ಭಾನುವಾರ, ಸೆಪ್ಟೆಂಬರ್ 20, 2020
21 °C

ಮಕ್ಕಳ ಸಾಹಿತ್ಯ ಸಮೃದ್ಧಗೊಳಿಸಿದ ಸಾಹಿತಿ ಚಂದ್ರಕಾಂತ ಕರದಳ್ಳಿ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ‘ಆಕಾಶವೇಕೆ ಮೇಲಿದೆ’ ಎಂಬ ಪ್ರಶ್ನೆಯನ್ನು ಮಕ್ಕಳಿಗೆ ಎಸೆಯುವುದರ ಮೂಲಕ ತಾವೇ ಆಕಾಶದ ಕಡೆ ಮುಖ ಮಾಡಿದ ಮಕ್ಕಳ ಸಾಹಿತಿ ಚಂದ್ರಕಾಂತ ರಾಚಯ್ಯ ಕರದಳ್ಳಿ (67) ಅವರು ಹೃದಯಘಾತದಿಂದ ಕೊನೆಯುಸಿರೆಳೆದ ಸುದ್ದಿಯಿಂದ ಸಾಹಿತ್ಯ ವಲಯಕ್ಕೆ ಬರಸಿಡಿಲು ಬಡಿದಂತಾಗಿದೆ.

ಹೃದಯಾಘಾತದಿಂದ ಬೆಂಗಳೂರಿನಲ್ಲಿ ಅವರು ನಿಧನರಾದ ಸುದ್ದಿ ಬಿತ್ತರವಾಗುತ್ತಿದ್ದಂತೆ ಕರದಳ್ಳಿಯವರ ಮನೆ ‘ಶಿವಪ್ರಸಾದ ನಿಲಯ’ಕ್ಕೆ ಆತ್ಮೀಯ ಬಂಧುಗಳು ದೌಡಾಯಿಸಿದರು. ಅವರ ಪತ್ನಿ ದೇವಮ್ಮ ಹೃದಯ ಕಾಯಿಲೆಯಿಂದ ಬಳಲುತ್ತಿರುವುದರಿಂದ ಸಾವಿನ ಸುದ್ದಿಯನ್ನು ಅವರಿಗೆ ತಿಳಿಸಿರಲಿಲ್ಲ.

‘ಯಾಕೋ ನಮ್ಮ ಮನೆಯ ಮುಂದೆ ಹೆಚ್ಚು ಜನ ಬಂದು ನೋಡುತ್ತಿದ್ದಾರೆ. ನನ್ನ ಕರದಳ್ಳಿಗೆ ಏನೋ ಅಗ್ಯಾದ ನೀ ಸುಳ್ಳು ಹೇಳುತ್ತಿದ್ದಿ ಶಿವ (ಮಗನ ಹೆಸರು)’ ಎಂದು ದೇವಮ್ಮ ಚಡಪಡಿಸುತ್ತಿದ್ದಂತೆ ಶಿವ ತನ್ನ ತಂದೆಯ ಸಾವಿನ ಸುದ್ದಿಯನ್ನು ತಾಯಿಗೂ ಹೇಳದ ಅಸಹಾಯಕ ಸ್ಥಿತಿಯನ್ನು ತಲುಪಿದ್ದೇನಲ್ಲ ಎಂಬ ಕಣ್ಣೀರಿನಲ್ಲಿಯೇ ಉತ್ತರಿಸಿದರು.

ದುಂಡಾದ ಮುಖ, ಸದಾ ಕುರುಚಲು ಗಡ್ಡ. ಹೆಚ್ಚಾಗಿ ಇಷ್ಟಪಟ್ಟು ಧರಿಸುತ್ತಿದ್ದ ಬಿಳಿ ಶರ್ಟ್‌ನಷ್ಟೇ ಶುಭ್ರತೆಯನ್ನು ಕರದಳ್ಳಿಯವರು ಸಾಹಿತ್ಯ ಕ್ಷೇತ್ರದಲ್ಲಿಯೂ ಕಾಪಾಡಿಕೊಂಡು ಬಂದಿದ್ದರು. ಅವರು ಸಗರನಾಡಿನ ಭಾವೈಕ್ಯದ ನೆಲದಲ್ಲಿ ವಿಶಿಷ್ಟ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

ಕಾವ್ಯ, ಕವಿತೆ, ಶಿಶುಪ್ರಾಸ, ಕಾದಂಬರಿ, ಒಗಟು, ಪ್ರವಾಸ ಕಥನ, ಸಂಪಾದನೆ ಸೇರಿ 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ನಲಿದಾಡು ಬಾ ನವಿಲೆ, ಪುಟ್ಟನ ಕನಸ್ಸು, ನಮ್ಮ ಹಳ್ಳಿ ನಮಗೆ ಚೆಂದ, ಮಾವಿನ ಮರ ಬೆಳೆದಿದ್ದು, ಉಪ್ಪಿನ ಗೊಂಬೆಯ ಹುಟ್ಟೂರು, ಆಕಾಶವೇಕೆ ಮೇಲಿದೆ ಹೀಗೆ ಹಲವು ಮಹತ್ವದ ಕೃತಿಗಳು ಸೇರಿವೆ.

ಕರದಳ್ಳಿಯವರು 1952 ಅಗಸ್ಟ್ 25ರಂದು ರಾಚಯ್ಯಸ್ವಾಮಿ ಹಾಗೂ ಮುರೆಗಮ್ಮ ದಂಪತಿಗೆ ಜನಿಸಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು 33 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಿರಂತರವಾಗಿ ಸಾಹಿತ್ಯದ ಕೃಷಿಯಲ್ಲಿ  ತೊಡಗಿಸಿಕೊಂಡಿದ್ದರು. ಅಕ್ಷರದ ಅರಿವಿನ ಮೂಲಕ ಅರಿವು ಮೂಡಿಸುತ್ತಿದ್ದ ಚಂದ್ರಕಾಂತ ಕರದಳ್ಳಿ ಎಂಬ ದೀವಿಗೆ ನಂದಿ ಹೋಗಿದೆ.

‘ಡಬಲ್ ಧಮಾಕಾ ಎನ್ನುವಂತೆ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಅವರಿಗೆ ಬಂದಿತ್ತು. ರಾಜ್ಯ ಸರ್ಕಾರವೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿಗಳಿಂದ ಸಂಭ್ರಮಿಸುತ್ತಿರುವಾಗ ಇಷ್ಟು ಬೇಗ ಸಾಹಿತ್ಯದ ಕೃಷಿ ಮುಗಿಸುತ್ತಾರೆ ಎಂದು ಯಾರು ಎಣಿಸಿರಲಿಲ್ಲ’ ಎನ್ನುತ್ತಾರೆ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ.

‘ಸಗರನಾಡಿನ ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸುತ್ತಾ, ಮಗುವಿನಂತಹ ಮನಸ್ಸಿನ ಕರದಳ್ಳಿ ಸಾವು ನಿಜಕ್ಕೂ ನಂಬಲು ಆಗುತ್ತಿಲ್ಲ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಕಂಬನಿ ಮಿಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು