ಖರ್ಗೆ ಸೋಲಿಸುವುದೇ ನಮ್ಮ ಗುರಿ

7
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಬಾಬುರಾವ್‌ ಚಿಂಚನಸೂರ್ ಹೇಳಿಕೆ

ಖರ್ಗೆ ಸೋಲಿಸುವುದೇ ನಮ್ಮ ಗುರಿ

Published:
Updated:
Prajavani

ಯಾದಗಿರಿ: ‘ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್‌ ಅವರು ಒಂದು ವಾರದಲ್ಲಿ ರಾಜೀನಾಮೆ ಬಿಸಾಕಿ ಬಿಜೆಪಿಯಿಂದ ಕಲಬುರ್ಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಈಚೆಗೆ ಬಿಜೆಪಿ ಸೇರಿದ ಬಾಬುರಾವ್‌ ಚಿಂಚನಸೂರ್ ಹೇಳಿದರು.

ದೂರವಾಣಿಯಲ್ಲಿ ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್ ಕರ್ನಾಟಕದಲ್ಲಿನ ಕಾಂಗ್ರೆಸ್‌ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ. ಐದು ಬಾರಿ ಗೆದ್ದು ಬಂದ ನನ್ನನ್ನು ಮೂಲೆಗುಂಪು ಮಾಡಿ ತಮ್ಮ ಪುತ್ರನನ್ನು ಸಚಿವನನ್ನಾಗಿ ಮಾಡಿದರು. ಅವರಿಂದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚೌವ್ಹಾಣ್, ಖಮರುಲ್‌ ಇಸ್ಲಾಂ, ಚಿತ್ತಾಪುರದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಅವರಿಗೆ ಬಹಳ ಅನ್ಯಾಯ ಆಗಿದೆ. ಈಗ ನಾವೆಲ್ಲ ಒಂದಾಗಿದ್ದೇವೆ. ಖರ್ಗೆ ಅವರನ್ನು ಸೋಲಿಸುವುದೇ ನಮ್ಮ ಧ್ಯೇಯವಾಗಿದೆ’ ಎಂದು ಪುನರುಚ್ಚರಿಸಿದರು.

‘ಸೂರ್ಯ–ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಅಷ್ಟೇ ಸತ್ಯ. ಖರ್ಗೆ ಅವರಿಂದ ಕೋಲಿ ಸಮಾಜಕ್ಕೆ ಬಹಳ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡಕ್ಕೆ ಈ ಸಮಾಜವನ್ನು ಸೇರಿಸುವುದಾಗಿ ತಮ್ಮ 70 ವರ್ಷದ ರಾಜಕೀಯದ ಜೀವನದುದ್ದಕ್ಕೂ ಆಶ್ವಾಸನೆ ನೀಡುತ್ತಾ ಮತ ಪಡೆದಿದ್ದಾರೆ’ ಎಂದು ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಉಮೇಶ್ ಜಾಧವ್ ಸಜ್ಜನ ರಾಜಕಾರಣಿ. ಹೈದರಾಬಾದ್‌ ಕರ್ನಾಟಕದ ಜನರ ಪ್ರೀತಿಗೆ ಅವರು ಪಾತ್ರರಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರೇ ಬಿಜೆಪಿ ಅಭ್ಯರ್ಥಿ. ಈ ಕುರಿತು ಬಿಜೆಪಿ ಹೈಕಮಾಂಡ್‌ನೊಂದಿಗೆ ಮೊದಲ ಸುತ್ತಿನ ಮಾತುಕತೆ ಕೂಡ ಮುಗಿದಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !