ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ವೈದ್ಯರ ಕೊರತೆ ನೆಪ; ಹಳ್ಳಿಗಳಲ್ಲಿ ಚಿಕಿತ್ಸೆಯೇ ದುರ್ಲಭ

ಗ್ರಾಮೀಣ ಆರೋಗ್ಯ ಸ್ಥಿತಿಗತಿ
Last Updated 28 ಮೇ 2021, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್‌ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ.

***

ಯಾದಗಿರಿ: ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರು; ಆಸ್ಪತ್ರೆ ಇದ್ದರೂ ಸೌಕರ್ಯ ಇಲ್ಲವೆಂದು ನಗರ ಪ‍್ರದೇಶಗಳಿಗೆ ಶಿಫಾರಸು ಮಾಡಿ ಸಾಗಹಾಕುವ ಪರಿಪಾಠ, ತುರ್ತು ಚಿಕಿತ್ಸೆ ಸಿಗದೇ ರೋಗಿಗಳ ಪರದಾಟ–ಇವು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಕಂಡು ಬರುವ ಚಿತ್ರಣ.

ಜಿಲ್ಲೆಯ ವಡಗೇರಾ ತಾಲ್ಲೂಕು ಕೇಂದ್ರವಾದರೂ ಸಮುದಾಯ ಆರೋಗ್ಯ ಕೇಂದ್ರ ಹೊಂದಿದೆ.ಇಲ್ಲಿಗೆ ಬರುವ ರೋಗಿಗಳನ್ನುಯಾದಗಿರಿ, ಶಹಾಪುರ, ರಾಯಚೂರು ಆಸ್ಪತ್ರೆಗಳಿಗೆ ತೆರಳುವಂತೆ ‘ಶಿಫಾರಸು’ ಮಾಡುವುದು ಸಾಮಾನ್ಯವಾಗಿದೆ. ವೈದ್ಯರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ‘ಪ್ರಜಾವಾಣಿ’ ಪ್ರತಿನಿಧಿ ಬೆಳಿಗ್ಗೆ 8 ಗಂಟೆಗೆ ವಡಗೇರಾ ಆಸ್ಪತ್ರೆ ಬಳಿ ಹೋಗಿ ವಿಚಾರಿಸಿದಾಗ ‘ವೈದ್ಯರು ಇನ್ನೂ ಬಂದಿಲ್ಲ’ ಎನ್ನುವ ಉತ್ತರ ಸಿಕ್ಕಿತು. 9 ಗಂಟೆಯಾದರೂ ಆಸ್ಪತ್ರೆಯತ್ತ ವೈದ್ಯರ ಸುಳಿವೇ ಇರಲಿಲ್ಲ.

‘ರಾತ್ರಿ ವೇಳೆ ವೈದ್ಯರು ಇಲ್ಲದ್ದರಿಂದ, ಇತ್ತೀಚೆಗೆ ತುರ್ತು ಚಿಕಿತ್ಸೆಗಾಗಿ ಬಂದ ರೋಗಿಯೊಬ್ಬರನ್ನು ಶಹಾಪುರ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಇಲ್ಲಿಂದ 60 ಕಿ.ಮೀ ದೂರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಬೇಕಾಯಿತು. ಅನುಕೂಲ ಇದ್ದವರು ಹೇಗೋ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ. ಆದರೆ, ಬಡವರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವೇ ಗತಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಫಕೀರ್‌ ಅಹ್ಮದ್‌ ವಡಗೇರಾ.

ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಪರಿಸ್ಥಿತಿಯೂ ಇದೇ ರೀತಿ ಇದೆ. ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗದಿರುವುದರಿಂದ ಗುರುಮಠಕಲ್‌, ಸೈದಾಪುರ, ವಡಗೇರಾ, ಶಹಾಪುರ ತಾಲ್ಲೂಕುಗಳ ಜನತೆ ರಾಯಚೂರು ಆಸ್ಪತ್ರೆಗಳತ್ತ ಮುಖ ಮಾಡುವುದು ತಪ್ಪಿಲ್ಲ. ಸುರಪುರ ತಾಲ್ಲೂಕಿನವರು ಕಲಬುರ್ಗಿಗೆ ಮತ್ತು ಹುಣಸಗಿ ತಾಲ್ಲೂಕಿನವರು ವಿಜಯಪುರದ ಆಸ್ಪತ್ರೆಗಳಿಗೆ ತೆರಳುವುದು ಸಾಮಾನ್ಯ.

ಆಮ್ಲಜನಕಹಾಸಿಗೆ ಭರ್ತಿ: ಶಹಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆಸ್ಪತ್ರೆಯಲ್ಲಿಆಮ್ಲಜನಕ ಇರುವ ಹಾಸಿಗೆಗಳು ಭರ್ತಿಯಾಗಿವೆ.ಜಿಲ್ಲೆಯಲ್ಲಿಯೇ ಅತಿ ಹೆಚ್ಚು 85ಕ್ಕೂ ಹೆಚ್ಚು ಜನ ಇದೇ ತಾಲ್ಲೂಕಿನಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಸುರಪುರ ಕೋವಿಡ್‌ ಆಸ್ಪತ್ರೆಯಲ್ಲಿ ಐಸಿಯು ಕೊರತೆ ಇದೆ. 52 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಇಲ್ಲಿಯೂ ವೈದ್ಯರಕೊರತೆಇದೆ.

ಯಾದಗಿರಿ ಜಿಲ್ಲೆಯ ಸುರಪುರ ಕೋವಿಡ್‌ ಆಸ್ಪತ್ರೆಯಲ್ಲಿಚಿಕಿತ್ಸೆನೀಡುತ್ತಿರುವ ದಾದಿ
ಯಾದಗಿರಿ ಜಿಲ್ಲೆಯ ಸುರಪುರ ಕೋವಿಡ್‌ ಆಸ್ಪತ್ರೆಯಲ್ಲಿಚಿಕಿತ್ಸೆನೀಡುತ್ತಿರುವ ದಾದಿ

ಸ್ಟಾಫ್‌ ನರ್ಸ್‌ಗಳ ಮೇಲೆ ಭಾರ: ಬಹುತೇಕ ಕೋವಿಡ್‌ ಆಸ್ಪತ್ರೆಗಳಲ್ಲಿಸ್ಟಾಫ್‌ ನರ್ಸ್‌ಗಳ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‌ಸ್ಟಾಫ್ ನರ್ಸ್‌ಗಳೇ ಈಗ ‘ವೈದ್ಯ’ರಂತೆ ಕೆಲಸ ಮಾಡುತ್ತಿದ್ದಾರೆ.

‘ಸರ್ಕಾರಿ ಆಸ್ಪತ್ರೆಗಳ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಸತಿ ಗೃಹಗಳಲ್ಲಿ ವೈದ್ಯರು ವಾಸ ಮಾಡುತ್ತಿಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಇದ್ದು, ಕರೆ ಸ್ವೀಕರಿಸಿ ಅಲ್ಲೇ ಸಲಹೆ ನೀಡುವ ವೈದ್ಯರು ಹೆಚ್ಚಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ’ ಎನ್ನುವುದು ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಕೇಳಿಬರುತ್ತಿರುವ ದೂರು.

ಹಳ್ಳಿಗಳೇ ಕೊರೊನಾ ಹಾಟ್‌ಸ್ಪಾಟ್‌: ಗ್ರಾಮಗಳ ಕಟ್ಟೆಗಳ ಮೇಲೆ ವೃದ್ಧರ ಗುಂಪು ಹರಟೆಹೊಡೆಯುತ್ತ ಕುಳಿತುಕೊಳ್ಳುವುದು, ಯುವಕರು ಮಾಸ್ಕ್‌ ಧರಿಸದೇ ಸಂಚಾರ ಮಾಡುವುದು ಗ್ರಾಮೀಣ ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳಾಗಿವೆ.

ಜಿಲ್ಲೆಯಲ್ಲಿ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ ಕೇವಲ ನಗರ, ಪಟ್ಟಣಕ್ಕೆ ಸೀಮಿತವಾಗಿದೆ. ಹಳ್ಳಿಗಳಲ್ಲಿ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ.

‘ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಒಬ್ಬ ವೈದ್ಯರಿಗೆ ನಾಲ್ಕೈದು ಆಸ್ಪತ್ರೆಗಳ ಉಸ್ತುವಾರಿ ನೀಡಲಾಗಿದೆ. ಇದರಿಂದ ಎಲ್ಲಿಯೂ ಸಮರ್ಪಕ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಒತ್ತಡವೂ ಹೆಚ್ಚಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ವೈದ್ಯಾಧಿಕಾರಿಯೊಬ್ಬರು ಹೇಳಿದರು.

ಹೆಸರಿಗೆ ಮಾತ್ರ ಕೋವಿಡ್‌ಕೇರ್‌ ಸೆಂಟರ್

ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆ, ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಕಾಲೇಜು, ಸುರಪುರ ತಾಲ್ಲೂಕಿನ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ, ವಡಗೇರಾ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್ ಆರಂಭಿಸಲಾಗಿದೆ.

‘ವಡಗೇರಾ ಕೇಂದ್ರದಲ್ಲಿ ಯಾವುದೇ ಸೌಲಭ್ಯ ಇಲ್ಲ’ ಎನ್ನುವುದು ಕೋವಿಡ್‌ನಿಂದ ಗುಣಮುಖರಾದ ಮಲ್ಲಪ್ಪ ಪೂಜಾರಿ ಹೇಳುವ ಮಾತು.

31 ತಜ್ಞ ವೈದ್ಯರ ಹುದ್ದೆ ಖಾಲಿ
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್‌ ವೈದ್ಯರ ಕೊರತೆ ಜೊತೆಗೆ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಫಿಜಿಷಿಯನ್‌, ಅರಿವಳಿಕೆ ಸೇರಿದಂತೆ 31 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯೊಂದರಲ್ಲೇ 5 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ.

***

ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ರಾತ್ರಿ ವೇಳೆ ಕೇವಲ ನರ್ಸ್‌ಗಳ ಮೇಲೆ ಆಸ್ಪತ್ರೆ ನಡೆಯುತ್ತಿದೆ. ರಾತ್ರಿ ವೇಳೆ ದೂರದ ನಗರಗಳಿಗೆ ತೆರಳಲು ಸಮಸ್ಯೆ ಆಗುತ್ತಿದೆ.
-ಸಂತೋಷ ಬೊಜ್ಜಿ, ರೈತ ಮುಖಂಡ ವಡಗೇರಾ

***

ಜಿಲ್ಲೆಯಲ್ಲಿ ಸ್ಪಲ್ಪ ಪ್ರಮಾಣದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ರೋಗಿಗಳು ಇಲ್ಲದಿದ್ದರಿಂದ ವಡಗೇರಾ ಕೋವಿಡ್‌ ಕೇರ್‌ ಸೆಂಟರ್‌ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
-ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

***

ಹಳ್ಳಿಗಳು ಕೊರೊನಾ ಮುಕ್ತವಾಗಲು ಟಾಸ್ಕ್‌ ಫೋರ್ಸ್‌ ಸಮಿತಿ ಕಾರ್ಯನಿರ್ವಹಿಸಬೇಕು. ಪ್ರತಿ ದಿನ ಗ್ರಾಮಗಳಿಂದ ವರದಿ ತರಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
-ಚಂದ್ರಶೇಖರಗೌಡ ಮಾಗನೂರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ

***

ಕೊನೆ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ಬರುವುದರಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಕೆಲಸ ಮಾಡಲಾಗುತ್ತಿದೆ.
-ಡಾ.ರಮೇಶ ಗುತ್ತೇದಾರ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಶಹಾಪುರ

***

ಗುಂಪಾಗಿ ಕುಳಿತು ಹರಟೆ ಹೊಡೆಯುವುದರಿಂದ ಮನೆಯಲ್ಲಿರುವ ವೃದ್ಧರೂ ಆರೋಗ್ಯ ಸಮಸ್ಯೆ ಅನುಭವಿಸಬೇಕಾಗುತ್ತದೆ.
-ಡಾ.ಹರ್ಷರ್ಧನ ರಫಗಾರ, ಸುರಪುರ ಕೋವಿಡ್‌ ಸೆಂಟರ್‌ ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT