ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಬದುಕಿಗೆ ಮೆಣಸಿನಕಾಯಿ ಸಿಹಿ

ಮೆಣಸಿಕಾಯಿ ಬಿಡಿಸಿ ಜೀವನ ಕಟ್ಟಿಕೊಂಡ ಮದ್ರಿಕಿ, ಮೂಡಬೂಳ ಮಹಿಳೆಯರು
Last Updated 19 ಫೆಬ್ರುವರಿ 2021, 1:26 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬಿಡಿಸುವ ಕೆಲಸ ಮಾಡುವ ಮಹಿಳೆಯರು ಇದರಿಂದಲೇ ಜೀವನ ಕಟ್ಟಿಕೊಂಡಿದ್ದಾರೆ. ಇದು ಇವರ ಪಾಲಿಗೆ ಸಿಹಿಯಾಗಿದೆ.

ಮದ್ರಿಕಿ, ಮೂಡಬೂಳ ಭಾಗದಲ್ಲಿ ಡಬ್ಬಿ ಬ್ಯಾಡಗಿ, ಕಡ್ಡಿ ಬ್ಯಾಡಗಿ ಬೆಳೆದಿದ್ದು, ಇದನ್ನು ಬಿಡಿಸುವ ಕಾರ್ಮಿಕರಿಗೆ ತುಂಬಾ ಬೇಡಿಕೆ ಇದೆ. ಮಹಿಳೆಯರಿಗೆ ದಿನಕ್ಕೆ ₹150 ಕೂಲಿ ಸಿಗುತ್ತಿದೆ. ಇದರಿಂದಲೇ ಮಹಿಳೆಯರು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

‘ಬೆಳಿಗ್ಗೆ 10.30ಕ್ಕೆ ಕೆಲಸಕ್ಕೆ ಬಂದು ಸಂಜೆ 5.30ರ ತನಕ ಜಮೀನಿನಲ್ಲಿ ಮೆಣಸಿನಕಾಯಿಯಲ್ಲಿ ಕಸ ಕಡ್ಡಿ ಇದ್ದರೆಹಸನು ಮಾಡುತ್ತೇವೆ. ಒಂದು ಸಾಲು ಹಸನು ಮಾಡುತ್ತೇವೆ. ಈಗ ಜಮೀನುಗಳಲ್ಲಿ ಬೇರೆ ಬೆಳೆ ಇಲ್ಲದಿದ್ದರಿಂದ ಇದೇ ನಮಗೆ ಆಸರೆಯಾಗಿದೆ’ ಎನ್ನುತ್ತಾರೆ ಕೂಲಿಕಾರ ಮಹಿಳೆ ಮಲ್ಲಮ್ಮ ರಾಮಸ್ವಾಮಿ ಅವರು.

‘ನಮ್ಮ ಯಜಮಾನರಿಗೆ ಮೈ ಹುಷಾರಿಲ್ಲ. ಇದರಿಂದ ನಮ್ಮ ಕುಟುಂಬಕ್ಕೆ ನನ್ನ ಕೂಲಿಯಿಂದಲೇ ಜೀವನ ನಡೆಯುತ್ತಿದೆ. ಒಂದು ಎಕರೆ ಜಮೀನು ಇದೆ. ಇದರಿಂದ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಹೀಗಾಗಿ ಕೂಲಿ ಕೆಲಸಕ್ಕೆ ಬರುತ್ತಿದ್ದೇನೆ. ಮೆಣಸಿಕಾಯಿ ಬಿಡಿಸುವ ಕೆಲಸ ಕುಳಿತುಕೊಂಡು ಮಾಡುವುದಾಗಿದೆ. ಗ್ರಾಮದಿಂದ ಹೋಗಿ ಬರಲು ಆಟೊ ವ್ಯವಸ್ಥೆಯನ್ನು ಮಾಲೀಕರು ಮಾಡಿದ್ದಾರೆ. ಇದರಿಂದ ನಮಗೆ ಅನುಕೂಲವಾಗಿದೆ’ ಎನ್ನುತ್ತಾರೆ ಅವರು.

‘ಬ್ಯಾಡಗಿ ಮೆಣಸಿನಕಾಯಿ ಕಸಕಡ್ಡಿ ತೆಗೆಯುವುದು ಸುಲಭ. ಆದರೆ, ಗುಂಟೂರು ಮೆಣಸಿನಕಾಯಿ ಬಿಡಿಸುವಾಗ ಕೈ ಉರಿಯುತ್ತದೆ. ಖಾರ ಜಾಸ್ತಿ ಇರುವುದರಿಂದ ಕೈ ಉರಿಯತ್ತಿದೆ. ಸಂಜೆ ಮನೆಗೆ ತೆರಳಿದ ನಂತರ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತೇವೆ. ಆಗ ಊರಿ ಕಡಿಮೆಯಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಮಹಿಳೆ ರಾಜಮ್ಮ.

‘ಹತ್ತಿ ಬೆಳೆ ಇದ್ದಿದ್ದರೆ ಗ್ರಾಮದಲ್ಲಿ ಕೂಲಿಗೆ ಪರದಾಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಈಗ ಎಲ್ಲ ಕಡೆ ಹತ್ತಿ ಕಿತ್ತಿದ್ದಾರೆ. ಇಲ್ಲಿದಿದ್ದರೆ ಮೇ ತಿಂಗಳ ತನಕ ಅದರಲ್ಲೇ ತೊಡಗಿಕೊಳ್ಳುತ್ತಿದ್ದೆವು. ಕಾಲುವೆ ನೀರಿನಲ್ಲಿ ಮೆಣಸಿನಕಾಯಿ ಬೆಳೆದಿದ್ದವರು ಕೂಲಿಗೆ ಕರೆಯುತ್ತಾರೆ. ಇದರಿಂದ ನಮಗೆ ಸಂಸಾರ ಸರಿದೂಗಿಸಿಕೊಳ್ಳಲು ಸಾಧ್ಯವಾಗಿದೆ. ಇದು ಇಲ್ಲದಿದ್ದರೆ ದೂರದ ಬೆಂಗಳೂರಿಗೆ ಗುಳೆ ಹೋಗುವುದು ತಪ್ಪುವುದಿಲ್ಲ’ ಎಂದು ಕೂಲಿಕಾರ ಮಹಿಳೆಯರು ತಿಳಿಸುತ್ತಾರೆ.

‘ಕೊರೊನಾ ಲಾಕ್‌ಡೌನ್‌ ವೇಳೆ ಕೂಲಿ ಇಲ್ಲದೆ ಮೂರು ತಿಂಗಳು ಮನೆಯಲ್ಲಿ ಕುಳಿತುಕೊಂಡಿದ್ದೀವಿ. ಈಗ ಮೆಣಸಿನಕಾಯಿ ಸೀಸನ್‌ ಇರುವುದರಿಂದ ಕೂಲಿಗೆ ಕೊರತೆ ಇಲ್ಲ. ನಾಲ್ಕು ದುಡ್ಡು ಸಂಪಾದನೆ ಮಾಡಿಕೊಳ್ಳಬೇಕಿದೆ. ಇದರ ನಂತರ ಮತ್ತೆ ಯಾವ ಉದ್ಯೋಗ ಇಲ್ಲ. ಮುಂದೆ ಜೀವನ ಹೇಗೆ ದಾರಿ ತೋರಿಸುತ್ತೋ ಹಾಗೆ ಸಾಗಬೇಕಿದೆ’ ಎಂದು ಮಹಿಳೆಯರು ನುಡಿದರು.

***

ವಾರದ ಆರು ದಿನ ಕೆಲಸ ಮಾಡುತ್ತೇವೆ. ಸೋಮವಾರ ಸಂತೆ ಇರುವುದರಿಂದ ಅಂದು ಕೆಲಸ ಬಿಡುವು ಮಾಡಿಕೊಂಡು ಆಹಾರ ಸಾಮಗ್ರಿ ತಂದುಕೊಳ್ಳುತ್ತೇವೆ

- ಮಲ್ಲಮ್ಮ ರಾಮಸ್ವಾಮಿ, ಕೂಲಿಕಾರರು

***

ನಮ್ಮ ಗ್ರಾಮದಿಂದ 20 ಜನ ಕೂಲಿ ಕೆಲಸಕ್ಕೆ ಬರುತ್ತೇವೆ. ಹತ್ತಿ ಬೆಳೆ ಇಲ್ಲದಿದ್ದರಿಂದ ಮೆಣಸಿನಕಾಯಿ ಬಿಡಿಸುವುದೊಂದು ಕೆಲಸವಿದೆ

- ಕಾನುಬಾಯಿ ಪರುಶುರಾಮ, ಕೂಲಿಕಾರ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT