ಸೋಮವಾರ, ಜುಲೈ 4, 2022
24 °C
ಪೊಕ್ಸೋ , ಬಾಲನ್ಯಾಯ ಕಾಯ್ದೆ ಕುರಿತು ಪ್ರಗತಿ ಪರಿಶೀಲನಾ ಸಭೆ

ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ: ಡಾ.ಜಯಶ್ರೀ ಚನ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಕ್ಕಳ ಶೋಷಣೆ ತಪ್ಪಿಸುವುದು, ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸುವುದು ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮತ್ತು ರಕ್ಷಣೆ, ಪೋಷಣೆ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಡಾ.ಜಯಶ್ರೀ ಚನ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರ್‌ಟಿಇ 2009, ಪೋಕ್ಸೋ 2012 ಹಾಗೂ ಬಾಲನ್ಯಾಯ ಕಾಯ್ದೆ 2015 ರ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

18 ವರ್ಷದ ವರೆಗೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಪ್ರತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿ, ಜಿಲ್ಲೆಯಲ್ಲಿ 106 ಬಾಲ್ಯ ವಿವಾಹಗಳು ತಡೆಯಲಾಗಿದ್ದು, 9 ಬಾಲ್ಯ ವಿವಾಹವು ನಡೆದಿವೆ. ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್-19 ತಂದೆ ತಾಯಿಯನ್ನು ಕಳೆದುಕೊಂಡಂತಹ ಅನಾಥ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ ₹3,500 ಹಾಗೂ ಪಿಎಂ ಕೇರ್ ಯೋಜನೆಯಡಿಯಲ್ಲಿ 23 ವರ್ಷ ದಾಟಿದ ಮಕ್ಕಳಿಗೆ ₹10 ಲಕ್ಷ ಪಡೆಯುತ್ತಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಅಧ್ಯಕ್ಷೆ ಡಾ.ಜಯಶ್ರೀ ಮಾತನಾಡಿ, ಬಾಲ್ಯ ವಿವಾಹವು ತಡೆಯುವಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದ ಅವರು, 18 ವರ್ಷದೊಳಗಿನ ಹಣ್ಣು ಮಕ್ಕಳು ಗರ್ಭ ಧರಿಸಿದರಲ್ಲಿ ಅಂಥ ಹೆಣ್ಣು ಮಕ್ಕಳ ಮಾಹಿತಿಯನ್ನು ಆಯೋಗಕ್ಕೆ ತಿಳಿಸಲು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಹಿಲ್ ಅಹ್ಮದ್ ಕುನ್ನಿಬಾವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಕವಿತಾಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಹಣಮಂತ್ರಾಯ ಸಿ ಕರಡ್ಡಿ, ಮಕ್ಕಳ ರಕ್ಷಣಾ ಅಧಿಕಾರಿ ಮಲ್ಲಣ್ಣ ದೇಸಾಯಿ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಭಗವಂತ ಅನವಾರ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಮಕ್ಕಳ ಸಹಾಯವಾಣಿ 1098 ಜಾಗೃತಿ ಸಮಿತಿಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು