಂತೆ ಮಾಡಿದೆ. ದೇಶಾದ್ಯಂತ ರೈತ ಬೆಳೆದ ಬೆಳೆಗೆ ಕನಿಷ್ಠ ವೈಜ್ಞಾನಿಕ ಬೆಲೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತರುವಲ್ಲಿ ವಿಫಲವಾಗಿದೆ’ ಎಂದು ಜರಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯವಸ್ಥೆಯನ್ನು ಬಲಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಖರೀದಿ ವ್ಯವಸ್ಥೆಗೆ ಕಾನೂನಿನ ಬಲ ನೀಡಬೇಕು. ಒಪ್ಪಂದ ಕೃಷಿಯಲ್ಲಿ ನಿಯಮಗಳು ಖಾಸಗಿ ಕಂಪನಿಗಳ ಪರವಾಗಿವೆ. ಕೃಷಿಯಲ್ಲಿ ನಿಯಮಗಳ ಉಲ್ಲಂಘನೆಯಾದಲ್ಲಿ ರೈತರು ನ್ಯಾಯಾಲಯಕ್ಕೆ ಹೋಗು ವಂತಿಲ್ಲ. ಕೃಷಿ ಕಾನೂನು ನಿಯಮಗಳು ರೈತರ ಶಕ್ತಿಯನ್ನು ಕುಂದಿಸುತ್ತಿವೆ’ ಎಂದು ವಿಷಾದಿಸಿದರು.

ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಮಲ್ಲಯ್ಯ ಕಮತಗಿ, ಹನುಮಂತ್ರಾಯ ಮಡಿವಾಳ, ದೇವೇಂದ್ರಪ್ಪ ಪತ್ತಾರ, ಅಹಮದ್ ಪಠಾಣ್, ವೆಂಕಟೇಶ್ , ಭೀಮರಾಯ ಒಕ್ಕಲಿಗ, ಮಾನಪ್ಪ ಕೊಂಬಿಸ್, ಉಸ್ತಾದ ವಜಾಹತ್ ಹುಸೇನ್, ವೆಂಕಟೇಶ್ ಭಕ್ರಿ, ಚಾಂದಪಾಶಾ, ಕನಕಾಚಲ ನಾಯಕ, ಬಸವರಾಜ ಪೂಜಾರಿ, ಆನಂದ ದಶರಥ ದೊರೆ, ರಮೇಶ್ ದೊರೆ, ವೆಂಕಟೇಶ ಬೇಟೆಗಾರ, ಮಲ್ಲಿಕಾರ್ಜುನ ಕ್ರಾಂತಿ, ರಾಹುಲ್, ವೆಂಕೋಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT