ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಸರ್ಕಾರ ಗೊತ್ತಿಲ್ಲ; ಮೋದಿ ಸರ್ಕಾರ ಗೊತ್ತು’

ಸಚಿವ ದೇಶಪಾಂಡೆಗೆ ಕೂಲಿಕಾರ ಮಹಿಳೆಯರ ಉತ್ತರ
Last Updated 4 ಜುಲೈ 2019, 4:26 IST
ಅಕ್ಷರ ಗಾತ್ರ

ಯಾದಗಿರಿ: ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಾಲ್ಲೂಕಿನ ಯರಗೋಳ ಗ್ರಾಮದ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ವೇಳೆ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಯಿತು.

ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ವೇಳೆ ಅಲ್ಲಿಯ ಕೂಲಿಕಾರರನ್ನು ಸಚಿವರು ಮಾತನಾಡಿಸಿದರು. ಈ ವೇಳೆ ಕೆಲವರು ನಮಗೆ ದಿನಕ್ಕೆ ₹249 ಕೂಲಿ ನೀಡುತ್ತಿದ್ದು, ಬರಗಾಲ ಪರಿಸ್ಥಿತಿ ವಿವರಿಸಿ ಕೂಲಿ ಹೆಚ್ಚಳ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು. ಈ ವೇಳೆ ಸಚಿವ ದೇಶಪಾಂಡೆ ಮಾತನಾಡಿ, ಇದು ಕೇಂದ್ರ ಸರ್ಕಾರದ ಯೋಜನೆ. ಹೀಗಾಗಿ ಕೂಲಿ ಹೆಚ್ಚಳ ನಾವು (ರಾಜ್ಯ ಸರ್ಕಾರ) ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಧ್ವನಿಗೂಡಿಸಿದರು.

ಈ ವೇಳೆ ಮಹಿಳೆಯರು ಭಾರತ ಸರ್ಕಾರ ಗೊತ್ತಿಲ್ಲ ಎಂದು ಹೇಳಿದರು. ಈ ವೇಳೆ ಸಚಿವ ದೇಶಪಾಂಡೆ, ಭಾರತ ಸರ್ಕಾರದ ಎಂದರೆ ಮೋದಿ ಸರ್ಕಾರ ಎಂದು ಹೇಳಿದರು. ಮಹಿಳೆಯರು ಆಗ ಮೋದಿ ಸರ್ಕಾರ ಎಂದು ಹೇಳಿದ್ದರಿಂದ ತಲೆಯಾಡಿಸಿದರು.

ಕೇಂದ್ರ ಸರ್ಕಾರ ಎಂದರೆ ಗೊತ್ತಾಗುವುದಿಲ್ಲ. ಮೋದಿ ಸರ್ಕಾರ ಎಂದರೆ ಗೊತ್ತಾಗುತ್ತದೆ. ನೀವು ಮೋದಿಗೆ ಓಟ್‌ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡಿದರು.

ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿದೆ ಎಂದರು.

ನಂತರ ಕೂಲಿಕಾರರ ಪಡಿತರ ಬಗ್ಗೆ ವಿಚಾರಣೆ ನಡೆಸಿದರು. ಎಷ್ಟು ಕೇಜಿ ಅಕ್ಕಿ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ವೇಳೆ ಮಹಿಳೆಯರಿ 7 ಕೇಜಿ ಅಕ್ಕಿ, ಉಪ್ಪು, ಎಣ್ಣೆ, ಇನ್ನಿತರ ಆಹಾರ ಪದಾರ್ಥ ವಿತರಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 60-70 ತಾಂಡಾಗಳಿವೆ. ಸ್ಥಳೀಯವಾಗಿ ಕೆಲಸ ಸಿಗದಿದ್ದರೆ ಮುಂಬೈ, ಪುಣೆ, ಬೆಂಗಳೂರು ನಗರಗಳಿಗೆ ಗುಳೆ ಹೋಗುತ್ತಾರೆ. ಇನ್ನು ಯರಗೋಳ ಗ್ರಾಮದ ರೈತರು ಕೆರೆ ತುಂಬಿದರೆ ವರ್ಷಕ್ಕೆ ಎರಡು ಬೆಳೆ ಪಡೆಯುತ್ತಾರೆ. ಮಳೆ ಕೊರತೆಯಾಗಿ ಕೆರೆಯಲ್ಲಿ ನೀರು ಇಲ್ಲದಿರುವುದರಿಂದ 4-5 ವರ್ಷಗಳಿಂದ ಒಂದೂ ಬೆಳೆ ಇಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ನಂತರ ಸಚಿವ ದೇಶಪಾಂಡೆ ಮಾತನಾಡಿ, ಕೂಲಿ ಕಾರ್ಮಿಕರಿಗೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ. ಕೂಲಿ ಮಾಡುವುದು ನಿಮ್ಮಿಂದಲೆ ಕೊನೆಯಾಗಲಿ. ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದರು.

ರಾಜ್ಯ ಸರ್ಕಾರ ಆಯುಷ್ಮಾನ ಕರ್ನಾಟಕ ಯೋಜನೆಯಡಿ ₹5 ಲಕ್ಷ ವರೆಗೆ ಚಿಕಿತ್ಸೆ ಉಚಿತವಾಗಿ ಲಭಿಸಲಿದೆ. ಹೀಗಾಗಿ ಈ ಯೋಜನೆಯನ್ನು ಉಪಯೋಗಿಸಿಕೊಳ್ಳಿ ಎಂದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಪ್ರಭಾರ ಉಪ ಕಾರ್ಯದರ್ಶಿ ದೇವಿಕಾ ಆರ್., ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT