ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ: ಶರಣಬಸಪ್ಪ ಕೋಟೆಪ್ಪಗೊಳ

ಜಿಲ್ಲಾ ಮಕ್ಕಳ (ಕಲ್ಯಾಣ) ರಕ್ಷಣಾ ಸಮಿತಿಯ ಸಭೆಯಲ್ಲಿ ಎಡಿಸಿ ಕೋಟೆಪ್ಪಗೊಳ
Published 7 ಜೂನ್ 2024, 16:17 IST
Last Updated 7 ಜೂನ್ 2024, 16:17 IST
ಅಕ್ಷರ ಗಾತ್ರ

ಯಾದಗಿರಿ: ‘ಬಾಲ್ಯವಿವಾಹ ಪ್ರಕರಣ ಕಂಡುಬಂದಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಾಲ್ಯ ವಿವಾಹ ನಿಷೇಧಾಧಿಕಾರಿ ಅದನ್ನು ತಡೆಯಬೇಕು. ಪ್ರಕರಣ ಕಂಡುಬಂದಾಗ ಸಿಡಿಪಿಒಗಳು ತಕ್ಷಣವೇ ಮುಂದಾಳತ್ವ ವಹಿಸಿಕೊಂಡು ಸಂಬಂಧಿಸಿದ ಇಲಾಖೆಗಳ ಸಮನ್ವಯದ ಜೊತೆಗೆ ಬಾಲ್ಯವಿವಾಹ ತಡೆಗೆ ಅರಿವು ಮೂಡಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ (ಕಲ್ಯಾಣ) ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಕ್ರಮಬದ್ಧ ರೀತಿಯಲ್ಲಿ ಪೋಷಣೆ ಒದಗಿಸಿ, ಮಕ್ಕಳ ಮೇಲೆ ದೌರ್ಜನ್ಯ ಕಂಡುಬಂದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 2024 -25ನೇ ಸಾಲಿನಲ್ಲಿ ಒಟ್ಟು 59 ಬಾಲ್ಯವಿವಾಹಗಳನ್ನು ತಡೆದು ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಬಾಲ್ಯ ವಿವಾಹ ತಡೆದ ಮಕ್ಕಳು ಸಮಿತಿಯ ಮುಂದೆ ಅನುಪಾಲನೆಯಲ್ಲಿರುತ್ತಾರೆ. ಅಂಗನವಾಡಿ ಮೇಲ್ವಿಚಾರಕಿಯರ ಮೂಲಕ ಅನುಪಾಲನೆಯಲ್ಲಿ ಇರುತ್ತಾರೆ’ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ತರಗತಿಗೆ ಕರೆತರಲು ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದರು.

ಸಂಕಷ್ಟದಲ್ಲಿ ಇರುವ ಮಕ್ಕಳಿಗೆ ಸಹಾಯ: ‘ರಸ್ತೆಯ ಮೇಲೆ ವಾಸಿಸುವ ಕುಟುಂಬದ ಮಕ್ಕಳು, ತಂದೆ-ತಾಯಿ ಕಳೆದುಕೊಂಡು ಬೀದಿಮೇಲೆ ಅಲೆಯುವ ಮಕ್ಕಳು, ದೈಹಿಕ ಮತ್ತು ಮಾನಸಿಕ, ಅಂಗವಿಕಲ ಮಕ್ಕಳು, ಬಾಲ ಕಾರ್ಮಿಕರು, ಕೆಲಸ ಮಾಡುವ ಮಕ್ಕಳು, ಭಿಕ್ಷಾಟನೆಯ ಮಕ್ಕಳು, ಚಿಂದಿ ಆಯುವ ಮಕ್ಕಳು, ರೈಲ್ವೆ ನಿಲ್ದಾಣದಲ್ಲಿ ಅಲೆದಾಡುವ ಮಕ್ಕಳು, ದೇವಸ್ಥಾನ ಬಸ್ ನಿಲ್ದಾಣದಲ್ಲಿ ವಾಸಮಾಡುವ ಮಕ್ಕಳು, ಕಟ್ಟಡ ಕೆಲಸ ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳು, ಮಾದಕ ವ್ಯಸನಗಳಿಗೆ ಒಳಗಾಗುತ್ತಿರುವ ಮಕ್ಕಳು, ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ಸ್ವಚ್ಛಗೊಳಿಸುತ್ತಿರುವ ಮಕ್ಕಳು, ಹೊಲಗದ್ದೆಗಳಲ್ಲಿ ಕೂಲಿಗಾಗಿ ಹೋಗುವ ಮಕ್ಕಳನ್ನು ರಕ್ಷಣೆ ಮಾಡಿದ ನಂತರ ಕರೆದುಕೊಂಡು ಬಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಿಪಡಿಸುತ್ತಾರೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಣಮಂತ್ರಾಯ ಕರಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಪ್ರೇಮಮೂರ್ತಿ ಕೆ, ಮಕ್ಕಳ ರಕ್ಷಣಾಧಿಕಾರಿ ದಶರಥನಾಯಕ, ಕಾನೂನು ಅಧಿಕಾರಿ ರಾಜೇಂದ್ರಕುಮಾರ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ನಾಗಮ್ಮ ಹಿರೇಮಠ, ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT