ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಿಘ್ನೇಶ್ವರನಿಗೆ ಕೊರೊನಾ ವಿಘ್ನ

ಗಣಪ ಬೇಡಿಕೆ, ಮಾರಾಟದಲ್ಲೂ ಕುಸಿತ, ನಿರ್ಬಂಧ ವಿಧಿಸಿದ ಸರ್ಕಾರ
Last Updated 21 ಆಗಸ್ಟ್ 2020, 14:32 IST
ಅಕ್ಷರ ಗಾತ್ರ

ಯಾದಗಿರಿ:ವಿಘ್ನೇಶ್ವರನಿಗೆ ಈ ಬಾರಿ ಕೊರೊನಾ ಅಡ್ಡಿಯಾಗಿದೆ. 4 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಎಂದು ಸರ್ಕಾರವೇ ನಿರ್ದೇಶನ ನೀಡಿದ್ದರಿಂದ ಬೇಡಿಕೆ ಮತ್ತು ಮಾರಾಟದಲ್ಲೂ ಗಣನೀಯವಾಗಿ ಕುಸಿತವಾಗಿದೆ.

ಮೊದಲಿಗೆ ಸಾರ್ವಜನಿಕ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳಿತ್ತು. ವಿರೋಧದ ನಂತರ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರಿಂದ ಮಾರಾಟಗಾರರು ದೊಡ್ದ ಮಟ್ಟದಲ್ಲಿ ಗಣೇಶ ವಿಗ್ರಹಗಳನ್ನು ಖರೀದಿಸಿಲ್ಲ. ಒಂದು ಅಡಿ, ಎರಡು ಅಡಿ ಗಣೇಶ ಮೂರ್ತಿಗಳು ಮಾತ್ರ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.

ಮಣ್ಣಿನ ಗಣಪತಿ ಮೂರ್ತಿಗಳು₹100ರಿಂದ ₹1000 ರವರೆಗೆ ಮಾರಾಟವಾಗುತ್ತಿವೆ. ಪಿಒಪಿ ಗಣೇಶ ಮೂರ್ತಿಗಳು ₹200 ರಿಂದ ₹2000 ತನಕ ಬೆಲೆ ಇದೆ. ವಿವಿಧ ಆಕಾರಗಳಲ್ಲಿ ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ. ಆದರೆ, ಬೇಡಿಕೆ ಇಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.

‘ಕಳೆದ ವರ್ಷ600 ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡಲಾಗಿತ್ತು. ಈ ಬಾರಿ ಕೊರೊನಾ ಕಾರಣದಿಂದ ಕೇವಲ 300 ತರಲಾಗಿದೆ. ಬೆಳಿಗ್ಗೆಯಿಂದ 50 ಮಾತ್ರ ಮಾರಾಟವಾಗಿವೆ. ಬೇಡಿಕೆಯೂ ಇಲ್ಲ’ ಎಂದು ಮೂರ್ತಿ ಮಾರಾಟಗಾರ ರಘು ಚವ್ಹಾಣ್‌ ಹೇಳುತ್ತಾರೆ.

ನಗರದ ಸ್ಟೇಷನ್ ರಸ್ತೆ, ಜಿಲ್ಲಾಸ್ಪತ್ರೆ ರಸ್ತೆ, ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಚಿಕ್ಕ ಗಾತ್ರದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಗೊಂದಲದ ನಿರ್ಧಾರದಿಂದ ಹೆಚ್ಚಿನ ವ್ಯಾಪಾರಿಗಳು ಮಾರಾಟಕ್ಕೆ ಮೂರ್ತಿಗಳನ್ನು ಇಡದಿರುವುದು ಕಂಡು ಬಂತು.

‘ಈ ಬಾರಿ ಕೊರೊನಾ, ಮಳೆ ಇದ್ದಿದ್ದರಿಂದ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯವಾಗಿಲ್ಲ. ಅಲ್ಲದೆ ಬೇಡಿಕೆಯೂ ಕಡಿಮೆ ಇದೆ. ಸೊಲ್ಲಾಪುರದಿಂದ ಚಿಕ್ಕಗಾತ್ರದ ಪಿಒಪಿ ಮತ್ತು ಮಣ್ಣಿನ ಮೂರ್ತಿಗಳನ್ನು ತಂದಿದ್ದೇವೆ. ಆದರೂ ಗ್ರಾಹಕರು ಕಡಿಮೆಸಂಖ್ಯೆಯಲ್ಲಿ ಖರೀದಿಗೆ ಬಂದಿದ್ದಾರೆ. ಶನಿವಾರ ಗಣೇಶ ಪ್ರತಿಷ್ಠಾಪಿಸುವುದರಿಂದ ಅಂದು ಹೆಚ್ಚಿನ ವ್ಯಾಪಾರವಾಗುವ ನಿರೀಕ್ಷೆ ಇದೆ’ ಎಂದು ವಿಶ್ವನಾಥ ಕುಂಬಾರ ಹೇಳಿದರು.

ಮೆರುಗು ಕಳೆದುಕೊಂಡ ಹಬ್ಬ: ಗಣಪನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಅಲ್ಲದೆ ವಿಘ್ನ ನಿವಾರಕ ಎಂದು ನಂಬಿಕೆ ಇದೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ವಾರ್ಡ್‌ಗೆ ಒಂದು ಸಾರ್ವಜನಿಕ ಗಣಪ ಪ್ರತಿಷ್ಠಾಪಿಸಲು ಅವಕಾಶವಿದೆ. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ, ಪೊಲೀಸ್‌ ಇಲಾಖೆಗಳು ಎಚ್ಚರಿಸಿವೆ. ಇದರಿಂದ ಹಬ್ಬದ ಸಂಭ್ರಮ ಕಳೆಗುಂದಿದೆ. ಹೆಚ್ಚಿನ ಜನಸಂಖ್ಯೆ ಸೇರುವಂತಿಲ್ಲ ಎಂಬುದು ಸೇರಿದಂತೆ ಹಲವಾರು ನಿಬಂಧನೆಗಳನ್ನು ಸೂಚಿಸಲಾಗಿದೆ. ಇದರಿಂದ ಅನೇಕ ಮಂಡಳಿಗಳು ವಿಗ್ರಹ ಕೂರಿಸಲು ಬಂದಿಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಅರಿಶಿಣ ಗಣೇಶ ಮೂರ್ತಿ ಪೂಜಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈ ಬಾರಿ ಅರಿಶಿಣ ಗಣೇಶ ಮೂರ್ತಿ ಪೂಜಿಸಲು ಜಾಗೃತಿ ಮೂಡಿಸಲಾಗಿದೆ ಎಂದುಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿಸಣ್ಣ ವೆಂಕಟೇಶ ಹೇಳುತ್ತಾರೆ.

ಆಕಾಶವಾಣಿ, ಬಸ್, ಪತ್ರಿಕೆಗಳಲ್ಲಿ ಸ್ಟಿಕರ್‌ ಅಂಟಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಸುಪ್ರೀಂ ಕೋರ್ಟ್‌ನ 2016ರಆದೇಶದಂತೆ ಯಾವುದೇ ಪಿಒಪಿ ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಇಂಥ ಮೂರ್ತಿಗಳನ್ನು ಮಾರಾಟ ಮಾಡಬಾರದು. ಎಲ್ಲರೂ ಪರಿಸರ ಸ್ನೇಹಿ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ಅರಿಶಿಣ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮನೆಯಲ್ಲಿ ವಿಸರ್ಜಿಸಬೇಕು ಎನ್ನುತ್ತಾರೆ ಅವರು.

***

ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿದ್ದು, ಎಲ್ಲರೂ ಪರಿಸರ ಸ್ನೇಹಿ ಗಣೇಶ ಹಬ್ಬ ಮಾಡಬೇಕು. ನಾವು ಮಣ್ಣಿನ ಗಣಪತಿ ಖರೀದಿ ಮಾಡಿದ್ದೇವೆ

-ಅಮಿತ್ ಕುಮಾರ ಬಾಕ್ರೆ, ಗ್ರಾಹಕ

***

ಕೊರೊನಾ ಕಾರಣದಿಂದ ಮೂರ್ತಿಗಳನ್ನು ಹೆಚ್ಚು ತಯಾರು ಮಾಡಿಲ್ಲ. ಒಂದರಿಂದ ಎರಡು ಅಡಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ

-ಈರಣ್ಣ ಕುಂಬಾರ, ಮಾಲೀಕ

***

ನಗರದ ಲುಂಬಿನಿ ವನದ ಬಳಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ 5 ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ಅರ್ಜಿ ಬಂದಿವೆ

-ಬಕ್ಕಪ್ಪ ಹೊಸಮನಿ, ಪ್ರಭಾರಿ ನಗರಸಭೆ ಪೌರಾಯುಕ್ತ

***

ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಪಿಒಪಿ ಗಣಪತಿ ಮಾರಾಟಕ್ಕೆ ನಿಷೇಧವಿದೆ

ಸಣ್ಣ ವೆಂಕಟೇಶ ಸನಬಾಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT