ಶನಿವಾರ, ಮೇ 28, 2022
31 °C
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ

ನಗದೀಕರಣಗೊಳ್ಳದ ಚೆಕ್‌: ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಕೋವಿಡ್‌ನಿಂದ ಮೃತಪಟ್ಟ 11 ಜನರ ಕುಟುಂಬಗಳಿಗೆ ಡಿ.29ರಂದು ನಗರದ ಶಾಸಕರ ಕಚೇರಿಯಲ್ಲಿ ತಲಾ ₹1 ಲಕ್ಷದ ಪರಿಹಾರದ ಚೆಕ್‌ ವಿತರಿಸಲಾಗಿತ್ತು. ಆದರೆ ಕೆಲ ಫಲಾನುಭವಿಗಳಿಗೆ ಇನ್ನೂ ಚೆಕ್ ನಗದೀಕರಣಗೊಂಡಿಲ್ಲ. ನೊಂದ ಫಲಾನುಭವಿಗಳು ಬ್ಯಾಂಕ್‌ಗೆ ಅಲೆಯುವಂತಾಗಿದೆ.

ತಾಲ್ಲೂಕಿನ ವನದುರ್ಗ ಗ್ರಾಮದ ರಂಗಣ್ಣ ಶೇಷಣ್ಣ ಎನ್ನುವವರು ಕೋವಿಡ್‌ನಿಂದ ಮೃತಪಟ್ಟಿದ್ದರು. ಅವರ ಪತ್ನಿ ರೇಣುಕಮ್ಮ ರಂಗಣ್ಣ ಅವರಿಗೆ ಡಿ.29ರಂದು ಚೆಕ್‌ ವಿತರಿಸಲಾಗಿತ್ತು.

‘ವನದುರ್ಗದ ಪಿಕೆಜಿ ಬ್ಯಾಂಕ್‌ನಲ್ಲಿ ಚೆಕ್ ನಗದೀಕರಣಕ್ಕೆ ಸಲ್ಲಿಸಿದ್ದೆ. ಬ್ಯಾಂಕ್‌ನವರು ಜ.3 ರಂದು ಇತರ ಕಾರಣ ಎಂದು ಬರೆದು ಚೆಕ್ ವಾಪಸ್‌ ಕಳುಹಿಸಿದ್ದರು. ಈಗ ಮತ್ತೆ ನಗದೀಕರಣಕ್ಕೆ ನೀಡಿದ್ದೇನೆ. ಸಿಬ್ಬಂದಿಯನ್ನು ವಿಚಾರಿಸಿದರೆ ಸಕಾರಣ ತಿಳಿಸದೆ ಹಾರಿಕೆಯ ಉತ್ತರ ನೀಡುತ್ತಾರೆ. ತಹಶೀಲ್ದಾರ್ ಅವರನ್ನು ವಿಚಾರಿಸಿದರೆ ನನಗೆ ಗೊತ್ತಿಲ್ಲ. ಬ್ಯಾಂಕ್‌ನಲ್ಲಿ ವಿಚಾರಿಸಿ’ ಎನ್ನುತ್ತಾರೆ ಎಂದು ರೇಣುಕಮ್ಮ ಆರೋಪಿಸಿದರು.

ತಾಲ್ಲೂಕಿನ ಮಂಡಗಳ್ಳಿ, ಇಟಗಾ(ಎಸ್) ಗ್ರಾಮದ ಫಲಾನುಭವಿಗಳು ಸಂಕಷ್ಟ ಎದುರಿಸುವಂತೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ನಾವು ತೊಂದರೆ ಅನುಭವಿಸಬೇಕಾ. ನಮಗೆ ಪರಿಹಾರ ಕೊಡಿ ಅಂತ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿಲ್ಲ. ರಕ್ತ ಸಂಬಂಧಿಗಳನ್ನು ಕಳೆದುಕೊಂಡು ನೋವಿನಲ್ಲಿಯೇ ನಾವು ಕಾಲ ಕಳೆಯುತ್ತಿರುವಾಗ ಮತ್ತಷ್ಟು ಹಿಂಸೆ ನೀಡುತ್ತಿರುವುದು ಇದ್ಯಾವ ನ್ಯಾಯ? ನಮಗೂ ಸ್ವಾಭಿಮಾನವಿದೆ ಎಂದು ನೊಂದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೋಗಿ(ಕೆ), ಶಹಾಪುರ ಮುಂತಾದ ಕಡೆ ಕೆಲ ಫಲಾನುಭವಿಗಳಿಗೆ ನೀಡಿದ ಪರಿಹಾರ ಧನದ ಚೆಕ್ ನಗದೀಕರಣಗೊಂಡು ಅವರ ಖಾತೆಗೆ ಹಣ ಜಮೆ ಆಗಿದೆ.

‘ಪರಿಹಾರದ ಮೊತ್ತ ಪಡೆದುಕೊಂಡಿದ್ದೇವೆ’ ಎಂದು ಗೋಗಿ ಗ್ರಾಮದ ಭೀಮರಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.

‘ಜನರ ಜತೆ ಚೆಲ್ಲಾಟ’

‘ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ವಾರಸ್ಸುದಾರರಿಗೆ ನೀಡಿದ ಪರಿಹಾರದ ಚೆಕ್ ನಗದೀಕರಣವಾಗದೆ ಇರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಿಗಳು ಸತ್ತವರ ಕುಟುಂಬದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕೋವಿಡ್ ಅಲೆಯನ್ನು ಎದುರಿಸಲಾರದೆ ಸರ್ಕಾರ ಸತ್ತು ಹೋಗಿದೆ. ಮೃತರ ಕುಟುಂಬದ ಶಾಪ ನಿಮಗೆ ತಟ್ಟುತ್ತದೆ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಕಿಡಿಕಾರಿದ್ದಾರೆ. ತಕ್ಷಣವೇ ಚೆಕ್ ನಗದೀಕರಿಸಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ತಪ್ಪು ಎಸಗಿದವರ ವಿರುದ್ಧ ಕರ್ತವ್ಯಲೋಪದ ಆರೋಪದ ಮೇಲೆ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದರು.

‘ಸತ್ತವರ ಕುಟುಂಬದವರೊಂದಿಗೆ ಚೆಲ್ಲಾಟ’

ಶಹಾಪುರ: ‘ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ವಾರಸ್ಸುದಾರರಿಗೆ ನೀಡಿದ ಪರಿಹಾರದ ಚೆಕ್ ನಗದೀಕರಣವಾಗದೆ ಇರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಿಗಳು ಸತ್ತವರ ಕುಟುಂಬದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕೋವಿಡ್ ಅಲೆಯನ್ನು ಎದುರಿಸಲಾರದೆ ಸರ್ಕಾರ ಸತ್ತು ಹೋಗಿದೆ. ಮೃತರ ಕುಟುಂಬದ ಶಾಪ ನಿಮಗೆ ತಟ್ಟುತ್ತದೆ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಕಿಡಿಕಾರಿದ್ದಾರೆ.

ತಕ್ಷಣವೇ ಚೆಕ್ ನಗದೀಕರಿಸಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ತಪ್ಪು ಎಸಗಿದವರ ವಿರುದ್ಧ ಕರ್ತವ್ಯಲೋಪದ ಆರೋಪದ ಮೇಲೆ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದರು.

‘ಕೆಜಿಬಿ ವ್ಯವಸ್ಥಾಪಕರ ವಿರುದ್ಧ ದೂರು’

ಸುರಪುರ:  ‘ಕೋವಿಡ್ ಪರಿಹಾರದ ಚೆಕ್ ಕ್ಲೀಯರ್ ಆಗದಿರುವುದಕ್ಕೆ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಪಿ.ಸಿ. ಚವ್ಹಾಣ ಅವರನ್ನು ಹೊಣೆಯನ್ನಾಗಿಸಿ ಅವರ ಮೇಲೆ ದೂರು ದಾಖಲಿಸಲಾಗಿದೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಬ್ಯಾಂಕ್ ವ್ಯವಸ್ಥಾಪಕರ ಸಭೆ ನಡೆಸಿದ ನಂತರ ಅವರು ಮಾತನಾಡಿದರು.

‘ಡಿ. 17 ರಂದು 10 ಜನರಿಗೆ ಡಿ. 24 ರಂದು 12 ಜನರಿಗೆ ಸೇರಿ ಒಟ್ಟು 22 ಜನ ಫಲಾನುಭವಿಗಳಿಗೆ ಕೋವಿಡ್ ಪರಿಹಾರ ಚೆಕ್ ಕೊಡಿಸಲಾಗಿತ್ತು. ಕೆಜಿಬಿಯ 10 ಚೆಕ್ ಹೊರತು ಪಡಿಸಿ ಉಳಿದ ಬ್ಯಾಂಕ್‍ನ್ ಚೆಕ್‍ಗಳು ಕ್ಲೀಯರ್ ಆಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ’ ಎಂದು ಹೇಳಿದರು.

‘ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕೆಜಿಬಿ ವ್ಯವಸ್ಥಾಪಕರಿಗೆ ಕ್ಲೀಯರನ್ಸ್ ಬಗ್ಗೆ ಸರಿಯಾದ ಮಾಹಿತಿ ಇರದೆ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡಿ ವ್ಯರ್ಥವಾಗಿ ಅಲೆದಾಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ತಿಳಿಸಿದರು.

‘ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲು ಸುರಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಚೆಕ್‍ಗಳನ್ನು ಈ ಹಿಂದೆ ಟಿಎಸ್‍ಎಲ್ ಮೂಲಕ ಜಮೆ ಮಾಡಲಾಗುತ್ತಿತ್ತು. ಹೊಸ ನಿಯಮಗಳ ಬಗ್ಗೆ ಮಾಹಿತಿ ಇರಲಿಲ್ಲ. ಇತರೆ ಕಾರಣ ನೀಡಿ ಚೆಕ್ ವಾಪಸ್ ನೀಡಿದ್ದೇನೆ. ಚೆಕ್ ಬೌನ್ಸ್ ಆಗಿದೆ ಎಂದು ಯಾರಿಗೂ ಹೇಳಿಲ್ಲ. ಈಗ ಮಾಹಿತಿ ಪಡೆದಿದ್ದೇನೆ. ಎಲ್ಲ ಚೆಕ್‍ಗಳನ್ನು ಕ್ಲೀಯರ್ ಮಾಡಿಕೊಡುತ್ತೇನೆ’ ಎಂದು ವ್ಯವಸ್ಥಾಪಕ ಪಿ.ಸಿ. ಚವ್ಹಾಣ ತಹಶೀಲ್ದಾರರಿಗೆ ತಿಳಿಸಿದರು.

ಕೆನರಾ, ಎಸ್‍ಬಿಐ, ಎಡಿಬಿ ಸೇರಿದಂತೆ ಇತರೆ ಬ್ಯಾಂಕ್ ವ್ಯವಸ್ಥಾಪಕರು, ಪೊಲೀಸ್ ಇನ್‍ಸ್ಪೆಕ್ಟರ್ ಸುನೀಲಕುಮಾರ ಮೂಲಿಮನಿ ಇದ್ದರು.

184 ಜನರಿಗೆ ಚೆಕ್‌ ವಿತರಣೆ

ಯಾದಗಿರಿ: ಜಿಲ್ಲಾಡಳಿತದ ದಾಖಲೆಯಂತೆ ಜಿಲ್ಲೆಯಲ್ಲಿ ಕೋವಿಡ್‌ನಿಂದ 206 ಜನ ಮೃತಪಟ್ಟಿದ್ದು, ಸರ್ಕಾರದಿಂದ ₹1 ಲಕ್ಷ ಹಣದ ಚೆಕ್‌ ಅನ್ನು ಇಲ್ಲಿಯವರೆಗೆ 184 ಜನರಿಗೆ ವಿತರಿಸಲಾಗಿದೆ. ಆದರೆ, ಕೆಲ ಕಡೆ ಚೆಕ್‌ ನಗದೀಕರಣ ಆಗದಿದ್ದರಿಂದ ಫಲಾನುಭವಿಗಳು ಪರದಾಡುತ್ತಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟ 122 ಜನ ಬಿಪಿಎಲ್‌, 62 ಜನ ಎಪಿಎಲ್‌ ಪಡಿತರ ಕಾರ್ಡ್‌ ಹೊಂದಿದ್ದಾರೆ. ಇವರಿಗೆ ಚೆಕ್‌ ವಿತರಿಸಲಾಗಿದೆ. ಅಲ್ಲದೇ ಬೇರೆ ಕಡೆ ವಿವಿಧ ಜಿಲ್ಲೆಯ 22 ಜನರು ಮೃತಪಟ್ಟಿದ್ದರಿಂದ ಇವರಿಗೆ ಚೆಕ್‌ ವಿತರಣೆ ವಿಳಂಬವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚೆಕ್‌ ವಿತರಿಸಿದ ಕೆಲವರಿಗೆ ₹1 ಲಕ್ಷ ಹಣ ನಗದೀಕರಣ ಆಗದ ಕಾರಣ ಬ್ಯಾಂಕ್‌ಗಳಿಗೆ ತಿರುಗಾಡುತ್ತಿದ್ದಾರೆ.

ಈ ಬಗ್ಗೆ ಎಸ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್.ಸಿದ್ದೇಶ್ವರ ಮಾಹಿತಿ ನೀಡಿದ್ದು, ‘ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ (ಕೆಜಿಬಿ) ಅಧಿಕಾರಿಗಳು ಸಿಟಿಎಸ್ ಮೂಲಕ ಚೆಕ್ ಹಾಕಿದ್ದರಿಂದ ಕೆಲವರಿಗೆ ಚೆಕ್‌ ವಾಪಸ್‌ ನೀಡಲಾಗಿದೆ. ಚೆಕ್‌ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಮೂಲಕ ಚೆಕ್ ಹಾಕದೆ ಚೆಕ್ ನೀಡಿದ ಸಂಬಂಧಪಟ್ಟ ಬ್ಯಾಂಕ್‌ಗೆ ಚೆಕ್ ಕಳುಹಿಸಬೇಕಿತ್ತು. ಎಸ್‌ಬಿಐ ಬ್ಯಾಂಕ್‌ಗೆ ಚೆಕ್ ಕಳುಹಿಸಿದರೆ ಹಣ ಜಮಾ ಆಗುತಿತ್ತು. ಕೆಜಿಬಿ ಬ್ಯಾಂಕ್ ಅಧಿಕಾರಿಗಳ ತಪ್ಪಿನಿಂದ ಹಣ ಜಮಾ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಶೋಕಾಸ್‌ ನೋಟಿಸ್‌ ಜಾರಿ: ‘ಕೋವಿಡ್‌ ಪರಿಹಾರ ಚೆಕ್‌ ವಿತರಣೆಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಶಂಸೆಗೆ ಒಳಪಟ್ಟಿದೆ. ಸರ್ಕಾರಿ ಖಜಾನೆಯಿಂದ ಚೆಕ್‌ ಪರಿಹಾರ ಕಳುಹಿಸಿದ್ದರಿಂದ ಬೌನ್ಸ್‌ ಆಗಲು ಸಾಧ್ಯವಿಲ್ಲ. ಇತರ ಕಾರಣ ನೀಡಿ ಬ್ಯಾಂಕ್‌ನವರು ಕಳುಹಿಸಿದ್ದಾರೆ. ಈ ಬಗ್ಗೆ ಕೆಜಿಬಿ ಬ್ಯಾಂಕ್‌ ವ್ಯವಸ್ಥಾಪಕ ಮತ್ತು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ತಿಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು