ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯ ವಂಚಿತ ‘ಮುಂಡರಗಿ’

ಯಾದಗಿರಿಗೆ ಸಮೀಪವಿದ್ದರೂ ಸೌಕರ್ಯಗಳಿಗೆ ದೂರ, ಗ್ರಾಮಸ್ಥರ ಪರದಾಟ
Last Updated 26 ಫೆಬ್ರುವರಿ 2021, 16:33 IST
ಅಕ್ಷರ ಗಾತ್ರ

ಮುಂಡರಗಿ(ಯಾದಗಿರಿ): ನಗರದ ಸಮೀಪದ ಮುಂಡರಗಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿದ್ದರಿಂದ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ.

ಮುಂಡರಗಿ ಗ್ರಾಮ ನಗರದ ಪ್ರದೇಶದಿಂದ ಕೇವಲ 8 ಕಿ.ಮೀ ಅಂತರದಲ್ಲಿದೆ. ಹತ್ತಿರವಿದ್ದರೂ ಸೌಲಭ್ಯಗಳು ದೂರವಾಗಿವೆ. ತಾಲ್ಲೂಕು ಪಂಚಾಯಿತಿ ಕೇಂದ್ರ ಸ್ಥಾನವೂ ಆಗಿದೆ. ಆದರೆ, ಸೌಲಭ್ಯಗಳು ಮರೀಚಿಕೆಯಾಗಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಮೂರು ತಾಂಡಾ,ಎರಡು ಗ್ರಾಮಗಳು ಬರುತ್ತಿವೆ. ಅಶೋಕ ನಗರ ತಾಂಡಾ, ಕುರುಕುಂಬಳ ತಾಂಡಾ, ಸಕ್ರ್ಯಾನಾಯಕ ತಾಂಡಾ,ಮುಂಡರಗಿ, ಬೆಳಗೇರಾ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿನಲ್ಲಿ 24 ಸದಸ್ಯರಿದ್ದಾರೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೂ ಇದೇ ಗ್ರಾಮದ ಸದಸ್ಯರಿದ್ದಾರೆ.

ಕಚ್ಚಾ ರಸ್ತೆ: ಗ್ರಾಮದಲ್ಲಿ ಸಿ.ಸಿ. ರಸ್ತೆ ಇಲ್ಲ. ಇದ್ದ ಕಡೆ ಎಲ್ಲ ತಗ್ಗು ದಿನ್ನೆಗಳು ಬಿದ್ದಿದ್ದು, ಕಚ್ಚಾ ರಸ್ತೆಯಲ್ಲೇ ಗ್ರಾಮಸ್ಥರು ಓಡಾಡಬೇಕಾಗಿದೆ. ನಗರ ಪ್ರದೇಶಕ್ಕೆ ಸಮೀಪವಿರುವ ಗ್ರಾಮದಲ್ಲೇ ಇಂಥ ಅವ್ಯವಸ್ಥೆ ತಾಂಡವವಾಡುತ್ತಿದ್ದರೆ ಗುಡ್ಡಗಾಡು ಪ್ರದೇಶದಲ್ಲಿ ಹೇಗಿರಬಹುದು ಎಂದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ರಸ್ತೆ ಮೇಲೆ ಹರಿಯುವ ಕೊಳಚೆ ನೀರು: ಗ್ರಾಮದಲ್ಲಿ ಸಮರ್ಪಕ ಚರಂಡಿ ಇಲ್ಲದಿದ್ದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಚರಂಡಿ ನೀರು ಹರಿಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ದುರ್ವಾಸನೆ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಊರಿನ ತಗ್ಗು ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ನೀರು ನಿಂತು ಮಲಿನವಾಗುತ್ತವೆ.

ಗ್ರಾಮದಲ್ಲಿ ಎರಡು ಓವರ್‌ ಹೆಡ್‌ ನೀರಿನ ಟ್ಯಾಂಕ್‌ಗಳಿದ್ದು, ಹಳೆ ವಾಟರ್ ಟ್ಯಾಂಕ್ ಶಿಥಿಲಗೊಂಡಿದೆ. ಸಿ‍ಮೆಂಟ್‌ ಕಿತ್ತಿ ಕಬ್ಬಿಣದ ಸಲಾಕೆಗಳು ಹೊರಕಾಣಿಸುತ್ತಿವೆ. ಅಕ್ಕಪಕ್ಕದಲ್ಲಿ ಮನೆಗಳಿದ್ದು, ಅಪಾಯಕ್ಕೆ ಆಹ್ವಾನಿಸುವಂತಿವೆ.

5 ಅಂಗನವಾಡಿ ಕೇಂದ್ರಗಳು: ಗ್ರಾಮ ದಲ್ಲಿ 5 ಅಂಗನವಾಡಿ ಕೇಂದ್ರಗಳಿದ್ದು, ಮೊದಲನೇ ಕೇಂದ್ರ ಕಳೆದ 30 ವರ್ಷಗಳಿಂದ ನಿರ್ಮಿಸಲಾಗಿದೆ. ಆದರೆ, ಇದು ಈಗ ಶಿಥಿಲಾವಸ್ಥೆ ತಲುಪಿದ್ದು, ಸಿಮೆಂಟ್‌ ಉದುರಿ ಬೀಳುತ್ತಿದೆ. ಕೇಂದ್ರದ ಕಾರಿಡಾರ್‌ನಲ್ಲಿ ಮಕ್ಕಳನ್ನು ಕುಳ್ಳಿರಿಸಲಾಗುತ್ತಿದೆ. ಶೌಚಾಲಯಕ್ಕೆ ಬೀಗ ಹಾಕಲಾಗಿದೆ.

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ: ಮಳೆಗಾಲದಲ್ಲಿ ಕಟ್ಟಡ ಸೋರು ತ್ತಿದ್ದರಿಂದ ಪುಸ್ತಕ, ಇನ್ನಿತರ ಮಕ್ಕಳ ಸಾಮಗ್ರಿ ನೀರಿನಲ್ಲಿ ತೊಯ್ದದಿದ್ದವು. ಈಗ ಎಲ್ಲ ಸಾಮಗ್ರಿಗಳನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

‘ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದ್ದರಿಂದ ಕಟ್ಟಡವನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. 40 ಮಕ್ಕಳಿದ್ದಿದ್ದಾರೆ. ಕಟ್ಟಡದ ದುರಸ್ತಿಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೇವೆ’ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಶಾಂತಾ ಮಹಾಲಿಂಗಪ್ಪ ಬಡಿಗೇರ.

ಟ್ರಾನ್ಸ್‌ಫಾರ್ಮರ್‌ಗೆ ಹಬ್ಬಿದ ಹಸಿರು ಬಳ್ಳಿ‌: ‘ಗ್ರಾಮದ ಶಾಲೆಗೆ ತೆರಳುವ ರಸ್ತೆ ಮಾರ್ಗದಲ್ಲಿ ಹಸಿರು ಬಳ್ಳಿ ವಿದ್ಯುತ್‌ ಪರಿವರ್ತಕಕ್ಕೆ ಹಬ್ಬಿದ್ದು, ಇದನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಪಂಚಾಯಿತಿ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಸಮಸ್ಯೆ ಯಾವತ್ತಿಗೂ ತಪ್ಪಿದ್ದಲ್ಲ. ಹೀಗಿದ್ದರೂ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿ ಬಗ್ಗೆ ಪ‍್ರಶ್ನೆ ಮಾಡಿದರೆ ಕಡೆಗಣಿಸಿದ್ದಾರೆ. ಯಾದಗಿರಿಗೆ ಹತ್ತಿರವಿದ್ದರೂ ಅಭಿವೃದ್ಧಿ ಮಾತ್ರ ಆಗಿಲ್ಲ’ ಎಂದು ಗ್ರಾಮಸ್ಥರಾದ ಮರಲಿಂಗ ದೋನಿ, ಶರಣಪ್ಪ ಅಮಾನೋರ, ಮಲ್ಲಮ್ಮ ಹೇಳುತ್ತಾರೆ.

‘ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮದ ಸಮಸ್ಯೆಗಳನ್ನು ಬಗೆ ಹರಿಸಬೇಕು. ಈ ಮೂಲಕ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು’ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಬಣ ರಾಜಕೀಯ; ಮುಂದುವರಿದ ಗೊಂದಲ
ಇದೇ ಫೆಬ್ರುವರಿ 5ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಅಂದಿನಿಂದ ಎರಡು ಗುಂಪುಗಳಲ್ಲಿ ಭಿನ್ನಮತ ಏರ್ಪಟ್ಟಿದೆ. ಶುಕ್ರವಾರ ಸಾಮಾನ್ಯ ಸಭೆ ನಡೆದರೂ ಒಂದು ಗುಂಪು ಹೊರಗೆ ಕುಳಿತುಕೊಂಡಿತ್ತು. ಮತ್ತೊಂದು ಬಣ ಸಭೆಗೆ ಹಾಜರಾಗಿತ್ತು. ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. ಸದಸ್ಯರ ವೈಯಕ್ತಿಯ ಹಿತಾಸಕ್ತಿಯಿಂದ ಗ್ರಾಮದ ಅಭಿವೃದ್ಧಿ ಕೆಲಸಗಳು ನೆನಗುದಿಗೆ ಬಿದ್ದಿವೆ ಎಂದು ಯುವಕರ ಆರೋಪವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸದಸ್ಯೆರೊಬ್ಬರು ಖಾಲಿ ಮತಪತ್ರ ನೀಡಿದ್ದರು. ಮತ ಎಣಿಕೆಯಲ್ಲಿ 1 ಮತ ತಿರಸ್ಕೃತಗೊಂಡಿರುವುದಕ್ಕೆ ಸದಸ್ಯರ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ವೈಷಮ್ಯ ಬೆಳೆದು ಬಂದಿದ್ದು, ಅಭಿವೃದ್ಧಿ ಮರೆತ ಸದಸ್ಯರು ಬಣ ರಾಜಕೀಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮುಂಡರಗಿ ಗ್ರಾಮದ ಜನಸಂಖ್ಯೆ
552 ಪುರುಷರು
582 ಮಹಿಳೆಯರು
ಒಟ್ಟು;1,134

ಗ್ರಾಮದ ಹಳೆ ವಿದ್ಯುತ್‌ ಕಂಬಗಳಿಗೆ ಮಾತ್ರ ಬೀದಿ ದೀಪ ಅಳವಡಿಸಲಾಗಿದೆ. ಹೊಸ ಕಂಬಗಳನ್ನು ಹಾಕಿ ತಿಂಗಳುಗಳ ಕಳೆದರೂ ದೀಪಗಳೇ ಇಲ್ಲ. ಇದರಿಂದ ಕತ್ತಲಲ್ಲಿ ಸಂಚರಿಸುವಂತಾಗಿದೆ.
-ಮರಲಿಂಗ ದೋನಿ, ಗ್ರಾಮದ ಯುವಕ

***

ನಮ್ಮ ಏರಿಯಾದಲ್ಲಿ ನೀರಿನ ಸಮಸ್ಯೆ ಇದೆ. ಒಂದೊಂದು ದಿನ ನೀರು ಬರುವುದಿಲ್ಲ. ಸಂಬಂಧಿಸಿ ದವರಿಗೆ ಮಾಹಿತಿ ಇದ್ದರೂ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ರಾಜಕೀಯ ಮರೆತು ಅಭಿವೃದ್ಧಿಗೆ ಆದ್ಯತೆ ನೀಡಬೇಕು
- ಶರಣಪ್ಪ ಅಮಾನೋರ, ಗ್ರಾಮಸ್ಥ

***

ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಕಳಪೆ ಕಾಮಗಾರಿ ಮಾಡಿದ್ದರಿಂದ ಚತ್‌ ಉದುರಿದೆ. ಈ ಬಗ್ಗೆ ಸಂಬಂಧಿ ಸಿದವರಿಗೆ ಮಾಹಿತಿ ನೀಡಲಾಗಿದೆ
- ಶಾಂತಾ ಬಡಿಗೇರ, ಅಂಗನವಾಡಿ ಕಾರ್ಯಕರ್ತೆ

***

ಹೊಸದಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ರಚನೆಯಾಗಿದ್ದು, ಸಾಮಾನ್ಯ ಸಭೆಯಲ್ಲಿಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು
- ವಿಜಯಲಕ್ಷ್ಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT