ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ ಪಟ್ಟಣ ಪಂಚಾಯಿತಿ ‘ಕೈ’ ವಶ

Published 31 ಡಿಸೆಂಬರ್ 2023, 5:10 IST
Last Updated 31 ಡಿಸೆಂಬರ್ 2023, 5:10 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಹುಣಸಗಿ ಪಟ್ಟಣ ಪಂಚಾಯಿತಿ ಗದ್ದುಗೆ ‘ಕೈ’ ವಶವಾಗಿದೆ.

ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಶುರುವಾಯಿತು. ಮತ ಎಣಿಕೆಯ ಆರಂಭಿಕ ಅವಧಿಯಲ್ಲೆ ವಾರ್ಡ್‌ ನಂ.1 ಹಾಗೂ 9ರ ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್‌ ಸಂಭ್ರಮಕ್ಕೆ ಮುನ್ನುಡಿ ಬರೆಯಿತು. ಬಳಿಕ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಎಲ್ಲ ವಾರ್ಡ್‌ಗಳ ಫಲಿತಾಂಶ ಹೊರಬಿತ್ತು. ಒಟ್ಟು 16 ಸ್ಥಾನಗಳಲ್ಲಿ 14 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಪಟ್ಟಣದ ವಾರ್ಡ್ ಸಂಖ್ಯೆ 3 ಹಾಗೂ ವಾರ್ಡ್‌ ಸಂಖ್ಯೆ 5ರಲ್ಲಿ ಮಾತ್ರವೇ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಬಳಿಕ ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಲಾಯಿತು.

ಸಂಭ್ರಮಾಚರಣೆಯಲ್ಲಿ ಹಿರಿಯ ಮುಖಂಡ ನಾಗಣ್ಣ ದಂಡಿನ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ರಾಜಾ ಕುಮಾರನಾಯಕ, ಹಣಮಂತ್ರಾಯ ಮಕಾಶಿ, ಚನ್ನಯ್ಯಸ್ವಾಮಿ ಹಿರೇಮಠ, ಬಾಪುಗೌಡ ಪಾಟೀಲ, ಆರ್,ಎಂ.ರೇವಡಿ, ಬಸವರಾಜ ಸಜ್ಜನ್, ಶಾಂತಣ್ಣ ದೊರೆ, ಶಾಂತಪ್ಪ ಬಾಕಲಿ, ಗೋಪಾಲ ದೊರೆ ಅಮಲಿಹಾಳ, ಗುಂಡಪ್ಪ ಸೊಲ್ಲಾಪುರ, ರವಿ ಮಲಗಲದಿನ್ನಿ, ರಂಜಾನ್ ಖುರೇಶಿ, ಕರಿಮಸಾಬ್‌ ಮುನ್ಸಿ, ಗುಂಡು ಜಾಧವ ಇದ್ದರು.

ಕೈಪಾಳದಲ್ಲಿ ಸಂಭ್ರಮ:

ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯುತ್ತಿದ್ದಂತೆ ಮುಖಂಡರು, ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿತು.

‘ಹುಣಸಗಿ ಪಟ್ಟಣದ ಜನ ನೀರಿಕ್ಷೆಗೂ ಮೀರಿ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಾರೆ. ಹೊಸ ವರ್ಷಕ್ಕೂ ಮುನ್ನವೇ ಹೊಸವರ್ಷದ ಹುರುಪು ಮೂಡಿದ್ದು, ಚುನಾವಣೆಯಲ್ಲಿ ಭರವಸೆ ನೀಡಿದಂತೆ ಹುಣಸಗಿಯನ್ನು ಮಾದರಿ ಪಟ್ಟಣ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಪರಿಶ್ರಮ ನಮ್ಮ ಅಭ್ಯರ್ಥಿಗಳ ಗೆಲುವಿಗೆ ನೆರವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲನಾಯಕ ಹೇಳಿದರು.

‘ಶನಿವಾರ ಬಂದಿರುವ ಫಲಿತಾಂಶ ಪಕ್ಷದ ಮುಖಂಡರ ಸಂಘಟಿತ ಹೋರಾಟದ ಫಲ. ನಮ್ಮ ಲೆಕ್ಕಾಚಾರದಲ್ಲಿ 13 ಸ್ಥಾನಗಳು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಇನ್ನೊಂದು ಸ್ಥಾನದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಟ್ಟಣದ ಜನ ಬೋನಸ್ ನೀಡಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹರ್ಷ ವ್ಯಕ್ತಪಡಿಸಿದರು.

ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದ ಬಳಿಕ ಗೆದ್ದವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು
ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದ ಬಳಿಕ ಗೆದ್ದವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು
ನಮ್ಮ ಸರ್ಕಾರ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಹುಣಸಗಿ ಮತದಾರರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 14 ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು
ರಾಜಾ ವೆಂಕಟಪ್ಪನಾಯಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT